ಯೂರಿಯಾಕ್ಕಾಗಿ ರೈತರ ಪ್ರತಿಭಟನೆ

| Published : Jul 29 2025, 01:06 AM IST

ಸಾರಾಂಶ

ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಬೆಳಗ್ಗೆ 6 ಗಂಟೆಯಿಂದಲೇ ಸೊಸೈಟಿ, ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು, ಕಾದು ಕಾದು ಸುಸ್ತಾಗಿ ಪ್ರತಿಭಟನೆಗೆ ಮುಂದಾದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಬೆಳಗ್ಗೆ 6 ಗಂಟೆಯಿಂದಲೇ ಸೊಸೈಟಿ, ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು, ಕಾದು ಕಾದು ಸುಸ್ತಾಗಿ ಪ್ರತಿಭಟನೆಗೆ ಮುಂದಾದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆಯಿತು.

ಇಲ್ಲಿಯ ತೆಗ್ಗಿನಮಠದ ಬಳಿ ಇರುವ ವೀರಭದ್ರೇಶ್ವರ ಆಗ್ರೋ ಕೇಂದ್ರದ ಎದುರು ಯೂರಿಯಾ ಗೊಬ್ಬರಕ್ಕಾಗಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನವಾದರೂ ಗೊಬ್ಬರ ಕೊಡದಿದ್ದಕ್ಕೆ ಆಕ್ರೋಶಗೊಂಡು ಪ್ರತಿಭಟಿಸಿದರು.

ಆಗ ಪಿಎಸ್‌ಐ ಶಂಭುಲಿಂಗ ಹಿರೇಮಠ ಹಾಗೂ ಸಹಾಯಕ ಕೃಷಿ ನಿರ್ದೆಶಕ ಉಮೇಶ ಆಗಮಿಸಿ ರೈತರ ಮನವೊಲಿಸಲು ಮುಂದಾದರು. ಉಮೇಶ ಮಾತನಾಡಿ, ವೀರಭದ್ರೇಶ್ವರ ಆಗ್ರೋ ಕೇಂದ್ರಕ್ಕೆ51 ಮೆಟ್ರಿಕ್ ಟನ್ ಯೂರಿಯಾ ನಿಗದಿಯಾಗಿದೆ. ರಾಹುಲ್‌ ಟ್ರೇಡರ್ಸ್‌ ಗೆ -10 ಮೆಟ್ರಿಕ್‌ ಟನ್‌, ಮಂಜುನಾಥ ಕೃಷಿ ಕೇಂದ್ರಕ್ಕೆ 10 ಮೆಟ್ರಿಕ್‌ ಟನ್‌ ನಿಗದಿಯಾಗಿದೆ.

ದಾವಣಗೆರೆಯಿಂದ ಈಗಾಗಲೇ ವೀರಭದ್ರೇಶ್ವರ ಆಗ್ರೋ ಕೇಂದ್ರಕ್ಕೆ 1 ಲೋಡ್‌ ಬಂದಿದೆ. ಗಲಾಟೆ ಮಾಡದೆ ಸರತಿಸಾಲಿನಲ್ಲಿ ನಿಂತುಕೊಳ್ಳಿ ಕೊಡುತ್ತಾರೆ. ಇಂದು ನಿಗದಿಯಾಗಿರುವ ಪೂರ್ಣ ಗೊಬ್ಬರ ಬರುತ್ತದೆ ತಾಳ್ಮೆ ಇರಲಿ ಎಂದು ಸಮಾಧಾನ ಪಡಿಸಿದರು.

ಸ್ವಲ್ಪ ಹೊತ್ತು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ ರೈತರು ಅಂತಿಮವಾಗಿ ಪ್ರತಿಭಟನೆ ಕೈ ಬಿಟ್ಟು ಅಂಗಡಿಯವರು ತೋರಿಸಿದ ಜಾಗದಲ್ಲಿ ಸರತಿ ಸಾಲಿನಲ್ಲಿ ನಿಂತುಕೊಂಡು ಗೊಬ್ಬರ ಪಡೆದರು.ಹರಪನಹಳ್ಳಿಯಲ್ಲಿ ಸಂಭ್ರಮದ ನಾಗರಪಂಚಮಿ

ಯೂರಿಯಾ ರಸಗೊಬ್ಬರದ ಗದ್ದಲದ ಮಧ್ಯೆಯೂ ಹರಪನಹಳ್ಳಿ ತಾಲೂಕಿನಾದ್ಯಂತ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.

ಕೆಲವರು ಭಾನುವಾರ ರೊಟ್ಟಿ ಹಬ್ಬ ಮಾಡಿ ಸೋಮವಾರ ನಾಗದೇವರಿಗೆ ಹಾಲು ಎರೆದರೆ, ಇನ್ನೂ ಕೆಲವರು ಸೋಮವಾರ ರೊಟ್ಟಿ ಹಬ್ಬ ಮಾಡಿದ್ದು, ಮಂಗಳವಾರ ನಾಗಪ್ಪಗೆ ಹಾಲು ಎರೆಯುತ್ತಾರೆ.ಬೆಳಗ್ಗೆಯಿಂದಲೇ ತಲೆ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸಿ ಕೆಲವರು ಮನೆಯಲ್ಲಿಯೇ ನಾಗ ಮೂರ್ತಿಗೆ ಹಾಲು ಹಾಕಿದರೆ, ಇನ್ನೂ ಕೆಲವರು ಹೊರಗಡೆ ತೆರಳಿ ಹಾವಿನ ಹುತ್ತಕ್ಕೆ ಅಥವಾ ಬನ್ನಿ ಮರದ ಕೆಳಗೆ ಇರುವ ನಾಗ ಮೂರ್ತಿಗಳಿಗೆ ಹಾಲು ಎರೆದು ಭಕ್ತಿ ಸಮರ್ಪಿಸಿದರು.

ಶೇಂಗಾ ಸೇರಿದಂತೆ ವಿವಿಧ ಉಂಡಿ ಸವಿದರು. ಚಿಕ್ಕ ಮಕ್ಕಳು ಹೊಸ ಬಟ್ಟೆ ಧರಿಸಿ ಜೋಕಾಲಿ ಆಡಿ ಸಂಭ್ರಮಿಸಿದರು.ಸಂಪ್ರದಾಯ ಇಳಿಮುಖ:

ಈ ಹಿಂದಿನಂತೆ ಪ್ರತಿ ಕಣಗಳಲ್ಲಿ, ಪ್ರತಿ ಮನೆಗಳಲ್ಲಿ ಜೋಕಾಲಿ ಕಂಡು ಬರುತ್ತಾ ಇಲ್ಲ. ಕೆಲವೇ ಮನೆ, ಕಣಗಳಲ್ಲಿ ಜೋಕಾಲಿ ಆಡುವುದು ಕಂಡು ಬಂತು.ಸರತಿ ಸಾಲಿನಲ್ಲಿ ರೈತರು:

ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಬೆಳಗಿನಿಂದಲೇ ಸೊಸೈಟಿ, ಖಾಸಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಗೊಬ್ಬರಕ್ಕಾಗಿ ಗದ್ದಲ ಆರಂಭಿಸಿದ್ದರು. ಒಟ್ಟಿನಲ್ಲಿ ಯೂರಿಯಾ ಗದ್ದಲದ ಮಧ್ಯೆಯೂ ನಾಗರಪಂಚಮಿ ಹಬ್ಬ ಸಡಗರದಿಂದ ಕೂಡಿತ್ತು.