20ವರೆಗೆ ಕಾಲುವೆಗೆ ನೀರು ಬಿಡಲು ರೈತರಿಂದ ಹೋರಾಟ

| Published : Apr 10 2025, 01:01 AM IST

20ವರೆಗೆ ಕಾಲುವೆಗೆ ನೀರು ಬಿಡಲು ರೈತರಿಂದ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ತಿಂಗಳಿನಲ್ಲಿ 100 ಟಿಎಂಸಿ ನೀರು ತುಂಬಿದ ತುಂಗಾಭದ್ರಾ ಜಲಾಶಯದಿಂದ ರಾಜ್ಯ ಸರ್ಕಾರ ರೈತರ ಎರಡು ಬೆಳೆಗಳಿಗೆ ಸಮರ್ಪಕ ನೀರು ಒದಗಿಸಬಹುದಾಗಿತ್ತು

ಕಾರಟಗಿ: ತುಂಗಾಭದ್ರಾ ಎಡದಂಡೆ ಕಾಲುವೆಗೆ ಏ.20 ವರೆಗೆ ನೀರು ಬಿಡಲು ಒತ್ತಾಯಿಸಿ ಹಾಗೂ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸದೆ ರೈತರನ್ನು ಕಡೆಗಣಿಸಿದ ಸಚಿವ ಶಿವರಾಜ್ ತಂಗಡಗಿ ರಾಜೀನಾಮೆಗೆ ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದಿಂದ ರೈತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಕನಕದಾಸ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾ ರೈತರನ್ನು ಪೊಲೀಸರು ತಡೆಹಿಡಿದರು. ರೈತರು ಸರ್ಕಲ್ ನಲ್ಲಿ ಹೋರಾಟ ಮಾಡುವ ಸಂದರ್ಭದಲ್ಲಿ ಕ್ರಿಮಿನಾಶಕ ಸೇವಿಸಲು ಮುಂದಾದರು ಈ ಸಂದರ್ಭದಲ್ಲಿ ಪೊಲೀಸರು ತಡೆ ಹಿಡಿದು ಪ್ರತಿಭಟನಾ ರೈತರನ್ನು ಬಂಧಿಸಿದರು.

ತಿಂಗಳಿನಲ್ಲಿ 100 ಟಿಎಂಸಿ ನೀರು ತುಂಬಿದ ತುಂಗಾಭದ್ರಾ ಜಲಾಶಯದಿಂದ ರಾಜ್ಯ ಸರ್ಕಾರ ರೈತರ ಎರಡು ಬೆಳೆಗಳಿಗೆ ಸಮರ್ಪಕ ನೀರು ಒದಗಿಸಬಹುದಾಗಿತ್ತು, ಆದರೆ ಹಿಂಗಾರು ಹಂಗಾಮಿಯ ಎರಡನೆಯ ಬೇಸಿಗೆ ಬೆಳೆಗೆ ಎಡದಂಡೆ ಭಾಗದ ಪಾಲಿನ ನೀರು ಇದ್ದರೂ ಕೂಡ ರೈತರ ಬೆಳೆಗಳಿಗೆ ನೀರು ಹರಿಸಲು ತುಂಗಭದ್ರಾ ನೀರಾವರಿ ಅಧಿಕಾರಿಗಳು ಮತ್ತು ಸಚಿವ ಶಿವರಾಜ್ ತಂಗಡಗಿ ಅವರಿಂದ ಉದಾಸೀನತೆ ಮತ್ತು ನಿರ್ಲಕ್ಷ ವಹಿಸಲಾಗುತ್ತಿದೆ, ಅದರಲ್ಲೂ ನೀರಾವರಿ ಸಲಹಾ ಸಮಿತಿಗಳನ್ನು ಕಾಡ ಕಚೇರಿಯಲ್ಲಿ ನಡೆಸದೆ ರೈತರನ್ನು ಕಡೆಗಣಿಸಿ ಬೆಂಗಳೂರಲ್ಲಿ ನಡೆಸಿ ನೀರಿನ ಹಂಚಿಕೆಯ ತಪ್ಪು ಲೆಕ್ಕಗಳನ್ನು ನೀಡಿ ಅನ್ನದಾತರನ್ನು ಒಕ್ಕಲಿಬ್ಬಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದರು.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಜಲಾಶಯದ ಮೇಲ್ಭಾಗದ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಕೂಡಲೇ ತುಂಗಭದ್ರಾ ಜಲಾಶಯದ ನೀರು ಹಂಚಿಕೆಯಲ್ಲಿ ಆಗುತ್ತಿರುವ ಅಕ್ರಮಗಳ ಕುರಿತು ವಿಶೇಷ ತನಿಖಾ ತಂಡ ರಚನೆ ಮಾಡಿ ಎಡದಂಡೆ ಭಾಗದ ರೈತರಿಗೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರು ನೀಡಲು ಕ್ರಮ ಕೈಗೊಳ್ಳಬೇಕು,

