ಕನ್ನಡಪ್ರಭ ವಾರ್ತೆ ಬೈಲಹೊಂಗಲ ತಾಲೂಕಿನ ಮರಕುಂಬಿ ಬಳಿ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ-748ಎನಲ್ಲಿ ರೈತರಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ಸೂಕ್ತ ಅಂಡರ್‌ಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಮರಕುಂಬಿ ಬಳಿ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ-748ಎನಲ್ಲಿ ರೈತರಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ಸೂಕ್ತ ಅಂಡರ್‌ಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಬೈಲಹೊಂಗಲ-ಮುರಗೋಡ ರಸ್ತೆಯ ಮರಕುಂಬಿ ಗ್ರಾಮದ ಹಾರುಗೊಪ್ಪ ಕ್ರಾಸ್ ಹತ್ತಿರ ಹಾಯ್ದು ಹೋಗಿರುವ ಹೈದ್ರಾಬಾದ್‌-ಪಣಜಿ ಗ್ರೀನ್ ಕಾರಿಡಾರ್ ಹೆದ್ದಾರಿಯಲ್ಲಿ ರೈತರಿಗೆ ಅಂಡರ್‌ ಪಾಸ್ ಮತ್ತು ಸರ್ವಿಸ್ ರಸ್ತೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ ನೇತೃತ್ವದಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಎಸಿ ಪ್ರವೀಣ ಜೈನ್ ಹಾಗೂ ಹೆದ್ದಾರಿ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು.ಕೇಂದ್ರ ಸರ್ಕಾರದಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈದ್ರಾಬಾದ್‌-ಪಣಜಿ ನೂತನ ರಸ್ತೆ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. ಈ ರಸ್ತೆಯು ಹೆಚ್ಚಾಗಿ ರೈತರ ಜಮೀನುಗಳ ಮುಖಾಂತರವೇ ಹಾಯ್ದು ಹೋಗಿದ್ದು, ರೈತಾಪಿ ಜನರಿಗೆ ಬೇರೆ ಬೇರೆ ಹೊಲಗಳಿಗೆ ತೆರಳಲು ಅಂಡರಪಾಸ್ ಹಾಗೂ ಸರ್ವಿಸ್ ರಸ್ತೆ ಇಲ್ಲ. ಇದರಿಂದ ರೈತರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ನಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಬೇಡಿಕೆಗಳಿಗೆ ಸ್ಫಂದಿಸದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುದೆಂದು ಎಚ್ಚರಿಕೆ ನೀಡಿದರು. ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸುರಕ್ಷಿತವಾಗಿ ಸಂಚರಿಸಲು ಅಂಡರ್‌ ಪಾಸ್ ಸೌಲಭ್ಯ ಇಲ್ಲದಿರುವುದರಿಂದ ಅಪಘಾತಗಳು ಸಂಭವಿಸುವ ಸಂಭವವಿದ್ದು, ಕೃಷಿ ಚಟುವಟಿಕೆಗಳು, ಕಬ್ಬು ಸಾಗಾಣಿಕೆ, ವಾಹನಗಳ ಸಂಚಾರ ಹಾಗೂ ಇತರೇ ಅಗತ್ಯ ಕೆಲಸಗಳಿಗಾಗಿ ಗ್ರಾಮಸ್ಥರು ಹೆದ್ದಾರಿ ದಾಟುವ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತವೆ. ಜೊತೆಗೆ ಒಂದು ರಸ್ತೆ ಸೇತುವೆಯಿಂದ ಮತ್ತೊಂದು ಸೇತುವೆ ಹಳ್ಳಕ್ಕೆ ಸುಮಾರು ಎರಡೆರಡು ಕಿಮೀ ಅಂತರವಿದೆ. ರಾಷ್ಟ್ರೀಯ ಹೆದ್ದಾರಿಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತರಲು ಟ್ಯ್ರಾಕ್ಟರ್, ಚಕ್ಕಡಿ, ಎತ್ತುಗಳ ಮೂಲಕ ಅನೇಕ ರೈತರು, ವಿವಿಧ ಸಂಘಟನೆಗಳು ನೂರಾರು ಪದಾಧಿಕಾರಿಗಳು ಆಗಮಿಸಿ ರಸ್ತೆಯಲ್ಲಿ ಹೋರಾಟ ಹಮ್ಮಿಕೊಂಡು ಪ್ರತಿಭಟಿಸಿದರು.ಮುರಗೋಡ ಬೈಲಹೊಂಗಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ವಾಹನ ಸವಾರರು, ಮರಕುಂಬಿಯ ಶ್ರೀಚಕ್ರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳುವ ಭಕ್ತಾಧಿಗಳಿಗೆ, ತುರ್ತು ಸೇವೆಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಮುಂಜಾಗೃತ ಕ್ರಮವಾಗಿ ಮುರಗೋಡ ಪಿಐ ಐ.ಎಂ.ಮಠಪತಿ ನೇತೃತ್ವದಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲಾಗಿತ್ತು.ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ, ಎಸಿ ಪ್ರವೀಣ ಜೈನ್, ಎನ್.ಎಚ್.ಹೈವೆ-748 ರ ರೆಸಿಡೆಂಟ್ ಇಂಜನೀಯರ್ ಭೀಮಶಿ.ಎಂ.ಬಿ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಮುರಗೋಡ, ಕರುನಾಡ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ರೈತ ಘಟಕದ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಲಕ್ಕಂಡಿ, ಮಲ್ಲಿಕಾರ್ಜುನ ಗುರುಕನವರ, ಸೋಮಪ್ಪ ಬೈಲವಾಡ, ಫಕ್ರುಸಾಬ್ ಮುಜಾವರ, ಈರಣ್ಣ ಅಂಬಡಗಟ್ಟಿ, ಮಲ್ಲಿಕಾರ್ಜುನ ತಿಗಡಿ, ಶಿವಪ್ಪ ಗುರುಕನವರ, ಸತೀಶ ಚಿಕ್ಕಮಠ, ಮಹಾಂತೇಶ ಮಾವಿನಕಟ್ಟಿ, ರೇವಪ್ಪ ತಿಗಡಿ, ಪ್ರಶಾಂತ ಮುರಕೀಭಾಂವಿ, ಮಡಿವಾಳಪ್ಪ ಅಕ್ಕಿಸಾಗರ, ಶಂಕರ ತೋಟಗಿ ಮುತಾದವರು ಉಪಸ್ಥಿತರಿದ್ದರು.

