ಸಾರಾಂಶ
ಅಸಮರ್ಪಕ ವಿದ್ಯುತ್ ವಿರುದ್ಧ ಪರಶುರಾಂಪುರ ಬೆಸ್ಕಾಂ ಕಚೇರಿ ಮುಂದೆ ಪಂಪ್‌ಸೆಟ್ ಇಟ್ಟು ರೈತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಪರಶುರಾಂಪುರ
ರೈತರ ಕೃಷಿ ಪಂಪ್‌ಸೆಟ್‌ಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಆಗ್ರಹಿಸಿ ಹೋಬಳಿ ಕ್ಯಾದಿಗುಂಟೆ ಸಿದ್ದೇಶ್ವರದುರ್ಗದ ಗ್ರಾಮದ ರೈತರು ಪರಶುರಾಂಪುರ ಬೆಸ್ಕಾಂ ಕಚೇರಿ ಎದುರು ಪಂಪ್ ಸೆಟ್ ಇಟ್ಟು ಪ್ರತಿಭಟನೆ ನಡೆಸಿದರು.ಹೋಬಳಿ ವ್ಯಾಪ್ತಿಯ ಕ್ಯಾದಿಗುಂಟೆ ಸಿದ್ದೇಶ್ವರದುರ್ಗ ಗ್ರಾಮದ ರೈತರುಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಕೃಷಿ ಪಂಪ್‌ಸೆಟ್‌ಗಳು ಪದೇ ಪದೇ ಸುಟ್ಟು ಹೋಗುತ್ತಿದ್ದು ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮರ್ಪಕ ವಿದ್ಯುತ್ ಸಮಸ್ಯೆ ಪರಿಹರಿಸುವರೆಗೂ ಪ್ರತಿಭಟನೆ ಮುಂದುವರಿಸಿರುತ್ತೇವೆ ಎಂದು ಪಟ್ಟು ಹಿಡಿದರು.
ಕಳೆದ 6 ತಿಂಗಳುಗಳಿಂದ ರೈತರ ಪಂಪ್‌ಸೆಟ್‌ಗಳಿಗೆ ನೀಡುವ ವಿದ್ಯುತ್ ವೋಲ್ಟೆಜ್ ನಲ್ಲಿ ವ್ಯತ್ಯಯವಾಗುತ್ತಿದ್ದು, ವಾರಕ್ಕೆ ಒಮ್ಮೆಯಾದರು ಪಂಪ್‌ಸೆಟ್ ಸುಟ್ಟು ಹೋಗುತ್ತಿವೆ. ಕಳೆದ ಬಾರಿ ಮಳೆ ಬಾರದೆ ಸಂಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪದೇ ಪದೇ ಪಂಪುಸೆಟ್ ರಿಪೇರಿ ಮಾಡಿಸಲು ರೈತರು ಮನೆಯಲ್ಲಿನ ಆಭರಣಗಳ ಅಡವಿಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸತ್ಯನಾರಾಯಣ, ಮಂಜಣ್ಣ , ನಾಗರಾಜು, ರಾಘವೇಂದ್ರ, ಬೇಸರ ವ್ಯಕ್ತಪಡಿಸಿದರು.ಬೆಸ್ಕಾಂ ಇಲಾಖೆ ಇಂಜಿನಿಯರ್ ಮನವಿ ಸ್ವಿಕರಿಸಿ ಮಾತನಾಡಿ, ನಿಮ್ಮ ಸಮಸ್ಯೆಗೆ 15 ದಿನದ ಒಳಗೆ ಪರಿಹರಿಸಿಕೊಡುವ ಭರವಸೆ ನೀಡಿದ ಬಳಿಕ ರೈತರು ತಮ್ಮ ಪ್ರತಿಭಟನೆ ಹಿಂಪಡೆದರು. ರೈತರಾದ ಸತೀಶ್, ಶಿವಣ್ಣ, ಗೋವಿಂದಪ್ಪ ದಿವಾಕರ, ಯೋಗರಾಜ, ನಾಗರಾಜ್ , ಮಂಜುನಾಥ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.