ಬರದ ಭಯಕ್ಕೆ ಜಾನುವಾರು ಮಾರಾಟಕ್ಕೆ ನಿಂತ ರೈತ!

| Published : Jan 17 2024, 01:45 AM IST

ಸಾರಾಂಶ

ಧಾರವಾಡದಲ್ಲಿ ಮಂಗಳವಾರ ದನಕರುಗಳ ಮಾರಾಟ ನಡೆಯುತ್ತದೆ. ಇಷ್ಟು ದಿನಗಳ ಕಾಲ ಸಾಮಾನ್ಯ ಸಂಖ್ಯೆಯಲ್ಲಿದ್ದರೂ ಇತ್ತೀಚಿನ ವಾರಗಳಲ್ಲಿ ಜಾನುವಾರುಗಳ ಮಾರಾಟ ಸಂಖ್ಯೆ ಹೆಚ್ಚುತ್ತಿದೆ.

ಬಸವರಾಜ ಹಿರೇಮಠ

ಧಾರವಾಡ: ಇನ್ನೂ 14 ವಾರಗಳಿಗೆ ಆಗುವಷ್ಟು ಮೇವಿನ ಸಂಗ್ರಹವಿದ್ದು, ಬೇಸಿಗೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಮೇವಿನ ಕೊರತೆ ಉಂಟಾಗದಂತೆ ಎಚ್ಚರ ವಹಿಸುವುದಾಗಿ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರೂ ಆಹಾರ ಹಾಗೂ ನೀರಿನ ಕೊರತೆಯ ಭಯದಿಂದ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ರೈತರು ಮುಂದಾಗಿರುವ ತೀವ್ರ ಆತಂಕಕಾರಿ ಬೆಳವಣಿಗೆ ಜಿಲ್ಲೆಯ ಹಲವೆಡೆ ಕಂಡು ಬರುತ್ತಿದೆ.

ಸಾಮಾನ್ಯವಾಗಿ ಧಾರವಾಡದಲ್ಲಿ ಮಂಗಳವಾರ ದನಕರುಗಳ ಮಾರಾಟ ನಡೆಯುತ್ತದೆ. ಇಷ್ಟು ದಿನಗಳ ಕಾಲ ಸಾಮಾನ್ಯ ಸಂಖ್ಯೆಯಲ್ಲಿದ್ದರೂ ಇತ್ತೀಚಿನ ವಾರಗಳಲ್ಲಿ ಜಾನುವಾರುಗಳ ಮಾರಾಟ ಸಂಖ್ಯೆ ಹೆಚ್ಚುತ್ತಿದೆ. ದೂರದ ಹಳ್ಳಿಗಳಿಂದ ರೈತರು ವಾಹನ ಹಾಗೂ ಚಕ್ಕಡಿಗಳ ಮೂಲಕ ದನದ ಮಾರುಕಟ್ಟೆಗೆ ಬರುತ್ತಿದ್ದಾರೆ. ಸಂಕ್ರಮಣದ ಕರಿಯ ದಿನವಿದ್ದರೂ ಮಂಗಳವಾರ ಇಲ್ಲಿಯ ಜಾನುವಾರು ಮಾರಕಟ್ಟೆಗೆ ನೂರಾರು ಎತ್ತು, ಆಕಳು, ಎಮ್ಮೆ ಹಾಗೂ ಹೋರಿಗಳ ಮಾರಾಟಕ್ಕೆ ರೈತರು ಆಗಮಿಸಿದ್ದರು. ತಮ್ಮ ಜಾನುವಾರುಗಳ ಮಾರಾಟ ಮಾಡಲು ಪ್ರತಿಯೊಬ್ಬರು ಕಾರಣ ಹೇಳಿದ್ದು ಆಹಾರ, ನೀರು ಮತ್ತು ಆರ್ಥಿಕ ಸಂಕಷ್ಟ.

