ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರು
ಇಡೀ ಪ್ರಪಂಚ ವಿವೇಕಾನಂದರಿಂದ ಲಾಭ ಮಾಡಿಕೊಳ್ಳುತ್ತಿದೆ. ವಿವೇಕಾನಂದರು ಮನುಷ್ಯ -ಮನುಷ್ಯನನ್ನು, ದೇವರು - ಮನುಷ್ಯನನ್ನು ಹಾಗೂ ವಿಜ್ಞಾನ ಮತ್ತು ಧರ್ಮದ ನಡುವಿನ ಅಂತರ ಕಡಿಮೆ ಮಾಡಿದರು. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಹೊರಗಡೆ ಮನುಷ್ಯ ಹೇಗೆ ಕಾಣಲಿ, ಅವನ ಒಳಗಿನ ದಿವ್ಯತೆಯ ಪರಿಚಯಿಸಿದರು. ಈ ಕಾರಣದಿಂದಾಗಿ ವಿವೇಕಾನಂದರು ನಮಗೆ ಹತ್ತಿರವಾಗುತ್ತಾರೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸ್ವಾಮೀಜಿ ತಿಳಿಸಿದರು.ಕುದೂರು ಗ್ರಾಮದ ಶ್ರೀಮತಿ ನೀಲಮ್ಮ ಸತ್ಯನಾರಾಯಣಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಧ್ಯಮ ಬಳಗದ ಸಹಯೋಗದಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಯುವ ಸಮ್ಮೇಳನದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಶಿಕ್ಷಣವೊಂದೇ ನಮ್ಮ ಎಲ್ಲಾ ಸಮಸ್ಯೆಗಳಿಗಿರುವ ದೊಡ್ಡ ಪರಿಹಾರ ಎಂದು ಸ್ವಾಮಿ ವಿವೇಕಾನಂದರು ಭಾವಿಸಿದ್ದರು. ಪ್ರಪಂಚದ ಯಾವುದೇ ಮುಂದುವರೆದ ರಾಷ್ಟ್ರಗಳನ್ನು ನೋಡಿದರೆ ಗೊತ್ತಾಗುತ್ತದೆ. ಉತ್ತಮ ಚಿಂತಕರ ಕೈಗೆ ದೇಶದ ಆಡಳಿತ ಕೊಟ್ಟಿರುತ್ತಾರೆ. ಮನುಷ್ಯರನ್ನು ರೂಪಿಸದೇ ವಸ್ತುಗಳಿಂದ ಆತನನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಸ್ವಾಮಿ ವಿವೇಕಾನಂದರು ಜಪಾನ್‌ಗೆ ಹಡಗಿನಲ್ಲಿ ಪ್ರಯಾಣಿಸುವಾಗ ಅದೇ ಹಡಗಿನಲ್ಲಿ ಜೆಮ್ ಶೆಡ್‌ಜೀ ಟಾಟಾರವರು ಪ್ರಯಾಣಿಸುತ್ತಿದ್ದರು. ಅವರು ಸ್ವಾಮೀಜಿಯವರನ್ನು ಪರಿಚಯಿಸಿಕೊಂಡು ಒಂದಷ್ಟು ಗಂಟೆ ಚರ್ಚೆ ಮಾಡುತ್ತಾರೆ. ಆಗ ಭಾರತದ ಬಡತನ ನಿವಾರಣೆಗೆ ಕೈಗಾರಿಕೆ ಮತ್ತು ತಂತ್ರಜ್ಞಾನದಿಂದ ಬೆಳವಣಿಗೆ ಸಾಧ್ಯ ಎಂಬುದನ್ನು ಟಾಟಾರವರಿಗೆ ಸ್ವಾಮೀಜಿಯವರು ಮಾರ್ಗದರ್ಶನ ನೀಡುತ್ತಾರೆ. ನಂತರ 1908 ರಲ್ಲಿ ಬೆಂಗಳೂರಿನಲ್ಲಿ ಟಾಟಾ ಇನ್ಸಿಟ್ಯೂಟನ್ನು ಆರಂಭಿಸಿದರು. ಇದರ ಹಿಂದೆ ಮೈಸೂರು ಮಹಾರಾಜರ ಪಾತ್ರವೂ ಹಿರಿದಾಗಿದೆ ಎಂದು ತಿಳಿಸಿದರು.
ಖಡ್ಗವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಅಲ್ಲ. ಭೀತಿಯಿಂದ ಜನರ ಹೃದಯವನ್ನು ಗೆಲ್ಲುವುದು ಅಸಾಧ್ಯ. ಬದಲಾಗಿ ಪ್ರೀತಿಯಿಂದ ಜನರ ಮನಸ್ಸನ್ನು ಗೆಲ್ಲಬಹುದು ಎಂಬುದನ್ನು ಸ್ವಾಮೀಜಿ 150 ವರ್ಷಗಳ ಹಿಂದೆಯೇ ತಿಳಿಸಿದ್ದರು ಎಂದು ಹೇಳಿದರು.ತೊರೆ ರಾಮನಹಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ಪರಮಾನಂದ ಸ್ವಾಮೀಜಿ ಮಾತನಾಡಿ, ಯುವಕರೊಳಗಿನ ಶಕ್ತಿಯನ್ನು ಹೊರಗೆ ತಂದು ಜಗತ್ತಿಗೆ ಪರಿಚಯಿಸಲು ಸ್ವಾಮಿ ವಿವೇಕಾನಂದರ ಚಿಂತನೆಗಳು ಹೆಚ್ಚು ಪರಿಣಾಮ ಬೀರಿವೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯೆ ಲತಾ ಗಂಗಯ್ಯ ಮಾತನಾಡಿ, ಯುವಶಕ್ತಿ ಅಣುಶಕ್ತಿಗಿಂತಲೂ ಶಕ್ತಿಯುತವಾಗಿರುತ್ತದೆ. ಆದರೆ ನಮ್ಮೊಳಗಿನ ಚೇತವನ್ನು ಬಡಿದೆಬ್ಬಿಸದೆ ಅದ್ಭುತವಾದುದನ್ನು ಸಾಧಿಸಲು ಸಾಧ್ಯವಿಲ್ಲ. ಭಾರತ ಎಂದರೆ ಜಡ ಭೂಮಿಯಲ್ಲ. ಇದು ನಮ್ಮ ಪುಣ್ಯಧಾಮವಾಗಬೇಕು. ನಮ್ಮ ಉದ್ದಾರವನ್ನು ನಾವೇ ಮಾಡಿಕೊಳ್ಳಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ಕುಸುಮಾ ಹೊನ್ನರಾಜ್ ಮಾತನಾಡಿ, ಇಂದಿನ ಪೀಳಿಗೆಯು ಮೊಬೈಲ್ ದಾಸರಾಗುವ ಬದಲು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾಚಾರ್ಯ ಡಾ.ಗುರುಮೂರ್ತಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಚಂದ್ರಶೇಖರ್, ವಿನಯ್, ರೇಖಾ ಧನರಾಜ್, ಸರಸ್ವತಿ, ಕುಸುಮಾ, ನರಸಿಂಹಮೂರ್ತಿ, ಹೇಮಾ ಚಂದ್ರಬಾಬು, ಶಂಕರ್, ಟಿ.ಕುಮಾರ್, ಉಪನ್ಯಾಸಕ ದೇವರಾಜ್, ರಾಜ್‌ಕುಮಾರ್, ರಾಘವೇಂದ್ರ, ವಿಜಯ್ ಕೂಡ್ಲೂರು ಉಪಸ್ಥಿತರಿದ್ದರು.