ತುಂಗಾ ಭದ್ರಾ ಜಲಾಶಯದ ಎಡದಂಡೆ ಭಾಗದಲ್ಲಿ ಮುನಿರಾಬಾದ್ ನಿಂದ ರಾಯಚೂರವರೆಗೆ ಸುಮಾರು 100ಕ್ಕೂ ಅಧಿಕ ಉಪ ಕಾಲುವೆಗಳು ಇದ್ದು, ಪ್ರತಿಯೊಂದು ಉಪ ಕಾಲುವೆಗಳ ಕೊನೆ ಭಾಗದ ರೈತರಿಗೆ ಬೆಳೆ ಕೈಗೆ ಬರಬೇಕಾದರೆ ಇನ್ನೂ 15 ರಿಂದ 20 ದಿನಗಳು ಬೇಕಾಗುತ್ತದೆ, ಆದರೆ ರಾಜ್ಯ ಸರ್ಕಾರ 123ನೆಯ ನೀರಾವರಿ ಸಲಹಾ ಸಮಿತಿಯಲ್ಲಿ ಏ.10 (2025) ವರೆಗೆ ನೀರು ಬಿಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ, ಇದು ರೈತರ ಬದುಕಿಗೆ ಬರೆ ಎಳೆದಂತೆ ಆಗುತ್ತದೆ, ಒಂದು ವೇಳೆ ಏ. 10 ಕ್ಕೆ ನೀರು ಬಂದ್ ಮಾಡಿದರೆ ಲಕ್ಷಾಂತರ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ, ರೈತರ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತದೆ, ಇದನ್ನು ತಡೆಯ ಬೇಕಾದರೆ ಏ. 20 ವರೆಗೆ ನೀರು ಬಿಡಬೇಕು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ರೈತರನ್ನು ಕಡೆಗಣಿಸಿದ್ದು, ರೈತರ ಪರ ಇರುವ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ, ರೈತರ ಪರ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದರು.

ಹಕ್ಕೊತ್ತಾಯಗಳು:

ತುಂಗಾಭದ್ರಾ ಎಡದಂಡೆ ಕಾಲುವೆಗೆ ಏ.20 ವರೆಗೆ ನೀರು ಬಿಡಬೇಕು. ಒಂದು ವೇಳೆ ನೀರು ಬಿಡದೇ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಯಂತಹ ಘಟನೆಗಳು ನಡೆದರೆ ಅದಕ್ಕೆ ಸರ್ಕಾರ ಮತ್ತು ಸಚಿವ ಶಿವರಾಜ್ ತಂಗಡಗಿ ಅವರನ್ನು ನೇರ ಹೊಣೆ ಮಾಡಬೇಕು. ಕೊನೆ ಭಾಗದ ರೈತರ ಬೆಳೆ ಒಣಗಿದರೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಎಡ ದಂಡೆ ಭಾಗದ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು. ಭತ್ತ ಖರೀದಿ ಕೇಂದ್ರ ಸ್ಥಾಪಿಸಬೇಕು. ತುಂಗಾಭದ್ರಾ ಜಲಾಶಯದ ನೀರು ಹಂಚಿಕೆಯಲ್ಲಿ ಆಗುತ್ತಿರುವ ಅಕ್ರಮಗಳ ಕುರಿತು ವಿಶೇಷ ತನಿಖಾ ತಂಡ ರಚನೆ ಮಾಡಿ ಕ್ರಮ ಕೈಗೊಳ್ಳಬೇಕು. ನೀರಾವರಿ ಭಾಗದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಜಲಾಶಯದ ನೀರನ್ನು ಕಾರ್ಖಾನೆಗಳಿಗೆ ಮಾರಾಟ ಮಾಡುವ ಅಧಿಕಾರಿ. ರಾಜಕಾರಣಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.