ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಆರೋಪಿಸಿ ತಾಲೂಕಿನ ರೈತಪರ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ಶನಿವಾರ ಪಟ್ಟಣದ ಆಂಜನೇಯ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

- ಅಂಗಡಿ ಮುಂಗಟ್ಟು ಬಂದ್ ಮಾಡಿಸಿ ಆಕ್ರೋಶ

- ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯ

ಕನ್ನಡಪ್ರಭ ವಾರ್ತೆ ಕಲಘಟಗಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಆರೋಪಿಸಿ ತಾಲೂಕಿನ ರೈತಪರ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ಶನಿವಾರ ಪಟ್ಟಣದ ಆಂಜನೇಯ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿ ಮಾಡಬೇಕು, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು ಹಾಗೂ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ₹30ರಿಂದ ₹60ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತರು ಹಗಲಿರುಳು ಎನ್ನದೆ ಬೆವರು ಸುರಿಸಿ ಬೆಳೆ ಬೆಳೆಯುತ್ತಿದ್ದರೂ, ಅಂತಿಮವಾಗಿ ನ್ಯಾಯಯುತ ಬೆಲೆಗಾಗಿ ಸರ್ಕಾರದ ಮುಂದೆ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಶ್ರಮಕ್ಕೆ ಸರ್ಕಾರಗಳು ನ್ಯಾಯ ಒದಗಿಸಬೇಕು. ಕಬ್ಬಿಗೆ ಉತ್ತಮ ಬೆಲೆ ನಿಗದಿಯಾಗುವ ವರೆಗೆ ಹೋರಾಟ ನಿಲ್ಲುವುದಿಲ್ಲ. ಅಗತ್ಯವಿದ್ದರೆ ಅನ್ನ-ನೀರು ಬಿಟ್ಟು ಉಪವಾಸ ಸತ್ಯಾಗ್ರಹ ನಡೆಸಲೂ ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕೆಲವೆಡೆ ರಸ್ತೆ ಮಧ್ಯೆ ಎತ್ತಿನ ಗಾಡಿ ಹಾಗೂ ಜಾನುವಾರುಗಳನ್ನು ನಿಲ್ಲಿಸಿ, ಕಬ್ಬು ಬೆಲೆಗೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಬೆಳಗ್ಗೆ ವಿವಿಧ ರೈತಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿವಿಧ ಕಬ್ಬು ಬೆಳೆಗಾರರ ಸಂಘಟನೆಗಳು, ಜಿಲ್ಲಾ ಹಾಗೂ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳು ಸೇರಿದಂತೆ ರೈತರು ಪಾಲ್ಗೊಂಡಿದ್ದರು.