ಸಾರಾಂಶ
ಬ್ಯಾಂಕ್ ಮ್ಯಾನೇಜರ್ ನಿಂದ ರೈತರಿಗೆ ವಂಚನೆಯಾಗಿದೆ ಎಂದು ಬಾಗಲಕೋಟೆ ನವನಗರದಲ್ಲಿರುವ ಕೆವಿಜಿ ಬ್ಯಾಂಕ್ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬ್ಯಾಂಕ್ ಮ್ಯಾನೇಜರ್ ನಿಂದ ರೈತರಿಗೆ ವಂಚನೆಯಾಗಿದೆ ಎಂದು ಬಾಗಲಕೋಟೆ ನವನಗರದಲ್ಲಿರುವ ಕೆವಿಜಿ ಬ್ಯಾಂಕ್ ಮುಂದೆ ರೈತರು ಪ್ರತಿಭಟನೆ ನಡೆಸಿದರು.ಬಾಗಲಕೋಟೆಯ ನವನಗರದಲ್ಲಿರುವ ಕೆವಿಜಿ ಬ್ಯಾಂಕಿನ ಪ್ರಾದೇಶಿಕ ಕಚೇರಿ ಎದುರು ಗುರುವಾರ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾದೇಶಿಕ ವ್ಯವಸ್ಥಾಪಕರ ಮನವೊಲಿಕೆಗೂ ಬಗ್ಗದ ರೈತರು ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕೆವಿಜಿ ಬ್ಯಾಂಕ್ ನಲ್ಲಿ ಸಾಲದ ಹೆಸರಲ್ಲಿ ರೈತರಿಗೆ ವಂಚನೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿನ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನಲ್ಲಿ ಆಂಧ್ರಪ್ರದೇಶ ಮೂಲದ ಮ್ಯಾನೇಜರ್ ಯಲ್ಲಪ್ಪ ಸೊರಪಗ ಎಂಬುವರಿಂದ ವಂಚನೆಯಾಗಿದ್ದು, ಗ್ರಾಹಕರ ಹೆಸರಲ್ಲಿ ಸಾಲ, ಬಳಿಕ ಅವರ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ ಎಂದು ಆಪಾದಿಸಿದರು.ಮ್ಯಾನೇಜರ್ ಅವರು, ಗ್ರಾಹಕರಿಂದ ಮೊದಲೇ ವಿಥ್‌ಡ್ರಾವಲ್ ಫಾರ್ಮಗೆ ರುಜು (ಸಹಿ) ಪಡೆದು ಹಣ ಎಗರಿಸಿದಾರೆ. ಮ್ಯಾನೇಜರ್ ನಿಂದ ಸುಮಾರು ₹ 2 ಕೋಟಿವರೆಗೆ ವಂಚನೆ ನಡೆದಿರುವ ಅನುಮಾನ ಇದೆ ಎಂದ ಪ್ರತಿಭಟನಾಕಾರರು, ತಕ್ಷಣವೇ ವ್ಯವಸ್ಥಾಪಕನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಸಿದರು. ಬ್ಯಾಂಕ್ ಬಳಿ ಮುಂದುವರಿದ ರೈತರ ಪ್ರತಿಭಟನೆಯಿಂದ ಸ್ಥಳಕ್ಕೆ ನವನಗರ ಪೊಲೀಸರು ಭದ್ರತೆ ಒದಗಿಸಬೇಕಾಯಿತು.