ಏನಂತಾರೆ ರೈತರು

ನಮ್ಮದು ಒಣಭೂಮಿ ಇದೆ. ಮುಂಗಾರು ಹೋತು, ಹಿಂಗಾರು ಹೋತು. ಮೇವು ಬಂದರೂ ಅದು ಸಾಕಾಗುತ್ತಿಲ್ಲ. ದನಕರುಗಳು ಉಪವಾಸ ಇರೋದನ್ನಾ ನಮಗೆ ನೋಡಲಾಗುತ್ತಿಲ್ಲ ಎಂದು ಕೆಲ ರೈತರು ಹೇಳಿದರೆ, ಇನ್ನು ಕೆಲವರು ಮಳೆಯಾಗದೇ ಬೆಳೆ ಬಂದಿಲ್ಲ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ದನಕರುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತೇವೆ. ಬರುವ ದಿನಗಳಲ್ಲಿ ಬೆಳೆ ಸರಿ ಬಂದರೆ ಮತ್ತೆ ದನಕರುಗಳನ್ನು ಖರೀದಿಸುತ್ತೇವೆ ಎನ್ನುತ್ತಾರೆ.

ಸಮೀಪದ ಕ್ಯಾರಕೊಪ್ಪ ರೈತ ಬಸಪ್ಪ ಸಾಲಗಟ್ಟಿ, ಗಟ್ಟಿಮುಟ್ಟಾದ ಎತ್ತುಗಳ ಜೋಡಿಯನ್ನು ಎರಡು ವಾರಗಳಿಂದ ಮಾರುಕಟ್ಟೆಗೆ ತರುತ್ತಿದ್ದಾರೆ. ರು.1.20 ಲಕ್ಷ ಜೋಡಿಗೆ ಹೇಳುತ್ತಿದ್ದು ಈ ದರಕ್ಕೆ ರೈತರಾರೂ ಖರೀದಿಗೆ ಮುಂದೆ ಬರುತ್ತಿಲ್ಲ. ಬರೀ ಒಣ ಮೇವು ಮಾತ್ರವಲ್ಲದೇ ಹುರುಳಿ ಹಾಕಬೇಕು. ಕ್ವಿಂಟಾಲ್‌ ಹುರುಳಿಗೆ ₹.9 ಸಾವಿರ ಆಗಿದೆ. ಬರೀ ಮೇವಿನಿಂದ ಎತ್ತುಗಳ ಹೊಟ್ಟೆ ತುಂಬೋದಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಆಹಾರ ಹಾಕಬೇಕು. ಅದು ಸಾಧ್ಯವಾಗದೇ ಮಾರಾಟ ಮಾಡಲು ಬಂದಿದ್ದೇವೆ ಎಂದು ಬಸಪ್ಪ ತನ್ನ ಗೋಳು ತೋಡಿಕೊಂಡರು.

ಹಾಗೆಯೇ, ಕವಲಗೇರಿಯ ಗೂಳಪ್ಪ ಗಾಣಗೇರಿ ಸ್ಥಿತಿ ಬೇರಿಲ್ಲ. ಹೊಟ್ಟು-ಮೇವಿನ ಕೊರತೆಗಾಗಿ ಎತ್ತುಗಳನ್ನು ಮಾರಲು ಬಂದಿದ್ದೇನೆ. ಇಲಾಖೆಯವರು ಮೇವು ಕೊಡುತ್ತೇವೆ ಎನ್ನುತ್ತಾರೆ. ಯಾವಾಗ ಕೊಡುತ್ತಾರೋ ಗೊತ್ತಿಲ್ಲ. ಮುಂಗಾರಿನ ಸೋಯಾಬಿನ, ಶೇಂಗಾ, ಹೆಸರು ಎಲ್ಲ ಬೆಳೆ ಹೋಗಿವೆ. ಕೈಯಲ್ಲಿ ರೊಕ್ಕ ಇಲ್ಲ. ಅದಕ್ಕಾಗಿ ಎತ್ತು ಮಾರಲು ಬಂದಿದ್ದೇನೆ. ಜೋಡಿಗೆ ₹55 ಸಾವಿರ ಹೇಳಿದ್ದು 40ಕ್ಕೆ ಕೇಳುತ್ತಿದ್ದಾರೆ. ಹೀಗಾಗಿ ಕೊಡಲು ಮನಸ್ಸಾಗುತ್ತಿಲ್ಲ ಎಂದರು.

