ಯಶವಂತನಗರದಿಂದ ಪಟ್ಟಣದ ತಾಲೂಕು ಕಚೇರಿಯವರೆಗೆ ಟ್ರ್ಯಾಕ್ಟರ್‌, ಎತ್ತುಬಂಡಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಡೂರು: ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ತಾಲೂಕಿನ ಯಶವಂತನಗರ- ಸೋಮಲಾಪುರ ಭಾಗದ ಜಮೀನುಗಳ ಪಹಣಿಗಳಲ್ಲಿ ರೈತರ ಹೆಸರನ್ನು ಪುನರ್ ಸ್ಥಾಪಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದ ಮುಖಂಡರು ಮಂಗಳವಾರ ತಾಲೂಕಿನ ಯಶವಂತನಗರದಿಂದ ಪಟ್ಟಣದ ತಾಲೂಕು ಕಚೇರಿಯವರೆಗೆ ಟ್ರ್ಯಾಕ್ಟರ್‌, ಎತ್ತುಬಂಡಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾಕರರು ತಮ್ಮ ಮನವಿ ಪತ್ರವನ್ನು ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದರು.

ಮನವಿ ಸಲ್ಲಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಮಾಧವ ರೆಡ್ಡಿ, ಎಂ.ಎಲ್.ಕೆ. ನಾಯ್ಡು, ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಮೇಟಿ, ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಟಿ.ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಆಲ್ದಳ್ಳಿ ಮುಂತಾದವರು ಮಾತನಾಡಿ, ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ಇಲ್ಲಿನ ಪರಿಸರ, ಜೀವಜಲ, ಅರಣ್ಯ, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರೈತರ ಫಲವತ್ತಾದ ಭೂಮಿಗಳು ಉದ್ಯಮಿಗಳ ಪಾಲಾಗುತ್ತಿವೆ. ಇದು ಆಹಾರ ಭದ್ರತೆಗೆ ಕಂಟಕವಾಗಲಿದೆ ಎಂದು ದೂರಿದರು.

ತಾಲೂಕಿನ ರೈತರ ಸಾಕಷ್ಟು ಭೂಮಿಗಳು ಈಗಾಗಲೇ ಉದ್ಯಮಿಗಳ ಪಾಲಾಗಿದ್ದು, ಇನ್ನು ಮುಂದೆ ಉಳಿದ ರೈತರ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಿಂದ ಸರ್ಕಾರ ಹಿಂದೆ ಸರಿಯಬೇಕು. ಕಲ್ಯಾಣ ಕರ್ನಾಟಕದ ಸುಮಾರು ₹೨೦೦೦೦ ಕೋಟಿ ಅನುದಾನವನ್ನು ಇಲ್ಲಿನ ರೈತರ, ಕೃಷಿ ಕಾರ್ಮಿಕರ, ಉದ್ಯೋಗ ಅವಕಾಶ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ಡಿಎಂಎಫ್, ಸಿಎಸ್‌ಆರ್ ಹಣವನ್ನು ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರ ನೇಮಕ, ಶಾಲೆಗಳಿಗೆ ಸುಸಜ್ಜಿತವಾದ ಲ್ಯಾಬ್, ಕೌಶಲ್ಯ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ಕೆಎಂಇಆರ್‌ಸಿ ಹಣವನ್ನು ತಾಲೂಕಿನ ಎಲ್ಲ ಕೆರೆಗಳನ್ನು ತುಂಗಾಭದ್ರಾ ಹಿನ್ನೀರಿನಿಂದ ತುಂಬಿಸಲು ಹಾಗೂ ಕೆರೆಯಲ್ಲಿ ಹೂಳೆತ್ತಲು ಬಳಕೆಯಾದರೆ ಹಲವು ಜನರಿಗೆ ಉದ್ಯೋಗ ದೊರೆಯಲಿದೆ. ಸಮಗ್ರ ಅರಣ್ಯ ಕೃಷಿ, ಹೈನುಗಾರಿಕೆ, ಗೋಮಾಳಗಳ ರಕ್ಷಣೆ, ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗ ಸಿಗುವಂತಾದರೆ ಕುಟುಂಬದ ಆರ್ಥಿಕ ಮಟ್ಟ ಹೆಚ್ಚುತ್ತದೆ. ಕೆಎಂಇಆರ್‌ಸಿ ಹಣದಲ್ಲಿ ಸ್ವಲ್ಪ ಹಣವನ್ನು ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಹಣದಲ್ಲಿ ಗಣಿಬಾಧಿತ ಪ್ರದೇಶದ ರೈತರ ಭೂಮಿಗಳಿಗೆ ಉಚಿತವಾಗಿ ಗೊಬ್ಬರವನ್ನು ಒದಗಿಸಬೇಕು ಎಂದರು.

ಬನ್ನಿಹಟ್ಟಿ, ಲಿಂಗದಹಳ್ಳಿಯಲ್ಲಿರುವ ಮೈನ್ಸ್ ಲಾರಿಗಳಿಗೆ ಬೈಪಾಸ್ ರಸ್ತೆ ಮಾಡಬೇಕು. ನಾರಿಹಳ್ಳ ಡ್ಯಾಂನಿಂದ ಬಲದಂಡೆ ಕಾಲುವೆ ದುರಸ್ತಿಗೊಳಿಸಿ, ತಾರಾನಗರ, ಗಂಗಲಾಪುರ, ಬನ್ನಿಹಟ್ಟಿ ಮುಂತಾದ ಗ್ರಾಮಗಳ ಜಮೀನುಗಳಿಗೆ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಉಪಾಧ್ಯಕ್ಷ ವಿರುಪನಗೌಡ, ತಾಲೂಕು ಘಟಕದ ಗೌರವ ಅಧ್ಯಕ್ಷ ಸೈಯದಸಾಬ್, ಮುಖಂಡರಾದ ಎಸ್.ಎಂ. ಕಾಂತರಾಜ, ಎಚ್.ವೀರೇಶ್, ಎಚ್.ಎಂ. ಪಂಚಾಕ್ಷರಯ್ಯ, ಮೂರ್ತಿ, ಎಸ್.ಮೆಹಬೂಬ್, ಅಂಜಿನಿ, ಕೆ.ಬಿ. ಮೌನೇಶ್, ಕೆ.ಪ್ರವೀಣ್, ಕಾಡಪ್ಪ, ಷಣ್ಮುಖಪ್ಪ, ತಾರ‍್ಯನಾಯ್ಕ್, ಅಲಿಬಾಷ ಎಚ್., ವೀರೇಶ್ ಎಚ್, ಗಿಡ್ಡಪ್ಪ, ಮೇಟಿ ಷಣ್ಮುಖಪ್ಪ, ಪರಮೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.