ನಿರಂತರ ಐದು ಗಂಟೆ ವಿದ್ಯುತ್ ಆಗ್ರಹಿಸಿ ಬೃಹತ್ ಪ್ರತಿಭಟನೆ
KannadaprabhaNewsNetwork | Published : Oct 22 2023, 01:01 AM IST
ನಿರಂತರ ಐದು ಗಂಟೆ ವಿದ್ಯುತ್ ಆಗ್ರಹಿಸಿ ಬೃಹತ್ ಪ್ರತಿಭಟನೆ
ಸಾರಾಂಶ
ನಿರಂತರ ಐದು ಗಂಟೆ ವಿದ್ಯುತ್ ಸಂಪರ್ಕ ಕಲ್ಪಸಬೇಕು ಎಂದು ಆಗ್ರಹಿಸಿ ಹೆಸ್ಕಾಂ ಕಚೇರಿಗೆ ರೈತರು ಬೀಗ ಜಡಿದು ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಇಂಡಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಸಾತಪುರ ಗ್ರಾಮದ ಮತ್ತು ಸುತ್ತಮುತ್ತಲಿನ ಜಮೀನದಲ್ಲಿನ ವಸತಿ ರೈತರ ಜಮೀನುಗಳಿಗೆ ನಿರಂತರ ಐದು ಗಂಟೆ ವಿದ್ಯುತ್ ಸಂಪರ್ಕ ಕಲ್ಪಸಬೇಕು ಎಂದು ಆಗ್ರಹಿಸಿ ಹೆಸ್ಕಾಂ ಕಚೇರಿಗೆ ರೈತರು ಬೀಗ ಜಡಿದು ಪ್ರತಿಭಟಿಸಿದರು. ರೈತರಾದ ಮಾಳಪ್ಪ ಗುಡ್ಲ, ಶರತಗೌಡ ಪಾಟೀಲ, ಪದ್ಮಣ್ಣ ಗುಡ್ಲ, ಹಣಮಂತಗೌಡ ಗುಡ್ಲ, ಅಶೋಕ ಅಕಲಾದಿ, ಸುರೇಶ ಕೋಳೆಕರ ಮಾತನಾಡಿ, ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಕಡಿಮೆ ವೋಲ್ಟೇಜ್ ನೀಡುವುದರಿಂದ ಬೋರುಗಳಿಂದ ನೀರು ಬರುತ್ತಿಲ್ಲ ಮತ್ತು ಬಾವಿಗಳ ಮೋಟಾರುಗಳು ಸುಡುತ್ತಿವೆ. ಈ ಮೊದಲು ಹಗಲು ನಾಲ್ಕು ತಾಸು ರಾತ್ರಿ 3 ತಾಸು ವಿದ್ಯುತ್ ನೀಡುತ್ತಿದ್ದರು. ಈಗ ಎರಡು ಗಂಟೆ ಕೂಡ ವಿದ್ಯುತ್ನೀ ನೀಡುತ್ತಿಲ್ಲ. ಇದರಿಂದ ರೈತರ ಬೆಳೆಗಳು ಒಣಗುತ್ತಿವೆ. ಇತ್ತ ಮಳೆಯೂ ಬರದೇ ರೈತರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಕಾರಣ ಹಗಲು ಹೊತ್ತು ನಿರಂತರ ಐದು ಗಂಟೆ ನೀಡಬೇಕು. ಈಗಾಗಲೇ ಸರಕಾರ ನಿರಂತರ ಐದು ಗಂಟೆ ವಿದ್ಯುತ್ ನೀಡಲು ಒಪ್ಪಿಕೊಂಡಿದೆ ಎಂದರು. ಮನವಿ ಸ್ವೀಕರಿಸಿ ಮಾತನಾಡಿದ ಎಇಇ ಎಸ್.ಆರ್.ಮೆಂಡೆಗಾರ ನಾಳೆಯಿಂದಲೇ ಹಗಲು ಮೂರು ಗಂಟೆ ಮತ್ತು ರಾತ್ರಿ ಎರಡು ಗಂಟೆ ವಿದ್ಯುತ್ ನೀಡುವದಾಗಿ ತಿಳಿಸಿದರು. ಪಟ್ಟು ಬಿಡದ ರೈತರು ನಿರಂತರ ಹಗಲು ಹೊತ್ತು ಐದು ತಾಸು ನೀಡಲು ಪ್ರತಿಭಟನೆ ಮುಂದುವರೆಸಿದರು. ಮೇಲಧಿಕಾರಿಗಳ ಒಪ್ಪಿಗೆ ಪಡೆದು ನೀಡುವುದಾಗಿ ಹೆಸ್ಕಾಂ ಎಇಇ ಭರವಸೆ ನೀಡಿದರು. ಅದಲ್ಲದೇ ಹೆಸ್ಕಾಂ ಸೆಕ್ಷನ್ ಅಧಿಕಾರಿ ರೈತರ ಕರೆಗಳನ್ನು ಸ್ವೀಕರಿಸುವುದಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಸಯಿದಪ್ಪ ವಾಲೀಕಾರ, ಸೋಮಣ್ಣ ಗುಡ್ಲ, ಸತ್ತೆಪ್ಪ ಅಹಿರಸಂಗ, ಲಾಯಪ್ಪ ಅಹಿರಸಂಗ, ಶಿವಯೋಗಪ್ಪ ಸಾತಲಗಾಂವ, ಯಲ್ಲಪ್ಪ ಸಾತಲಗಾಂವ, ಬಾಬು ವಾಲಿಕಾರ, ಶ್ರೀಮಂತ ಕರ್ಜಗಿ ಇತರರು ಇದ್ದರು.