ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ 215ನೇ ದಿನದ ಧರಣಿಗೆ ಕರ್ನಾಟಕ ರೈತ ಸಂಘ (ಎಐಯುಕೆಎಸ್) ಬೆಂಬಲಿಸಿತು.

ಎಐಯುಕೆಎಸ್ ರಾಷ್ಟ್ರ ಸಮಿತಿ ಮುಖಂಡ ಡಿ.ಎಚ್. ಪೂಜಾರ ಮಾತನಾಡಿ, ಕಂಪನಿ ಕಾರ್ಪೋರೇಟರಗಳಿಗೆ ಅತಿಯಾದ ಭೂದಾಹಕ್ಕೆ ಬೆಂಗಳೂರು ಸುತ್ತಲಿನ ಬಿಡದಿ, ಆನೆಕಲ್, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ಗ್ರಾಮಗಳು ಬಲಿಯಾಗುತ್ತಿವೆ. ಅಲ್ಲಿನ ಜನ ಪ್ರಾಣ ಕೊಟ್ಟೇವು ಭೂಮಿ ಬಿಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ದೌರ್ಜನ್ಯದಿಂದ ಕೆಐಎಡಿಬಿ ಎನ್ನುವ ವಂಚಕ ಸಂಸ್ಥೆಯಿಂದ ಭೂಸ್ವಾಧೀನ ಮಾಡುವುದಾದರೆ ಅಲ್ಲಿನ ರೈತರು ವಿಷ ಕೊಟ್ಟುಬಿಡಿ ಎನ್ನುವ ಧಾರುಣ ಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

ಸರ್ಕಾರ ಕೊಪ್ಪಳ ಜನರ ಮೇಲೆ ಭೂಸ್ವಾಧೀನ ಪ್ರಯೋಗ ಮಾಡಿ 2006 ರಲ್ಲಿ ಬಲ್ಡೋಟ್‌ ಕಂಪನಿಗೆ ನಗರ ಸೇರಿಸಿ 1034 ಎಕರೆ ಭೂಮಿ ಬಲವಂತದಿಂದ ಕೆಐಎಡಿಬಿ ಮೂಲಕ ಸ್ವಾಧೀನ ಮಾಡಿದಾಗ ಕೊಪ್ಫಳ, ಬಸಾಪುರ ಮತ್ತು ಹಾಲವರ್ತಿ ಗ್ರಾಮದ 350 ರೈತರು ಭೂವಂಚಿತರಾದರು. ಭೂಸ್ವಾಧೀನದ ವಿರುದ್ಧ ಹೋರಾಡಿದ ರೈತರು ಕೊನೆಗೆ 2022ರಲ್ಲಿ ಸುಪ್ರೀಂ ಕೋರ್ಟನಲ್ಲಿ ಹಿನ್ನಡೆ ಅನುಭವಿಸಿದರು. ಸಮಯ ಸಾಧಿಸಿ ಕುಳಿತ್ತಿದ್ದ ಎಂಎಸ್ಪಿಎಲ್ ಪೆಲ್ಲೆಟ್ ಘಟಕ ವಿಸ್ತರಣೆ ಮಾಡಲು ಮುಂದಾಗಿದೆ. ಈಗಾಗಲೇ ಇದರ ಪೆಲ್ಲೆಟ್ ಘಟಕದಿಂದ ನಗರದ ಪೂರ್ವ ಭಾಗ, ಗವಿಮಠ, ಹಮಾಲರ ಕಾಲನಿ ಮುಂತಾದ ಏರಿಯಾಗಳು ಧೂಳು ಬಾಧಿತವಾಗಿವೆ. ನಗರದ ಜನರ ಆರೋಗ್ಯ ಉಳಿಯಬೇಕಾದರೆ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕ ಬಂದ್ ಮಾಡಬೇಕು. ಬಸಾಪುರ ಕೆರೆ ಹೋರಾಟ ನಾವು ಆರಂಭ ಮಾಡಿ ಈಗ ಕಾರ್ಖಾನೆ ಗೇಟ್ ಎದುರು ಹೋರಾಟ ನಡೆಯುತ್ತಿದ್ದು ಕೊಪ್ಪಳ ಜನರ ಬೆಂಬಲಿಸಬೇಕೆಂದು ಜನರಲ್ಲಿ ಕೇಳಿಕೊಂಡರು.

ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಗರಕ್ಕೆ ಹೊಂದಿಕೊಂಡು 54 ಸಾವಿರ ಕೋಟಿ ಹೂಡಿಕೆಯಲ್ಲಿ ಬಲ್ಡೋಟ ಕಂಪನಿಯ ಇಂಟಿಗ್ರೆಟೆಡ್ ಸ್ಟೀಲ್, ಕಲ್ಲಿದ್ದಲು ಸುಟ್ಟು ವಿದ್ಯುತ್ ಮತ್ತು ಡಾಂಬರು ತಯಾರಿಸಲು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದಂತೆ ಎಚ್ಚೆತ್ತು₹ಡ ಗವಿಶ್ರೀಗಳು ಧರ್ಮಾದೇಶ ಮಾಡಿ, ಈ ಬೃಹತ್ ಹೂಡಿಕೆಯಿಂದ ಅವಳಿ ನಗರ ಮತ್ತು ಸುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ತಡೆಯಬೇಕಾದರೆ ಈ ಒಡಂಬಡಿಕೆ ರದ್ದುಗೊಳಿಸಿದ ಆದೇಶ ಪತ್ರ ಜನಪ್ರತಿನಿಧಿಗಳು ತರಬೇಕೆಂದು ಹೇಳಿದ್ದನ್ನು ಇದುವರೆಗೆ ಜನಪ್ರತಿನಿಧಿಗಳು ತಂದಿಲ್ಲ. ತುಂಗಭದ್ರಾ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆ ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್‌ ಐರನ್ ಕಾರ್ಖಾನೆ ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು, ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು, ಎಐಐಎಂ ಎಸ್ ಸಂಸ್ಥೆ ಮತ್ತು ಐಐಎಸ್ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ,ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಗೌಡ ಕನ್ನೇರುಮಡು, ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ರವಿ ಕಾಂತನವರ, ರಾಜಶೇಖರ ಏಳುಬಾವಿ, ಶಿವಾನಂದಯ್ಯ ಬೀಳಗಿಮಠ, ನಟರಾಜ ಸವಡಿ, ದೇವಪ್ಪ ಕಂಬಳಿ, ಯಮನೂರಪ್ಪ ಕೆ. ಮಲ್ಲಾಪುರ, ಶರಣಪ್ಪ ಚವ್ಹಾಣ, ಉಮವ್ವ ಚವ್ಹಾಣ, ಸೀತಮ್ಮ ಚವ್ಹಾಣ, ಪಾರ್ವತೆವ್ವ ರಾಠೋಡ, ಚಂಪ್ಲವ್ವ ರಾಠೋಡ, ನಾಗಪ್ಪ ಯು. ಕಾಟಾಪುರ, ಕೃಷ್ಣಪ್ಪ ಮ್ಯಾಗಳಡೊಕ್ಕಿ, ವೆಂಕಟೇಶ ದೊಡ್ಡಮನಿ, ಶ್ಯಾಮೀದಸಾಬ್ ಮೆಣೇದಾಳ, ದ್ಯಾಮಮ್ಮ ತಾವರಗೇರಿ, ಮಲ್ಲಪ್ಪ ಮಾ.ಪಾಟೀಲ್, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಹನುಮಪ್ಪ ಮಡಿಕೇರಿ ಪಾಲ್ಗೊಂಡರು.