ಸಾರಾಂಶ
ಅತಿಯಾದ ರಾಸಾಯನಿಕ ಬಳಕೆ ಭೂಮಿಯನ್ನು ಹಾಳು ಮಾಡುತ್ತದೆ. ಇದರೊಂದಿಗೆ ಸಾಂಪ್ರದಾಯಿಕ ಕೃಷಿಯಲ್ಲಿನ ಒಳ್ಳೆಯ ಅಂಶಗಳನ್ನು ಉಳಿಸಿಕೊಂಡು ಬಳಸುವ ಅಗತ್ಯವಿದೆ.
ಹಾನಗಲ್ಲ: ಮಳೆ ಕೊರತೆಯಿಂದ ಬರದ ಛಾಯೆ ಕಾಡುತ್ತಿರುವ ಈ ಕಾಲದಲ್ಲಿ ನೀರು ಇಂಗಿಸುವುದು ಹಾಗೂ ಭೂಮಿಯ ಸವಕಳಿ ತಡೆಯುವಲ್ಲಿ ಕೃಷಿಕರು ಮಹತ್ವದ ಕಾಳಜಿ ವಹಿಸುವ ಅಗತ್ಯವಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸೋಮಶೇಖರ ಅಂಗಡಿ ತಿಳಿಸಿದರು.ತಾಲೂಕಿನ ಯಳ್ಳೂರು ಗ್ರಾಮದ ಪ್ರತಿಪರ ರೈತ ಗುಡ್ಡಪ್ಪ ಕಳ್ಳಿಮನಿ ಅವರ ಕೃಷಿ ಭೂಮಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ನೆಲ ಜನ ಸಂರಕ್ಷಣೆ ಹಾಗೂ ಮಳೆ ಕೊಯ್ಲು ವಿಷಯದ ಕುರಿತ ಒಂದು ದಿನ ಕಾರ್ಯಾಗಾರದಲ್ಲಿ ಮಾತನಾಡಿ, ಸಾವಯವ ಕೃಷಿಯಿಂದ ಸತ್ವಯುತ ಕೃಷಿ ಭೂಮಿಯನ್ನು ಉಳಿಸಕೊಳ್ಳಲು ಸಾಧ್ಯ ಎಂದರು.
ಅತಿಯಾದ ರಾಸಾಯನಿಕ ಬಳಕೆ ಭೂಮಿಯನ್ನು ಹಾಳು ಮಾಡುತ್ತದೆ. ಇದರೊಂದಿಗೆ ಸಾಂಪ್ರದಾಯಿಕ ಕೃಷಿಯಲ್ಲಿನ ಒಳ್ಳೆಯ ಅಂಶಗಳನ್ನು ಉಳಿಸಿಕೊಂಡು ಬಳಸುವ ಅಗತ್ಯವಿದೆ. ನೀರಿನ ಸದ್ಬಳಕೆಗಾಗಿ ಕೃಷಿ ಹೊಂಡ ನಿರ್ಮಾಣ, ಕೊಳವೆ ಭಾವಿಗಳಿಗೆ ನೀರು ಇಂಗಿಸುವುದು, ಬದುಗಳ ನಿರ್ಮಾಣದ ಜತೆಗೆ ನೀರು ಪೋಲಾಗುವುದನ್ನು ತಪ್ಪಿಸಬೇಕು. ಅಲ್ಲದೆ ಹಿತ ಮಿತವಾಗಿ ನೀರು ಬಳಸುವಲ್ಲಿ ಕೃಷಿಕರ ಪಾತ್ರ ಬಹು ದೊಡ್ಡದು ಎಂದರು.ಪ್ರಗತಿಪರ ರೈತ ಗುಡ್ಡಪ್ಪ ಕಳ್ಳಿ ಮಾತನಾಡಿ, ಋತುಚಕ್ರಗಳ ಬದಲಾವಣೆ, ವೈಪರಿತ್ಯಗಳಿಂದಾಗಿ ಕೃಷಿ ಅತ್ಯಂತ ಅಸಮತೋಲನದಲ್ಲಿದೆ. ರೈತರಿಗೆ ಬೆಳೆ ಆಯ್ಕೆಯೂ ಒಂದು ಸವಾಲಾಗಿದೆ. ಮಳೆಯ ಅನಿಶ್ಚಿತತೆಯೂ ರೈತನನ್ನು ದಾರಿ ತಪ್ಪಿಸುತ್ತಿದೆ. ಭೂಮಿಯ ಫಲವತ್ತತೆಯೂ ಹಾಳಾಗುತ್ತಿದೆ. ರಾಸಾಯನಿಕರ ಮಾರಕವಾಗಿ ಪರಿಣಮಿಸಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದಕ್ಕೆಲ್ಲ ಕೃಷಿ ಸಮುದಾಯ ಬುದ್ಧಿ ಬಳಸಿ ನಾಳಿನ ಪೀಳಿಗೆಗಾಗಿ ಕೃಷಿಯನ್ನು ಉಳಿಸಬೇಕಾಗಿದೆ. ಅದಕ್ಕಾಗಿ ಜಾಗೃತಿ ಕಾರ್ಯಕ್ರಮಗಳೂ ನಿರಂತರವಾಗಿ ನಡೆಯಬೇಕು ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಕೃಷಿ ಮೇಲ್ವಿಚಾರಕ ಮಹಾಂತೇಶ ಹರಕುಣಿ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಯಾರನ್ನೇ ದೂರುವ ಮೊದಲು ನಮ್ಮ ಜವಾಬ್ದಾರಿಯನ್ನು ಅರಿಯಬೇಕಾಗಿದೆ. ಶತಮಾನಗಳ ಆಚೆಗಿನ ಕೃಷಿ ಈಗಿಲ್ಲ. ಬದಲಾದ ಕಾಲದಲ್ಲಿ, ವೈಜ್ಞಾನಿಕ ಯುಗದಲ್ಲಿ ಸುಧಾರಿತ ಕೃಷಿಗೆ ಒತ್ತು ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೀರನಗೌಡ ಪಾಟೀಲ, ಮಹದೇವಪ್ಪ ನರೇಗಲ್ಲ, ದೀಪಾ ಅರಳೇಶ್ವರ ಮೊದಲಾದವರು ಮಾತನಾಡಿದರು.