ರೈತರು ವೈಜ್ಞಾನಿಕ ಶಿಫಾರಸು ಅಳವಡಿಸಿಕೊಂಡು ಗೊಬ್ಬರ ಬಳಸಿ

| Published : Jan 02 2025, 12:32 AM IST

ಸಾರಾಂಶ

ರೈತರು ವೈಜ್ಞಾನಿಕ ಶಿಫಾರಸುಗಳನ್ನು ಅಳವಡಿಸಿ, ಅರಿಶಿಣದಂತ ಬೆಳೆಯಲ್ಲಿ ರಸಗೊಬ್ಬರಗಳನ್ನು ಬಳಸಿದಾಗ ರಸಗೊಬ್ಬರಗಳಲ್ಲಿನ ಪೋಷಕಾಂಶಗಳು ಪೋಲಾಗಿ ನಷ್ಟ ಉಂಟಾಗದೇ, ನಿರ್ದಿಷ್ಟ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ದೊರೆತು ಬೆಳೆ ಬೆಳವಣಿಗೆ ಮತ್ತು ಇಳುವರಿ ಉತ್ತಮಗೊಂಡು ರೈತರಿಗೆ ಲಾಭ ಉಂಟಾಗುತ್ತದೆ ಎಂದು ರಾಷ್ಟ್ರೀಯ ಮಣ್ಣಿನ ಸಮೀಕ್ಷೆ ಮತ್ತು ಮತ್ತು ಭೂ ಬಳಕೆ ಯೋಜನೆ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ರಾಜೇಂದ್ರ ಹೆಗ್ಗಡೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರು ವೈಜ್ಞಾನಿಕ ಶಿಫಾರಸುಗಳನ್ನು ಅಳವಡಿಸಿ, ಅರಿಶಿಣದಂತ ಬೆಳೆಯಲ್ಲಿ ರಸಗೊಬ್ಬರಗಳನ್ನು ಬಳಸಿದಾಗ ರಸಗೊಬ್ಬರಗಳಲ್ಲಿನ ಪೋಷಕಾಂಶಗಳು ಪೋಲಾಗಿ ನಷ್ಟ ಉಂಟಾಗದೇ, ನಿರ್ದಿಷ್ಟ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ದೊರೆತು ಬೆಳೆ ಬೆಳವಣಿಗೆ ಮತ್ತು ಇಳುವರಿ ಉತ್ತಮಗೊಂಡು ರೈತರಿಗೆ ಲಾಭ ಉಂಟಾಗುತ್ತದೆ ಎಂದು ರಾಷ್ಟ್ರೀಯ ಮಣ್ಣಿನ ಸಮೀಕ್ಷೆ ಮತ್ತು ಮತ್ತು ಭೂ ಬಳಕೆ ಯೋಜನೆ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ರಾಜೇಂದ್ರ ಹೆಗ್ಗಡೆ ಸಲಹೆ ನೀಡಿದರು.

