ಪಟ್ಟಣದಲ್ಲಿನ ಬಹುತೇಕ ಕೆರೆಗಳು ಬತ್ತಿರುವುದರಿಂದ ಜಾನುವಾರಿಗೂ ಕುಡಿಯಲು ನೀರು ಇಲ್ಲದಂತಾಗಿದೆ. ಹೂಳು ತೆಗೆದರೆ ಅಲ್ಪನೀರು ಸಂಗ್ರಹವಾಗಬಹುದು. ಹೀಗಾಗಿ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಲಕ್ಷ್ಮೇಶ್ವರ: ಪಟ್ಟಣದ ಕರೆಗೋರಿ ಪ್ಲಾಟ್ ಹತ್ತಿರದ ಸರ್ಕಾರಿ ಕೆರೆಯನ್ನು ಹಳ್ಳದಕೇರಿ ಓಣಿಯ ರೈತರು ತಮ್ಮ ಸ್ವಂತ ಹಣದಿಂದ ಹೂಳೆತ್ತುವ ಹಾಗೂ ದುರಸ್ತಿ ಕಾರ್ಯ ಮಾಡುತ್ತಿದ್ದು, ರೈತರ ಕಾರ್ಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಪಟ್ಟಣದ ಕರೆಗೋರಿ ಪ್ಲಾಟ್ ಹತ್ತಿರದ ಕೆರೆಯು ಸಂಪೂರ್ಣ ಬತ್ತಿ ಹೋಗಿದ್ದರಿಂದ ರೈತರು ತಮ್ಮ ಸ್ವಂತ ಹಣದಿಂದ ಕೆರೆಯ ಹೂಳೆತ್ತುವ ಕಾರ್ಯ ಮಾಡುತ್ತಿದ್ದಾರೆ. ಜೆಸಿಬಿ ಮೂಲಕ ಕೆರೆಯಲ್ಲಿನ ಮಣ್ಣನ್ನು ರೈತರ ಹೊಲಗಳಿಗೆ ಟ್ರ್ಯಾಕ್ಟರ್ ಮೂಲಕ ಹೇರಿಕೊಂಡು ಹೋಗುತ್ತಿದ್ದಾರೆ. ಕೆರೆಯಲ್ಲಿನ ಫಲವತ್ತಾದ ಮಣ್ಣು ರೈತರ ಹೊಲಗಳಿಗೆ ಉಪಯುಕ್ತವಾಗಿದೆ ಎನ್ನುತ್ತಾರೆ ರೈತರು.

ಬೇಸಿಗೆಯಲ್ಲಿ ರೈತರು ಇಂತಹ ಕೆರೆಗಳ ನೀರನ್ನು ತಮ್ಮ ಜಾನುವಾರುಗಳಿಗೆ ಕುಡಿಯಲು ಹಾಗೂ ಮೈ ತೊಳೆಯುವ ಕಾರ್ಯಕ್ಕೆ ಬಳಸುತ್ತಿದ್ದರು. ಆದರೆ ಈಗ ಪಟ್ಟಣದಲ್ಲಿನ ಬಹುತೇಕ ಕೆರೆಗಳು ಬತ್ತಿರುವುದರಿಂದ ಜಾನುವಾರಿಗೂ ಕುಡಿಯಲು ನೀರು ಇಲ್ಲದಂತಾಗಿದೆ. ಹೂಳು ತೆಗೆದರೆ ಅಲ್ಪನೀರು ಸಂಗ್ರಹವಾಗಬಹುದು. ಹೀಗಾಗಿ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಕ್ಕಪಕ್ಕದ ಕೆರೆ ಅಭಿವೃದ್ಧಿಯಾಗಲಿ: ಪಟ್ಟಣದ ಅಕ್ಕಪಕ್ಕ ಇರುವ ಕೆರೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಬೇಕು. ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡಬೇಕು ಹಾಗೂ ಅಂತರ್ಜಲ ಕುಸಿತ ತಡೆಯುವ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಿಕೊಡಬೇಕು. ಅಲ್ಲದೆ ಕೆರೆಗಳಿಗೆ ತಡೆಗೋಡೆ ಕಟ್ಟುವುದು ಹಾಗೂ ಬೇಲಿ ಹಾಕುವ ಮೂಲಕ ಜನ-ಜಾನುವಾರುಗಳ ಪ್ರಾಣರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮುದಕಣ್ಣ ಬೂದಿಹಾಳ ಹಾಗೂ ಕಿರಣ ಯಲಿಗಾರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೆರೆ ಹೂಳೆತ್ತುವ ಕಾರ್ಯದಲ್ಲಿ ನಾಗಪ್ಪ ಗೊರವರ, ಸೋಮು ಗೋಡಿ, ಬಸವರಾಜ ಅಂಕಲಿ, ರಮೇಶ ಅಂದಲಗಿ, ಈರಣ್ಣ ಯಲಿಗಾರ, ಮಂಜುನಾಥಯ್ಯ ಅಕಳಂಡಸ್ವಾಮಿಮಠ, ಕಾಶಪ್ಪ ಲಿಂಗಶೆಟ್ಟಿ, ಫಕ್ಕೀರಪ್ಪ ಬೂದಿಹಾಳ, ಭರಮಪ್ಪ ದಾನಿ, ಯಲ್ಲಪ್ಪ ಹೊಂಬಳ, ದೇವಪ್ಪ ಮಾಗಡಿ, ಕಲ್ಲಪ್ಪ ದಾನಿ, ಈಶ್ವರ ಬೂತರೆಡ್ಡಿ, ಹನುಮಂತಪ್ಪ ರಡ್ಡೇರ ಇದ್ದರು.