-------

ಕೋಟ್‌ರೈತ ಅನ್ನದಾತನಾಗಿರುವುದರಿಂದ ಸಮಾಜದಲ್ಲಿ ಆತನಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು. ಹೈದ್ರಾಬಾದ್‌-ಪಣಜಿ ರಾಷ್ಟ್ರೀಯ ಹೆದ್ದಾರಿ 748ಎದಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಡರಪಾಸ್ ಮತ್ತು ಸರ್ವಿಸ್ ರಸ್ತೆಗಳಿಗೆ ಆದ್ಯೆತೆ ನೀಡಿ ಕಾಮಗಾರಿ ಆರಂಭ ಮಾಡಬೇಕೆಂದು ಸೂಚಿಸಬೇಕು, ರೈತರಿಗೆ ತೊಂದರೆ ಮಾಡಿ ಅಭಿವೃದ್ಧಿ ಮಾಡುವುದು ಸರಿಯಲ್ಲ. ಮೇಲಾಧಿಕಾರಿಗಳು ಸಭೆ ನಡೆಸಿ ರೈತರಿಗೆ ಪರಿಹಾರ ಸಿಗುವವರೆಗೆ ಹೆದ್ದಾರಿ ಕಾಮಗಾರಿ ಬಂದ್‌ ಮಾಡಬೇಕು.

-ಮಹಾಂತೇಶ ಕೌಜಲಗಿ, ಶಾಸಕರು, ಬೈಲಹೊಂಗಲ -------

ಕೋಟ್‌ಮುರಗೋಡದ ರುದ್ರಾಪೂರದಿಂದ ಬೆಳಗಾವಿ ಸುವರ್ಣಸೌಧದವರೆಗೆ ಎನ್.ಎಚ್. ಹೈವೆ 748ಎ ಕಾಮಗಾರಿ ನಡೆದಿದೆ. ಗ್ರೀನ್ ಕಾರಿಡಾರ್ ಎಕ್ಸಪ್ರೆಸ್ ಹೈವೇ ಇದಾಗಿದ್ದರಿಂದ ಕೆಲವೊಂದು ಭಾಗದಲ್ಲಿ ಅಂಡರಪಾಸ್ ಮತ್ತು ಸರ್ವಿಸ್ ರಸ್ತೆ ಮಾಡಲು ಯೋಜನೆಗಳಿಲ್ಲ. ಕೇವಲ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಸರ್ವಿಸ್ ರಸ್ತೆಗೆ ಅನುಮತಿ ಇದೆ. ಮುಂಬರುವ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಶೀಘ್ರವೇ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ----ಭೀಮಶಿ.ಎಂ.ಬಿ. ರೆಸಿಡೆಂಟ್ ಇಂಜನೀಯರ್, ಎನ್.ಎಚ್.ಹೈವೇ