ರೈತರಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ಹಿಂಸಾಚಾರ, ಬೆಂಕಿ

| Published : Mar 12 2024, 02:00 AM IST

ರೈತರಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ಹಿಂಸಾಚಾರ, ಬೆಂಕಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಣಸಿನಕಾಯಿ ಮಾರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನ ದರ ತೀವ್ರ ಕುರಿತ ಕಂಡ ಹಿನ್ನೆಲೆಯಲ್ಲಿ ಸೋಮವಾರ ಸಾವಿರಾರು ರೈತರು ಹಿಂಸಾಚಾರಕ್ಕಿಳಿದ ಘಟನೆ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಮೆಣಸಿನಕಾಯಿ ಮಾರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನ ದರ ತೀವ್ರ ಕುರಿತ ಕಂಡ ಹಿನ್ನೆಲೆಯಲ್ಲಿ ಸೋಮವಾರ ಸಾವಿರಾರು ರೈತರು ಹಿಂಸಾಚಾರಕ್ಕಿಳಿದ ಘಟನೆ ಸೋಮವಾರ ನಡೆದಿದೆ.

ದರ ಕುಸಿತದಿಂದ ಆಕ್ರೋಶಗೊಂಡ ರೈತರು ಎಪಿಎಂಸಿ ಆಡಳಿತ ಕಚೇರಿ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದ್ದಲ್ಲದೆ, ಅಧ್ಯಕ್ಷ, ಕಾರ್ಯದರ್ಶಿಗಳ ವಾಹನ ಸೇರಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ವಾಹನಕ್ಕೂ ಬೆಂಕಿ ಹಚ್ಚಿ, ಅದರಲ್ಲಿದ್ದ ಸಿಬ್ಬಂದಿ ಹಾಗೂ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರನ್ನು ಅಟ್ಟಾಡಿಸಿ ಓಡಿಸಿದ್ದಾರೆ. ಜತೆಗೆ, ಸಿಕ್ಕ ಸಿಕ್ಕ ವಾಹನ, ಅಂಗಡಿಗಳತ್ತ ಕಲ್ಲು ತೂರಿದ್ದಾರೆ. ಗಲಾಟೆ ವೇಳೆ 7ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಾಕಿದ್ದು, ಎಪಿಎಂಸಿ ಕಚೇರಿಯಲ್ಲಿದ್ದ ಪೀಠೋಪಕರಣ, ಕಿಟಕಿ ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.

ಗಲಾಟೆ ಆರಂಭವಾದಾಗ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಹಾಗೂ ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ವಾಹನದ ಸಿಬ್ಬಂದಿ ರೈತರ ಆಕ್ರೋಶಕ್ಕೆ ಹಿಮ್ಮೆಟ್ಟ ಬೇಕಾಯಿತಾದರೂ ಬಳಿಕ ಹೆಚ್ಚಿನ ಸಿಬ್ಬಂದಿ ಹಿರಿಯ ಪೊಲೀಸ್‌ ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಒಂದು ಹಂತದಲ್ಲಿ ಪರಿಸ್ಥಿತಿ ಹತೋಟಿ ಮೀರುವ ಸಾಧ್ಯತೆ ಕಂಡು ಬಂದರೂ ಪೊಲೀಸರು ಸಂಯಮ ತೋರುವ ಮೂಲಕ ಪರಿಸ್ಥಿತಿ ನಿಭಾಯಿಸಿದರು.

4ರಿಂದ 6 ಸಾವಿರ ಕುಸಿತ:

ಕಳೆದ ಮೂರು ವಾರದಿಂದ 3 ಲಕ್ಷ ಚೀಲಕ್ಕೂ ಅಧಿಕ ಮೆಣಸಿನಕಾಯಿ ಆವಕವಾಗುತ್ತಿದೆ. ಆದರೂ ದರಲ್ಲಿ ಸ್ಥಿರತೆ ಇತ್ತು. ನಿರೀಕ್ಷೆಯಂತೆ ಸೋಮವಾರವೂ 3 ಲಕ್ಷ ಚೀಲಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕವಾಗಿತ್ತು. ಆದರೆ ದರದಲ್ಲಿ ಕ್ವಿಂಟಲ್‌ಗೆ 4ರಿಂದ 6 ಸಾವಿರ ರು. ಕುಸಿತವಾಗಿದೆ ಎಂದು ಆರೋಪಿಸಿ ಕೆಲ ರೈತರು ಎಪಿಎಂಸಿ ಕಚೇರಿಯತ್ತ ತೆರಳಿ ದಿಢೀರ್‌ ಪ್ರತಿಭಟನೆ ಆರಂಭಿಸಿದರು.

