ಸಾರಾಂಶ
ಕಾರಟಗಿ: ತುಂಗಭದ್ರಾ ಎಡದಂಡೆ ಎಡನಾಲೆಯ 31 ಮತ್ತು 32ನೇ ವಿತರಣಾ ಕಾಲುವೆ ಕೆಳಭಾಗದ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಲ್ಲಿನ ನೀರಾವರಿ ಇಲಾಖೆಯ ಉಪವಿಭಾಗ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.
31ನೇ ವಿತರಣಾ ಕಾಲುವೆಗಳ ರೈತರಿಗೆ ಹಾಗೂ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಬಹುಮುಖ್ಯವಾಗಿ ಈಳಿಗನೂರು, ಉಳೇನೂರು, ಬೆನ್ನೂರು, ನಂದಿಹಳ್ಳಿ, ಯರಡೋಣಾ, ಬೂದುಗುಂಪಾ, ತಿಮ್ಮಾಪುರ, ಹಾಲಸಮುದ್ರ, ಸಿದ್ದಾಪುರ, ಕೊಟ್ನೆಕಲ್, ಕಿಂದಿಕ್ಯಾಂಪ್, ಚನ್ನಳ್ಳಿ, ಮಾವಿನಮಡಗು, ಸಿದ್ದರಾಂಪುರ ಮತ್ತು ವಿವಿಧ ಗ್ರಾಮದ ಕೆಳಭಾಗದ ರೈತರ ಬೆಳೆಗಳಿಗೆ ನೀರು ಕಾಣದೆ ಒಣಗುತ್ತಿವೆ. ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೆಳಭಾಗದ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಗ್ರೇಡ್-2 ತಹಸೀಲ್ದಾರರ ಮೂಲಕ ಸಚಿವ ಶಿವರಾಜ ಎಸ್. ತಂಗಡಗಿ, ಮುನಿರಾಬಾದ್ ನೀರಾವರಿ ನಿಗಮ ಕೇಂದ್ರ ಕಚೇರಿಯ ಮುಖ್ಯ ಎಂಜಿನಿಯರಿಗೆ ಮನವಿ ಮಾಡಿದರು.ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಕೆಳಭಾಗದ ರೈತರಿಗೆ ಪ್ರತಿ ಬೆಳೆಯೂ ಸರಿಯಾಗಿ ನೀರು ದೊರೆಯದೆ ಅನ್ಯಾಯವಾಗುತ್ತಿದೆ. ಈ ವಿಚಾರವಾಗಿ ರೈತರು ಅನೇಕ ಬಾರಿ ಇಲ್ಲಿನ ನೀರಾವರಿ ಅಧಿಕಾರಿಗಳಿಗೆ ಎಂಜಿನಿಯರ್‌ಗಳಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಅಲ್ಲದೆ ಸಚಿವರು ಖುದ್ದಾಗಿ ರೈತರ ಪರವಾಗಿ ನಿಂತು ಕೆಳಭಾಗದ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವ ಕೆಲಸ ಮಾಡಬೇಕಿದೆ. ಡ್ಯಾಮ್ ಭರ್ತಿಯಾದರೂ, ಕೆಳಭಾಗದ ರೈತರಿಗೆ ಆತಂಕ ಉಂಟಾಗುತ್ತಿದೆ. ನೀರಿದ್ದರೂ ಬೆಳೆ ನೀರು ಕಾಣದೆ ಒಣಗುತ್ತಿದೆ. ಸಮರ್ಪಕವಾಗಿ ನೀರು ಒದಗಿಸಲು ಇಲ್ಲಿನ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಕೂಡಲೇ ಸೂಕ್ತ ಪರಿಹಾರ ಸಚಿವರು ಸಂಬಂಧಪಟ್ಟ ಅಧಿಕಾರಿಗಳು ಒದಗಿಸಿ ಕೊಡಬೇಕಿದೆ. ಒಂದು ವೇಳೆ ಎರಡು ದಿನಗಳ ಒಳಗಾಗಿ ಕೆಳಭಾಗದ ರೈತರಿಗೆ ಸಮರ್ಪಕ ನೀರು ದೊರೆಯದಿದ್ದರೆ ಸಂಘಟನಾ ಪದಾಧಿಕಾರಿಗಳು ರೈತರು ಬಾಗಿನ ಅರ್ಪಿಸಲು ಬರುತ್ತಿರುವ ಮುಖ್ಯಮಂತ್ರಿ ಕಾರನ್ನು ಅಡ್ಡಗಟ್ಟಿ, ಅದೇ ಸ್ಥಳದಲ್ಲಿ ಪ್ರತಿಭಟನೆಗೂ ಕುಳಿತುಕೊಳ್ಳಲು ಸಿದ್ದರಿದ್ದೇವೆ. ಕೂಡಲೇ ಪರಿಹಾರವನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಸಂಘಟನಾ ಪದಾಧಿಕಾರಿಗಳು ಹಾಗೂ ರೈತ ಮುಖಂಡರಾದ ಪಾಲಾಕ್ಷಿಗೌಡ, ರುದ್ರಗೌಡ, ಶರಣಪ್ಪ ಸುಗ್ಗನಹಳ್ಳಿ, ನಾರಾಯಣ ಈಡಿಗೇರ್, ಮರಿಯಪ್ಪ ಸಾಲೋಣಿ, ದೊಡ್ಡನಗೌಡ, ನಾಗರಾಜ ಈಳಿಗನೂರು, ಬಸವರಾಜ, ಶಿವಪ್ಪ ಹೂಗಾರ, ಯಮನಪ್ಪ ನಾಯಕ, ಮುರುಡಬಸಪ್ಪ, ಗಾದಿಲಿಂಗಪ್ಪ, ಕಲಿಕೇರಿ ವೀರೇಶ್, ಫಕೀರೇಶ, ಬಿ. ಶ್ರೀನಿವಾಸು, ವೀರೇಶ, ಹನುಮೇಶ, ಭರಮಪ್ಪ, ರಾಘವೇಂದ್ರ, ನಾಗರಾಜ ಇದ್ದರು.