ಬಬಲೇಶ್ವರದ ಗುರುಪಾದೇಶ್ವರ ಮಠದ ಆವರಣದಲ್ಲಿ ನಡೆದ ಡಾ.ಮಹಾದೇವ ಶಿವಾಚಾರ್ಯರ ವಜ್ರ ಮಹೋತ್ಸವ ಹಾಗೂ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಬಾಳೇಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹಾಗೂ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರುಸಚಿಡಾ.ಮಹಾದೇವ ಶಿವಾಚಾರ್ಯರ ವಜ್ರ ಮಹೋತ್ಸವ ಹಾಗೂ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಎಂ.ಬಿ.ಪಾಟೀಲ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಗೆ ಶಾಂತವೀರ ಶ್ರೀಗಳು ಮತ್ತು ಬಂಥನಾಳ ಸಂಗನಬಸವ ಸ್ವಾಮೀಜಿಗಳ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರದ ಗುರುಪಾದೇಶ್ವರ ಮಠದ ಆವರಣದಲ್ಲಿ ನಡೆದ ಡಾ.ಮಹಾದೇವ ಶಿವಾಚಾರ್ಯರ ವಜ್ರ ಮಹೋತ್ಸವ ಹಾಗೂ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಬಾಳೇಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹಾಗೂ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರಿಗೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಬಿಎಲ್‌.ಡಿ.ಇ ಶಿಕ್ಷಣ ಸಂಸ್ಥೆಯ ಆರಂಭ ಮತ್ತು ಬೆಳವಣಿಗೆಯಲ್ಲಿ ಶಾಂತವೀರ ಶ್ರೀಗಳ ಪಾತ್ರವಿದೆ. ಅವರಿಂದ ಬಬಲೇಶ್ವರ ಮಠ ಹೆಸರುವಾಸಿಯಾಗಿದೆ. ಈಗಿನ ಮಹಾದೇವ ಶಿವಾಚಾರ್ಯರು ಮೃದು ಮನಸ್ಸಿನವರು. ಸಾಮಾಜಿಕ ಏಳ್ಗೆ, ಭಕ್ತಿ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ. ಸದ್ಯ ಪಟ್ಟಾಧಿಕಾರ ಹೊಂದಿದ ಕಿರಿಯ ಶ್ರೀಗಳು ಖ್ಯಾತ ಯೋಗ ಪಟುವಾಗಿದ್ದು, ಅಧ್ಯಯನ ಮತ್ತು ಓದು ಪಡೆದು ಸನ್ಯಾಸ ಸ್ವೀಕರಿಸಿದ್ದಾರೆ. ಇವರಿಂದ ಮಠ ಇನ್ನಷ್ಟು ಉನ್ನತಿ ಹೊಂದಲಿ ಎಂದು ಬಯಸುತ್ತೇನೆ ಎಂದು ಸಚಿವರು ಹೇಳಿದರು.

ಪಟ್ಟಾಧಿಕಾರ ಹೊಂದಿದ ಕಿರಿಯ ಶ್ರೀಗಳಿಗೆ ಮಹಾದೇವ ಶ್ರೀಗಳು ಹೊಸ ನಾಮಕರಣ ಮಾಡಿದ್ದು ಅತ್ಯಂತ ಸೂಕ್ತವಾಗಿದೆ. ಗುರುಪಾದೇಶ್ವರರು, ಶಾಂತವೀರ ಮಹಾಸ್ವಾಮಿಗಳು ಹಾಗೂ ಮಹಾದೇವ ಶಿವಾಚಾರ್ಯರ ಮೂರು ಹೆಸರು ಇದರಲ್ಲಿದ್ದು, ಗುರು ಶಾಂತದೇವ ಮಹಾಸ್ವಾಮೀಜಿ ಎಂದು ಹೆಸರಿಸಲಾಗಿದೆ ಎಂದವರು ಹೇಳಿದರು. ಭಕ್ತಿ, ಶ್ರದ್ಧೆಯಲ್ಲಿ ಹೆಣ್ಣುಮಕ್ಕಳು ಮುಂದೆ ಇದ್ದಾರೆ. ನಾಡಿನಲ್ಲಿ ಮಠ ಮಾನ್ಯಗಳ ಅನ್ನ, ಅಕ್ಷರಗಳ ದಾಸೋಹದಿಂದ ಬಹಳಷ್ಟು ಬದಲಾವಣೆಯಾಗಿದೆ ಎಂದವರು ಹೇಳಿದರು.

ಮಮದಾಪುರ ಶ್ರೀಗಳು ಮಾತನಾಡಿ, ಬಬಲೇಶ್ವರ ಮಠ ಪರಂಪರೆ ದೇಶವೇ ನೋಡುವ ಹಾಗಿದೆ. ಇಲ್ಲಿನ ಭಕ್ತರು ಒಗ್ಗಟ್ಟಾಗಿ ಅದಕ್ಕೆ ಶಕ್ತಿ ತುಂಬಿದ್ದಾರೆ. ಇದು ಜಿಲ್ಲೆಯಲ್ಲಿಯೇ ವಿಶೇಷ. ಡಾ.ಮಹಾದೇವ ಶಿವಾಚಾರ್ಯರ ವಜ್ರ ಮಹೋತ್ಸವ ಹಾಗೂ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಕಾರ್ಯಕ್ರಮ ಯಶಸ್ವಿಯಾಗಿ ದಾಖಲೆ ನಿರ್ಮಿಸಿದೆ ಎಂದು ಹೇಳಿದರು.

ಡಾ.ಮಹಾದೇವ ಶಿವಾಚಾರ್ಯರು, ಡಾ‌.ಪ್ರಭುಸಾರಂಗ ದೇವರು, ಅಭಿನವ ಸಂಗನಬಸವ ಶ್ರೀಗಳು, ಕನ್ನೂರಿನ ಶ್ರೀ, ಹಾವೇರಿ ಶ್ರೀಗಳು, ಸಿದ್ದಾರೂಢ ಶ್ರೀಗಳು ಉಪಸ್ಥಿತರಿದ್ದರು.