ಬೆಂಗಳೂರು ಕೃಷಿ ವಿವಿ ಮತ್ತು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಮುತ್ತಿಗೆ ಗ್ರಾಮದಲ್ಲಿ ರಿವಾರ್ಡ್ ಯೋಜನೆಯಡಿ ಅರಿಶಿಣ ಬೆಳೆಯಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ರಸಗೊಬ್ಬರಗಳ ಬಳಕೆಯ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರ ಬಳಸಿದರೆ ಮಣ್ಣು, ನೀರು ಮತ್ತು ಬೆಳೆ ಪರಿಸರ ಕಲುಷಿತಗೊಳ್ಳದೇ ಗುಣಮಟ್ಟದ ಉತ್ಪನ್ನ ಪಡೆಯಲು ಸಹಕಾರಿಯಾಗಿ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರೆಯುವ ಸಂಭವ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ರಸ ಗೊಬ್ಬರಗಳಿಗೆ ಸರ್ಕಾರ ನೀಡುತ್ತಿರುವ ಸಬ್ಸಿಡಿಯ ಪರಿಣಾಮವಾಗಿ ಕಡಿಮೆ ವೆಚ್ಚದಲ್ಲಿ ದೊರೆಯುತ್ತಿದ್ದು, ಸಬ್ಸಿಡಿ ಭಾಗವನ್ನು ಬಿಟ್ಟು ರಸಗೊಬ್ಬರಗಳ ವೆಚ್ಚ ಲೆಕ್ಕ ಹಾಕಿದರೆ ಅವು ಪ್ರಸ್ತುತ ಇರುವ ವೆಚ್ಚಕ್ಕಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದ್ದು ರೈತರ ಕೈಗೆ ಎಟುಕದಂತ ಪರಿಸ್ಥಿತಿ ಇರುತ್ತದೆ ಎಂದು ತಿಳಿಸಿದರು.ಮಣ್ಣಿನ ಫಲವತ್ತತೆ ಮತ್ತು ಬೆಳೆ ಅವಶ್ಯಕತೆನುಗುಣವಾಗಿ ರಸಗೊಬ್ಬರಗಳನ್ನು ಪರೀಕ್ಷೆಯ ಆಧಾರದ ಮೇಲೆ ಬಳಸಿಕೊಳ್ಳಬೇಕು. ಸೂಕ್ತ ನಿರ್ವಹಣೆ ಇಲ್ಲದೆ ರಸಗೊಬ್ಬರಗಳ ಬಳಕೆಯಿಂದ ಬೆಳೆಯ ಪ್ರತಿಕ್ರಿಯೆ ಕ್ಷೀಣಿಸುತ್ತಿದ್ದು, ಇದಕ್ಕೆ ಮಣ್ಣಿನ ಗುಣ ಧರ್ಮಗಳು ನಶಿಸುತ್ತಿರುವುದೇ ಕಾರಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಿವಾರ್ಡ್‌ ಯೋಜನೆ ಮುಖ್ಯಸ್ಥ ಡಾ.ಸತೀಶ್‌, ಯೋಜನೆಯಿಂದ ಅನುಷ್ಠಾನಗೊಂಡಿರುವ ಪ್ರಾತ್ಯಕ್ಷಿಕೆಗಳ ವಿವರಣೆ ನೀಡಿ ಭೂ ಸಂಪನ್ಮೂಲ ಆಧಾರಿತ ಮಾಹಿತಿಯ ಕ್ರೋಢೀಕರಣ, ವಿಶ್ಲೇಷಣೆ ಹಾಗೂ ಅದರಿಂದ ಹೊರಬಂದ ವರದಿಯ ಕ್ಷೇತ್ರ ಮಟ್ಟದ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕಿ ರೂಪ ಅವರು ಈ ಯೋಜನೆಯಿಂದ ಕೈಗೊಂಡಿರುವ ವಿಶ್ಲೇಷಣೆಗಳ ವರದಿಯ ಪ್ರಕಾರ ರೈತರು ತಮ್ಮ ಭೂಸಂಪನ್ಮೂಲವನ್ನು ಆಧರಿಸಿ, ಬೆಳೆಗಳನ್ನು ಆಯ್ಕೆ ಮಾಡಿ, ಸೂಕ್ತ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಪ್ರಮುಖವಾಗಿ ರಸಗೊಬ್ಬರಗಳನ್ನು ಸರಿಯಾದ ಮೂಲದಿಂದ, ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಮಣ್ಣಿನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಒದಗಿಸಬೇಕೆಂದು ತಿಳಿಸಿದರು. ಇದರಿಂದ ರಸಗೊಬ್ಬರ ಬಳಕೆಯ ಕ್ಷಮತೆ ಹೆಚ್ಚಿ ಬೆಳೆಗಳಿಗೆ ಅನುಕೂಲಕರವಾಗುವುದೆಂದು ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಯೋಗೇಶ್,ಜಿ.ಎಸ್. ಪ್ರಸ್ತುತ ಅರಿಶಿಣ ಬೆಳೆಗೆ ರೈತರು ಶಿಫಾರಸ್ಸಿನಂತೆ ಮೂರು ಕಂತಗಳಲ್ಲಿ ಮಣ್ಣು ಪರೀಕ್ಷೆ ಆಧಾರಿತವಾಗಿ ರಸಗೊಬ್ಬರಗಳನ್ನು ಒದಗಿಸಿರುವುದು ಶ್ಲಾಘನೀಯ, ಇದರಿಂದ ಮಣ್ಣಿನ ಪರೀಕ್ಷೆಯ ಆಧಾರವಾಗಿ ಬೆಳೆಪೋಷಣೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕಟಾವಿನ ನಂತರ ಇಳುವರಿ ಹಾಗೂ ಆರ್ಥಿಕತೆ ಲೆಕ್ಕಾಚಾರ ಮಾಡಿ ತಿಳಿಸಿಕೊಡಲಾಗುವುದು ಎಂದರು.

