ದೇಶದ ಕೃಷಿಕರಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಸಿಗುವ ನಿಟ್ಟಿನಲ್ಲಿ ಸಂಸತ್‌ನಲ್ಲಿ ಚರ್ಚಿಸಲು ಯೋಜಿಸಿದ್ದೇನೆ. ಬಡ್ಡಿ, ಚಕ್ರಬಡ್ಡಿ ಹೆಚ್ಚಾಗಿದ್ದರಿಂದ ರೈತರು, ಉದ್ಯಮಿಗಳು ತೊಂದರೆಗೆ ಸಿಲುಕಿದ್ದಾರೆ. ಈ ಕುರಿತು ಸಮಗ್ರ ಅಧ್ಯಯನ ಆಗಬೇಕಿದೆ.

ಧಾರವಾಡ:

ದೇಶದ ಕೃಷಿಕರಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಸಿಗುವ ನಿಟ್ಟಿನಲ್ಲಿ ಸಂಸತ್‌ನಲ್ಲಿ ಚರ್ಚಿಸಲು ಯೋಜಿಸಿದ್ದೇನೆ. ಬಡ್ಡಿ, ಚಕ್ರಬಡ್ಡಿ ಹೆಚ್ಚಾಗಿದ್ದರಿಂದ ರೈತರು, ಉದ್ಯಮಿಗಳು ತೊಂದರೆಗೆ ಸಿಲುಕಿದ್ದಾರೆ. ಈ ಕುರಿತು ಸಮಗ್ರ ಅಧ್ಯಯನ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್‌ ಹೇಳಿದರು.ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ವಿರೂಪಾಕ್ಷಪ್ಪ ಶಿವಯೋಗೆಪ್ಪ ಬಸವನಾಳ ದತ್ತಿ ಅಂಗವಾಗಿ ಆಯೋಜಿಸಿದ್ದ `ವಿ.ಎಸ್. ಬಸವನಾಳರ ಸಾಹಿತ್ಯ ಮತ್ತು ಸಮಾಜ ಸೇವೆ’ ವಿಷಯ ಕುರಿತು ಉಪನ್ಯಾಸ ಹಾಗೂ ಕೆಸಿಸಿ ಬ್ಯಾಂಕಿನ ನಿವೃತ್ತ ಸಿಬ್ಬಂದಿಗಳಿಗೆ ಸತ್ಯಶುದ್ಧ ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಸಾಲ ಪಡೆಯಬೇಕಾದರೆ ಶೇ. ೯ರಿಂದ ೧೧ರಷ್ಟು ದುಬಾರಿ ಬಡ್ಡಿ ತೆರಬೇಕು. ಜತೆಗೆ ಹಲವಾರು ಕ್ಲಿಷ್ಟಕರ ಕಾನೂನು ಪ್ರಕ್ರಿಯೆ ಎದುರಿಸಬೇಕು. ಇದರಿಂದ ಬೇಸತ್ತ ರೈತರು ಸರಳವಾಗಿ ಸಾಲ ಪಡೆಯಲು ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಿಗೆ ಮೊರೆ ಹೋಗುತ್ತಾರೆ ಎಂದ ಅವರು, ಇದಕ್ಕೆ ಬಡ್ಡಿ ಮೊತ್ತ ಹೆಚ್ಚಾದರೂ ಲೆಕ್ಕಿಸದೆ ತುಂಬುತ್ತಾರೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ರೈತರಿಗೆ ಶೇ ೪-೫ರಷ್ಟು ಬಡ್ಡಿ ಮೊತ್ತ ದರದಲ್ಲಿ ಸಾಲ ಸಿಗುತ್ತಿದೆ ಎಂದು ತಿಳಿಸಿದರು.