ಸುದ್ದಿ ತಿಳಿದು ಆಂಧ್ರ, ಬಳ್ಳಾರಿ ಸೇರಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ರೈತರು ಸ್ಥಳದಲ್ಲಿ ಜಮಾವಣೆಗೊಂಡು ಎಪಿಎಂಸಿ ಕಚೇರಿಯತ್ತ ಕಲ್ಲು ತೂರಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ನಂತರ ಕಚೇರಿ ಮುಂಭಾಗ ನಿಂತಿದ್ದ ಮೂರು ವಾಹನಗಳಿಗೆ ಬೆಂಕಿ ಹಚ್ಚಿದರು. ಬಳಿಕ ಕಚೇರಿ ಸಿಬ್ಬಂದಿ ಕಾರುಗಳನ್ನು ಸಹ ಸುಟ್ಟು ಭಸ್ಮಗೊಳಿಸಿದರು, ಕೈಗೆ ಸಿಕ್ಕಂತಹ ಕಲ್ಲು ದೊಣ್ಣೆಗಳಿಂದ ಸಿಕ್ಕ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿದರು.

ಆರಂಭದಲ್ಲಿ ಕಚೇರಿ ಎದುರು ನಿಂತಿದ್ದ ವಾಹನಗಳಿಗೆ ರೈತರು ಬೆಂಕಿ ಹಚ್ಚಿದರು. ಪೀಠೋಪಕರಣಗಳಿಗೂ ಅಗ್ನಿಸ್ಪರ್ಶವಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ವಾಹನ, ಪೊಲೀಸರು ಬಂದರು. ರೈತರ ಆಕ್ರೋಶ ಪೊಲೀಸರತ್ತ ತಿರುಗಿತು. ಆಗ ಸಾವಿರಾರು ರೈತರು ಹತ್ತಾರು ಪೊಲೀಸರನ್ನು ಅಟ್ಟಿಸಿಕೊಂಡು ಹೋದರು. ಇಷ್ಟಕ್ಕೇ ಸುಮ್ಮನಾಗದ ರೈತರ ಆಕ್ರೋಶ ನಂತರ ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ವಾಹನದತ್ತ ತಿರುಗಿತು. ಅಗ್ನಿಶಾಮಕದಳದ ಸಿಬ್ಬಂದಿಯನ್ನು ವಾಹನದಿಂದ ಕೆಳಗಿಳಿಸಿ ಅಟ್ಟಾಡಿಸಿ ಥಳಿಸಿದರಲ್ಲದೆ, ಪೆಟ್ರೋಲ್, ಡೀಸೆಲ್ ಸುರಿದು ಅಗ್ನಿಶಾಮಕ ವಾಹನಕ್ಕೇ ಬೆಂಕಿ ಹಚ್ಚಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಬೆರಳೆಣಿಕೆಯಷ್ಟು ಪೊಲೀಸರು ಲಾಠಿ ಬೀಸಲು ಮುಂದಾದಾಗ ತಿರುಗಿಬಿದ್ದ ರೈತರು ಪೊಲೀಸರನ್ನೂ ಬೆನ್ನತ್ತಿ ಥಳಿಸಿದರು. ಘಟನೆಯಲ್ಲಿ ಹಲವು ರೈತರು ಗಾಯಗೊಂಡರು.

ಇದೊಂದು ಕರಾಳದಿನ

ಮೆಣಸಿನಕಾಯಿ ಗುಣಮಟ್ಟಕ್ಕೆ ತಕ್ಕಂತೆ ನಾವುಗಳು ದರ ನೀಡಿದ್ದೇವೆ. ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಎಷ್ಟೇ ಮೆಣಸಿನಕಾಯಿ ಬಂದರೂ ನಾವು ಖರೀದಿಸುತ್ತೇವೆ. ದರ ಕುಸಿತವಾಗಿದೆ ಎಂದಾದಲ್ಲಿ ಚರ್ಚೆ ನಡೆಸಬೇಕಿದ್ದ ರೈತರು ಏಕಾಏಕಿ ಹಿಂಸಾತ್ಮಕ ಹೋರಾಟ ಮಾಡಿದ್ದು ಮನಸ್ಸಿಗೆ ತುಂಬಾ ನೋವು ಮಾಡಿದೆ. ಮಾರುಕಟ್ಟೆ ಇತಿಹಾಸದಲ್ಲಿಯೇ ಇದೊಂದು ಕರಾಳ ದಿನ.

- ಸುರೇಶಗೌಡ ಪಾಟೀಲ ವರ್ತಕರ ಸಂಘದ ಅಧ್ಯಕ್ಷ