ನಾಲೆ ಕಾಮಗಾರಿ ಕಳಪೆ ಕಲ್ಲುಚಪ್ಪಡಿ ಹೊತ್ತು ರೈತರ ಪ್ರತಿಭಟನೆ

| Published : Jul 29 2024, 12:48 AM IST

ನಾಲೆ ಕಾಮಗಾರಿ ಕಳಪೆ ಕಲ್ಲುಚಪ್ಪಡಿ ಹೊತ್ತು ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ವರ್ಷವಾದರೂ ನಾಲೆ ದುರಸ್ತಿಯಾಗದೆ ರೈತರು ತಲೆ ಮೇಲೆ ಚಪ್ಪಡಿ ಹಾಕಿಕೊಳ್ಳುವಂತಾಗಿದೆ. ನಾಲೆ ಅಡ್ಡ ಮೋರಿ, ಏರಿ, ಲೈನಿಂಗ್ ಹಾಳಾಗಿದೆ. 20 ವರ್ಷಗಳಿಂದ ರೈತರು ಹೋರಾಟ ನಡೆಸಿದ ಫಲವಾಗಿ ದುರಸ್ತಿಗಾಗಿ ಸಚಿವ ಕೆ.ಸಿ.ನಾರಾಯಣಗೌಡರ ಅವಧಿಯಲ್ಲಿ 55 ಕೋಟಿ ರು. ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದ್ದು, ಎಲ್ಲವೂ ಕಳಪೆಯಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ರೈತರಿಗೆ ಅನುಕೂಲವಾಗಬೇಕಿದ್ದ ನಾಲೆಗಳ ಕಾಮಗಾರಿ ಕಳಪೆಯಿಂದ ಮಾಡಲಾಗಿದೆ ಎಂದು ಆರೋಪಿಸಿ ರೈತರು ತಲೆ ಮೇಲೆ ಕಲ್ಲುಚಪ್ಪಡಿ ಹೊತ್ತು ಪ್ರತಿಭಟನೆ ನಡೆಸಿದರು.

ಗಾಂಧಿನಗರದ ಬಳಿ ನಡೆಯುತ್ತಿರುವ ಕಾವೇರಿ ನೀರಾವರಿ ನಿಗಮದ ಹೇಮಾವತಿ ನಾಲೆ ಕಿಕ್ಕೇರಿ ಉಪವಿಭಾಗದ ವಿತರಣಾ ವಿಭಾಗದ ಸರಪಳಿ ನಂ.54ರ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ರೈತರು, ಗ್ರಾಮಸ್ಥರು ತಲೆಮೇಲೆ ಕಲ್ಲುಚಪ್ಪಡಿ ಹೊತ್ತಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಎರಡು ವರ್ಷವಾದರೂ ನಾಲೆ ದುರಸ್ತಿಯಾಗದೆ ರೈತರು ತಲೆ ಮೇಲೆ ಚಪ್ಪಡಿ ಹಾಕಿಕೊಳ್ಳುವಂತಾಗಿದೆ. ನಾಲೆ ಅಡ್ಡ ಮೋರಿ, ಏರಿ, ಲೈನಿಂಗ್ ಹಾಳಾಗಿದೆ. 20 ವರ್ಷಗಳಿಂದ ರೈತರು ಹೋರಾಟ ನಡೆಸಿದ ಫಲವಾಗಿ ದುರಸ್ತಿಗಾಗಿ ಸಚಿವ ಕೆ.ಸಿ.ನಾರಾಯಣಗೌಡರ ಅವಧಿಯಲ್ಲಿ 55 ಕೋಟಿ ರು. ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದ್ದು, ಎಲ್ಲವೂ ಕಳಪೆಯಾಗಿದೆ ಎಂದು ಕಿಡಿಕಾರಿದರು.

ನಾಲೆ ನಂಬಿಕೊಂಡು ಕುಂದೂರು, ಗಂಗನಹಳ್ಳಿ, ಅಣೆಚಾಕನಹಳ್ಳಿ, ಕೃಷ್ಣಾಪುರ, ಮಾಕವಳ್ಳಿ, ಕರೋಟಿ, ಲಿಂಗಾಪುರ, ಕಾರಿಗಾನಹಳ್ಳಿ, ಹೆಗ್ಗಡಹಳ್ಳಿ ಸೇರಿದಂತೆ ಸುಮಾರು 18 ಗ್ರಾಮಗಳ ರೈತರು ಜೀವಿಸುತ್ತಿದ್ದಾರೆ. ಆದರೆ, ಲೈನಿಂಗ್, ಸಿಮೆಂಟ್ ಸ್ಲಾಬ್‌ಗಳಲ್ಲಿ ಬಿರುಕು ಬಿಟ್ಟಿವೆ. ಕ್ಯೂರಿಂಗ್‌ ಕಾಣುತ್ತಿಲ್ಲ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗುಣಮಟ್ಟದ ಕಾಮಗಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಬೆಳಗ್ಗೆಯಿಂದ ಸಂಜೆಯವರೆಗೂ ಕಾಮಗಾರಿ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಸುಳಿಯದ ಅಧಿಕಾರಿಗಳ ವರ್ತನೆ ಕಂಡು ಬೇಸತ್ತು ಹೈರಾಣವಾದರು. ಅಧಿಕಾರಿಗಳು ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರೋಟಿ ತಮ್ಮಯ್ಯ, ಅಜಯ್, ಚಂದ್ರೇಗೌಡ, ದಿನೇಶ, ಸುನಿಲ್, ಪಾಪೇಗೌಡ, ಯೋಗೇಶ್, ಪುಟ್ಟೇಗೌಡ, ಮೋಹನ ಹಾಜರಿದ್ದರು.