ಕೃಷಿಯಲ್ಲಿದ್ದರೆ ರೈತರಿಗೆ ಪ್ರಶಸ್ತಿ ಅರಸಿ ಬರುತ್ತದೆ: ಬಸವಲಿಂಗ ಸ್ವಾಮೀಜಿ

| Published : Feb 02 2025, 01:03 AM IST

ಸಾರಾಂಶ

ಹೋರಾಟ, ಚಳುವಳಿಯ ಜೊತೆ ರೈತರು ಕೃಷಿ ಕಾಯಕದಲ್ಲಿ ತೊಡಗಿದಾಗ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆಂದು ಚಿತ್ತರಗಿ ಸಂಸ್ಥಾನ ಶಾಖಾ ಮಠ ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ ಹೇಳಿದರು.

ಬಸವರೆಡ್ಡಿಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹೋರಾಟ, ಚಳುವಳಿಯ ಜೊತೆ ರೈತರು ಕೃಷಿ ಕಾಯಕದಲ್ಲಿ ತೊಡಗಿದಾಗ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆಂದು ಚಿತ್ತರಗಿ ಸಂಸ್ಥಾನ ಶಾಖಾ ಮಠ ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ ಹೇಳಿದರು.

ಕೂಡಲ ಸಂಗಮ ಸುಕ್ಷೇತ್ರದ ಬಸವಪೀಠ 38ನೇ ಶರಣ ಮೇಳ ಉತ್ಸವದಲ್ಲಿ ಒಕ್ಕಲಿಗ ಮುದ್ದಣ್ಣನವರ ನೆನಪಿನ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿಗೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಒಕ್ಕೂಟ, ಪ್ರಗತಿಪರ ಸಂಘಟನೆಗಳ ವತಿಯಿಂದ ಎಪಿಎಂಸಿ ರೈತ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರೈತ ಹೋರಾಟಗಾರರಲ್ಲಿ ಛಲವಿರಬೇಕು. ಕ್ರಾಂತಿಕಾರಿ ಬಸವಣ್ಣ ಕಾಯಕವೆ ಕೈಲಾಸ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಸಂಘಟನೆಯಿಂದ ಮಾತ್ರ ಆಳುವ ಸರ್ಕಾರಗಳನ್ನು ಮಣಿಸಲು ಸಾಧ್ಯ. ಬಸವಣ್ಣನವರು ಜಾತಿ ನಿರ್ಮೂಲನೆ ಮಾಡಿದರೆ. ಇಂದಿನ ಸಮಾಜದಲ್ಲಿ ಜಾತೀಯತೆ ತಾಂಡವವಾಡುತ್ತಿದೆ. ಬಸವಾದಿ ಶರಣರ ವಚನ ಸಾಹಿತ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಜೆ.ಯಾದವರೆಡ್ಡಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಅಸಂಘಟಿತ, ಅಸಹಾಯಕನಾಗಿದ್ದಾನೆ. ಕಾರ್ಮಿಕ ಸಂಘಟನೆಗಳಿಗೆ ಗುರಿ, ಸ್ಪಷ್ಟತೆಯಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆಯನ್ನು ವಿರೋಧಿಸಿ ರೈತರು ಒಂದು ವರ್ಷಗಳಿಗೂ ಹೆಚ್ಚು ಕಾಲ ದೆಹಲಿಯಲ್ಲಿ ಚಳುವಳಿ ನಡೆಸಿದಾಗ 720 ರೈತರು ಪ್ರಾಣ ತೆತ್ತರು. ನಿಮ್ಮ ಬುಡಕ್ಕೆ ನೀರು ಬಂದಾಗಲೂ ರೈತರು ಸುಮ್ಮನಿರುತ್ತಾರೆಂದರೆ ಚಳವಳಿಗೆ ಅರ್ಥವಿಲ್ಲದಂತಾಗುತ್ತದೆ. ದೌರ್ಜನ್ಯ, ದಬ್ಬಾಳಿಕೆಗಳು ನಡೆದಾಗಲಾದರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗಿ ಹೋರಾಡಿ ಎಂದು ಕರೆ ನೀಡಿದರು.

ಅಭಿನಂದನೆ ಸ್ವೀಕರಿಸಿ ರೈತ ನಾಯಕ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರಾಷ್ಟ್ರೀಯ ಬಸವದಳ ಬೆಂಗಳೂರಿನ ವೀರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್‍ಗೌಡಗೆರೆ, ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ, ಕರ್ನಾಟಕ ಶಾಂತಿಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಚಿಕ್ಕಬ್ಬಿಗೆರೆ ನಾಗರಾಜ್ ಮಾತನಾಡಿದರು.

ಪತ್ರಕರ್ತರ ದೊಣ್ಣೆಹಳ್ಳಿ ಗುರುಮೂರ್ತಿ, ಕಾಂ.ಜಿ.ಸಿ.ಸುರೇಶ್‍ ಬಾಬು, ಜಿಲ್ಲೆಯ ಆರು ತಾಲೂಕಿನ ರೈತ ಮುಖಂಡರು ಪಾಲ್ಗೊಂಡಿದ್ದರು.