ಕನ್ನಡಪ್ರಭ ವಾರ್ತೆ ಜಮಖಂಡಿ ಸರ್ಕಾರ ಘೋಷಿಸಿರುವ ಶೂನ್ಯ ಬಡ್ಡಿ ದರದಲ್ಲಿ ₹ 5 ಲಕ್ಷದ ವರೆಗಿನ ಬೆಳೆಸಾಲವನ್ನು ಎಲ್ಲ ಪಿಕೆಪಿಎಸ್‌ಗಳ ಮುಖಾಂತರ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರೈತ ಸಂಘದಿಂದ ಸೆ.21ರಂದು ಬಾಗಲಕೊಟೆಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ರಾಜು ನದಾಫ ತಿಳಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಸರ್ಕಾರ ಘೋಷಿಸಿರುವ ಶೂನ್ಯ ಬಡ್ಡಿ ದರದಲ್ಲಿ ₹ 5 ಲಕ್ಷದ ವರೆಗಿನ ಬೆಳೆಸಾಲವನ್ನು ಎಲ್ಲ ಪಿಕೆಪಿಎಸ್‌ಗಳ ಮುಖಾಂತರ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರೈತ ಸಂಘದಿಂದ ಸೆ.21ರಂದು ಬಾಗಲಕೊಟೆಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ರಾಜು ನದಾಫ ತಿಳಿಸಿದರು.ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 294 ಪಿಕೆಪಿಎಸ್‌ಗಳಿಂದ 2.20 ಲಕ್ಷ ರೈತರಿಗೆ ₹ 50 ಸಾವಿರದಂತೆ ಬೆಳೆಸಾಲ ವಿತರಿಸಲಾಗಿದೆ. ಸುಮಾರು ₹ 1300 ಕೋಟಿ ಒಟ್ಟು ಬೆಳೆಸಾಲವಿದ್ದು, ಪಶುಸಂಗೋಪನೆ, ದ್ರಾಕ್ಷಿ, ದಾಳಿಂಬೆ, ಟ್ರ್ಯಾಕ್ಟರ ಖರೀದಿ ಸೇರಿದಂತೆ ವಿವಿಧ ಸಾಲಗಳ ರೂಪದಲ್ಲಿ ಸುಮಾರು ₹ 150 ಕೋಟಿ ವಿತರಿಸಲಾಗಿದೆ. ಒಟ್ಟು ರೈತರ ಸಾಲ ₹ 1450 ಕೋಟಿಯಷ್ಟಿದೆ ಎಂದು ವಿವರಿಸಿದರು.ಸರ್ಕಾರ ಘೋಷಿಸಿರುವ ರೀತಿ ಪ್ರತಿಯೊಬ್ಬ ರೈತರಿಗೆ ₹ 5 ಲಕ್ಷ ಬೆಳೆಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಬೇಕು. ಆದರೆ, ಡಿಸಿಸಿ ಬ್ಯಾಂಕ್‌ನವರು ಬೆಳೆಸಾಲ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ರೈತ ಮಿತ್ರ ಯೋಜನೆಯಡಿಯಲ್ಲಿ ₹ 7.5 ಲಕ್ಷ ಸಾಲ ಸೌಲಭ್ಯ ದೊರಕುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಎಕರೆಗೆ ₹ 4 ಲಕ್ಷವರೆಗೆ ಬೆಳೆಸಾಲ ನೀಡಲಾಗುತ್ತಿದ್ದು, ಬಾಗಲಕೊಟೆಯಲ್ಲಿ ಮಾತ್ರ ಪ್ರತಿ ಖಾತೆಗೆ ₹ 50 ಸಾವಿರ ನಿಗದಿ ಪಡಿಸಿದ್ದು, ರೈತ ಸಮುದಾಯಕ್ಕೆ ತೊಂದರೆಯಾಗಿದೆ ಎಂದರು.
ಸೆ.22ರಂದು ಡಿಸಿಸಿ ಬ್ಯಾಂಕ್‌ನ ಸಾಮಾನ್ಯ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಸೆ.21ರಂದು ಪ್ರತಿಭಟನೆ ನಡೆಸಲಾಗುತ್ತಿದೆ. ಸಾಮಾನ್ಯ ಸಭೆಯಲ್ಲಿ ರೈತರ ಬೇಡಿಕೆಗಳ ಕುರಿತು ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲ ವಾದಲ್ಲಿ ಸಾಮಾನ್ಯ ಸಭೆಗೆ ಅಡ್ಡಿ ಪಡಿಸುವ ಮೂಲಕ ಪ್ರತಿಭಟನೆ ನಡೆಸಲಾಗುವದೆಂದು ತಿಳಿಸಿದರು.ಈ ವೇಳೆ ಅಧ್ಯಕ್ಷ ಶ್ರೀಶೈಲ ಭೂಮಾರ, ಸಿದ್ದಪ್ಪ ಬಣಜಿಗವಾಡ, ಬಾಹುಬಲಿ ನ್ಯಾಮಗೌಡ, ಸದಪ್ಪ ಕವಟಗಿ, ಮುರುಗೆಪ್ಪ ಬೆಳಗಲಿ, ಗುರಯ್ಯ ಪೂಜಾರಿ, ಈಶ್ವರ ಅತ್ತೆಪ್ಪನವರ ಸೇರಿದಂತೆ ಹಲವರು ಇದ್ದರು.