ವಿ.ಎಸ್. ಬಸವನಾಳರು ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರು ೪೦ ವರ್ಷ ಕೆಸಿಸಿ ಬ್ಯಾಂಕಿನ ಕಾರ್ಯಾಧ್ಯಕ್ಷರಾಗಿ ಸಮರ್ಥವಾಗಿ ಸೇವೆ ಸಲ್ಲಿಸಿ ರೈತ ಸಂಕುಲಕ್ಕೆ ಸಹಾಯ, ಸಹಕಾರ ಮಾಡಿದ್ದಾರೆ. ಬಸವನಾಳರಂತೆ ಎಲ್ಲರೂ ಸ್ವಹಿತಾಸಕ್ತಿ ಬದಿಗಿರಿಸಿ ಸಮಾಜದ ಅಭಿವೃದ್ಧಿ ದೃಷ್ಟಿಯಲ್ಲಿ ಆಸ್ತೆ ವಹಿಸಬೇಕು ಎಂದರು.

ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಪಾಟೀಲ, ವಿ.ಎಸ್. ಬಸವನಾಳರ ಸಾಹಿತ್ಯ ಮತ್ತು ಸಮಾಜ ಸೇವೆ’ ವಿಷಯ ಕುರಿತು ಮಾತನಾಡಿ, ಬಸವನಾಳರ ವ್ಯಕ್ತಿತ್ವ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದರು.

ಧಾರವಾಡ ಸಹಕಾರಿ ತರಬೇತಿ ಕೇಂದ್ರದ ವಿಶ್ರಾಂತ ಪ್ರಾಚಾರ್ಯ ಬಿ.ಎಲ್. ಶಿವಳ್ಳಿ ಮಾತನಾಡಿ, ಕೆಸಿಸಿ ಬ್ಯಾಂಕ್ ಬೆಳೆದು ಬಂದ ರೀತಿ, ಅದು ಎದುರಿಸಿದ ಸಂಕಷ್ಟ ಹಾಗೂ ಪುನಶ್ಚೇತನಗೊಂಡು ಮತ್ತೆ ಲಯಕಂಡುಕೊಂಡು ಯಶಸ್ವಿಯಾಗಿ ರೈತರ ಸೇವೆಯಲ್ಲಿ ತೊಡಗಿಕೊಂಡ ಕುರಿತು ವಿವರಿಸಿದರು.ಕೆಸಿಸಿ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್‌ ಎಸ್.ಜಿ. ಪಾಟೀಲ ಮಾತನಾಡಿದರು. ನಿವೃತ್ತ ಕೆಸಿಸಿ ಬ್ಯಾಂಕ್ ಸಿಬ್ಬಂದಿಗಳಾದ ಎನ್.ಆರ್. ಪಾಟೀಲ, ಎಸ್. ಸಿ. ಪ್ರಸಾರದ, ಎಸ್.ಬಿ. ಸಿದ್ಧನಗೌಡ ಹಾಗೂ ಟಿ.ಎಸ್. ಬೀಗದಕೈ ಅವರಿಗೆ ಸತ್ಯ ಶುದ್ಧ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಈ ವೇಳೆ ರವೀಂದ್ರ ಬಸವನಾಳ, ಶಂಕರ ಕುಂಬಿ, ಡಾ. ಮಹೇಶ ಹೊರಕೇರಿ, ಗುರು ಹಿರೇಮಠ, ಶಿವಾನಂದ ಭಾವಿಕಟ್ಟಿ, ಶೋಭಾ ಪಾಟೀಲ, ವೀರಣ್ಣ ಒಡ್ಡೀನ, ಸಿ.ಎಸ್. ಪಾಟೀಲ, ಶಂಕರಲಿಂಗ ಶಿವಳ್ಳಿ, ಕೆ.ಎನ್. ಹೊಂಗಲ, ಶ್ರೇಯಸ್ ಪಾಟೀಲ, ಸಿ.ಎಂ.ಶಿವಳ್ಳಿ, ಡಾ. ಅಶೋಕ ಕೋರಿ, ದೇಶಪಾಂಡೆ, ವಿ.ಎಸ್. ಪಾಟೀಲ, ಎಸ್.ಎಂ. ಜಾಲಾದಿ, ಶಂಕರ ಬೆಟಗೇರಿ, ನಾಗರಾಜ ಹಂಗಳಕಿ ಸೇರಿದಂತೆಅನೇಕರು ಭಾಗವಹಿಸಿದ್ದರು.