ಕೃಷಿ ಅಧಿಕಾರಿ ಜಯಶಂಕರ ಮಾತನಾಡಿ, ತಮ್ಮಲ್ಲಿ ಕಂಡುಬರುವ ವ್ಯವಸಾಯ ಸಂಬಂಧಿತ ಸಮಸ್ಯೆಗಳನ್ನು ವಿಜ್ಞಾನಿಗಳು ಹಾಗೂ ಅಧಿಕಾರಿಗಳೊಂದಿಗೆ ತಿಳಿಸಿ ಪರಿಹಾರಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರ ಬಳಸಿದರೆ ಮಣ್ಣು, ನೀರು ಮತ್ತು ಬೆಳೆ ಪರಿಸರ ಕಲುಷಿತಗೊಳ್ಳದೇ ಗುಣಮಟ್ಟದ ಉತ್ಪನ್ನ ಪಡೆಯಲು ಸಹಕಾರಿಯಾಗಿ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರೆಯುವ ಸಂಭವ ಹೆಚ್ಚಾಗಿರುತ್ತದೆ ಎಂದರು.

ಪ್ರಗತಿಪರ ರೈತ ಶಿವನಕಾರಪ್ಪ ಮಾತನಾಡಿ, ಭೂ ಸಂಪನ್ಮೂಲ ಮಾಹಿತಿ ಕಾರ್ಡ್ ಆಧಾರಿತ ಫಲಿತಾಂಶಗಳನ್ನು ಅವಲಂಬಿಸಿ ಮೂರು ಕಂತಗಳಲ್ಲಿ ರಸಗೊಬ್ಬರ ಬಳಸಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.

ಪ್ರಗತಿಪರ ರೈತ ಶಾಂತಪ್ಪನವರು ಯೋಜನೆಯು ರೈತರಿಗೆ ಬಹಳ ಸಹಕಾರಿಯಾಗಿದ್ದು ರೈತರು ಇದಕ್ಕೆ ಸ್ಪಂದಿಸಿ, ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಫಲಾನುಭವಿ ರೈತ .ರೇವಣ್ಣ ಮಾತನಾಡಿ, ಶಿಫಾರಸ್ಸಿನಂತೆ ಬೆಳೆಗಳಿಗೆ ರಸಗೊಬ್ಬರ ಒದಗಿಸಲಾಗಿದೆ, ಬೆಳವಣಿಗೆ ಚೆನ್ನಾಗಿ ಕಂಡುಬಂದಿದ್ದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇನೆ ಎಂದರು. ಕಾರ್ಯಕ್ರಮದ ಪ್ರಯುಕ್ತ ಮಾದರಿ ಅರಿಶಿಣ ಪ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಲಾಯಿತು.

ಕೃಷಿ ಅಧಿಕಾರಿ ಮಹದೇವಪ್ರಸಾದ್‌, ರಿವಾರ್ಡ್ ಯೋಜನೆಯ ಸಂಶೋಧನಾ ಸಹಾಯಕ ಡಾ.ಸಿದ್ಧು ಮತ್ತು ಯೋಜನೆಯ ತಾಂತ್ರಿಕ ಸಿಬ್ಬಂದಿ ಚಂದನ್, ಸತೀಶ್, ಅನಂತನಾಗ್, ಬಸವರಾಜು, ಗಣೇಶ್, ಮಹದೇವಪ್ರಸಾದ್, ಮಹೇಶ್‌ಕುಮಾರ್, ಮಂಜುಪ್ರಸಾದ್, ರಮೇಶ್, ಚಂದ್ರ್ರಶೇಖರ್, ಪ್ರಗತಿಪರ ರೈತರಾದ ರೇವಣ್ಣ, ಶಿವಯ್ಯ, ವೀರತಪ್ಪ, ಮಹೇಶ್ ಹಾಗೂ ಮುತ್ತಿಗೆ, ಹೆಗ್ಗೋಠಾರ ಮತ್ತು ಗೋವಿಂದವಾಡಿ ಗ್ರಾಮಗಳ ರೈತರು ಭಾಗವಹಿಸಿದ್ದರು.