ಸಾರಾಂಶ
ತಾಲೂಕಿನ ಕೊಪ್ಪ ಹೋಬಳಿ ವ್ಯಾಪ್ತಿಯ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವ ಮೂಲಕ ಬೆಳೆ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ರೈತರು ಸೋಮವಾರ ಕೊಪ್ಪ ಗ್ರಾಮದಲ್ಲಿ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಹೋಬಳಿ ವ್ಯಾಪ್ತಿಯ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವ ಮೂಲಕ ಬೆಳೆ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ರೈತರು ಸೋಮವಾರ ಕೊಪ್ಪ ಗ್ರಾಮದಲ್ಲಿ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದಾಗಿ ಮಂಡ್ಯ, ಮದ್ದೂರು, ನಾಗಮಂಗಲ ಹಾಗೂ ಕೌಡ್ಲೆ ಮಾರ್ಗದಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ರೈತ ಸಂಘದ ಏಕೀಕರಣ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೀಳಘಟ್ಟ ನಂಜುಂಡಯ್ಯ ನೇತೃತ್ವದಲ್ಲಿ ಕೊಪ್ಪ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಗೆ ಇಳಿದ ನೂರಾರು ರೈತರು, ಜಿಲ್ಲೆಯ ಜನಪ್ರತಿನಿಧಿಗಳು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ವಿ.ಸಿ. ನಾಲೆ ಕೆರಗೂಡು ಶಾಖೆಯಿಂದ ಕಲ್ಮಂಟಿ ದೊಡ್ಡಿ ನಾಲೆ ಮೂಲಕ ಕೊಪ್ಪ ಕೆರೆಯನ್ನು ತುಂಬಿಸಿ ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವ ಮೂಲಕ ಬೆಳೆ ರಕ್ಷಣೆ ಮಾಡಬೇಕು ಎಂದು ಆಗ್ರಪಡಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಿಗಮದ ಕೊಪ್ಪ ಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಿರಣ್ ಕುಮಾರ್ ರೈತರ ಅಹವಾಲು ಆಲಿಸಿದರು.
ಕೊಪ್ಪಕೆರೆ ತುಂಬಿಸಿ ನಾಲೆಗಳಿಗೆ ನೀರು ಹರಿಸುವ ಸಂಬಂಧ ನಿಗಮದ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿ ಮನವಿ ಸ್ವೀಕರಿಸಿದರು. ಒಂದು ವೇಳೆ ನೀರು ಹರಿಸದಿದ್ದರೆ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಣ್ಣೂರು ಮಹೇಂದ್ರ, ಸೋ.ಶಿ.ಪ್ರಕಾಶ, ಅಂದಾನಿ., ಸಿದ್ದೇಗೌಡ, ಪ್ರಭುಲಿಂಗ, ವೆಂಕಟೇಶ, ಶಿವಲಿಂಗಯ್ಯ, ಮೂಡ್ಯ ಚೆನ್ನೇಗೌಡ, ಉಮೇಶ ಮತ್ತಿತರರು ಭಾಗವಹಿಸಿದ್ದರು.