ಧಾರವಾಡ ಜಿಲ್ಲೆಯು ಈ ಬಾರಿ ಬರ ಪೀಡಿತ ಜಿಲ್ಲೆಯ ಪಟ್ಟಿಯಲ್ಲಿದೆ. ಈಗಾಗಲೇ ಜಿಲ್ಲೆಯ 40 ಸಾವಿರ ರೈತರಿಗೆ ಮೇವು ಬೀಜಗಳ ಕಿಟ್‌ ವಿತರಣೆ ಮಾಡಲಾಗಿದೆ. ಹೊಲ ಇದ್ದವರು ಮೇವು ಹಾಗೂ ಇತರೆ ಬೆಳೆಗಳ ಮೂಲಕ ಮೇವು ಸಂಗ್ರಹಣೆ ಮಾಡಿದ್ದು ತಕ್ಕಮಟ್ಟಿಗೆ ತಮ್ಮ ಜಾನುವಾರುಗಳ ಪೋಷಣೆಯಲ್ಲಿದ್ದಾರೆ. ಆದರೆ, ಭೂಮಿ ಇಲ್ಲದವರ ಸ್ಥಿತಿ ತುಸು ಹದಗೆಟ್ಟಿದೆ. ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೇವಿನ ಕೊರತೆ ಉಂಟಾಗುತ್ತಿದೆ. ಪಶು ಸಂಗೋಪನೆ ಇಲಾಖೆ ಶೀಘ್ರ ಮೇವು ಬ್ಯಾಂಕ್‌ ಶುರು ಮಾಡುವ ಮೂಲಕ ಅಗತ್ಯವಿರುವ ರೈತರಿಗೆ ಮೇವು ಒದಗಿಸುವ ಕಾರ್ಯ ಮಾಡಬೇಕೆಂದು ರೈತ ಮುಖಂಡರು ಆಗ್ರಹಿಸುತ್ತಾರೆ.

ಕ್ವಿಂಟಾಲ್‌ಗೆ ₹11 ಸಾವಿರ ಕೊಟ್ಟು ಮೇವು ಖರೀದಿ ಮಾಡುತ್ತಿದ್ದು ರೈತರಿಗೆ ಕೆ.ಜಿ.ಗೆ ₹2ರಂತೆ ಕೊಡಲು ಎಲ್ಲ ರೀತಿ ಸಿದ್ಧತೆ ನಡೆದಿದೆ. ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ ಎಷ್ಟು ಪ್ರಮಾಣದಲ್ಲಿ ಮೇವು ಬೇಕೆಂದು ರೈತರಲ್ಲಿ ಕೇಳುತ್ತಿದ್ದು ವಾರದೊಳಗೆ ಮೇವು ಖರೀದಿ ಮಾಡಿ ಅಗತ್ಯವಿರುವ ರೈತರಿಗೆ ನೀಡಲಾಗುವುದು. ಸಾಕಷ್ಟು ಪ್ರಮಾಣದಲ್ಲಿ ಮೇವಿದ್ದು ಆರ್ಥಿಕ ಸಂಕಷ್ಟದ ಕಾರಣದಿಂದ ಯಾವುದೇ ಕಾರಣಕ್ಕೂ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಬೇಡಿ ಎಂದು ತಿಳಿವಳಿಕೆ ಹೇಳಲಾಗುತ್ತಿದೆ ಎಂದು ಪಶುಸಂಗೋಪನೆ ಇಲಾಖೆ ಪನಿರ್ದೇಶಕ ಡಾ.ರವಿ ಸಾಲಿಗೌಡರ ತಿಳಿಸಿದ್ದಾರೆ.