ರೈತರಿಗೆ ಕೃಷಿಯಲ್ಲಿ ಆಸಕ್ತಿ, ಉತ್ಸಾಹ ಮೂಡಿಸುವಂತಾಗಬೇಕು: ಕೆ.ಎಸ್.ಆನಂದ್

| Published : Dec 25 2023, 01:31 AM IST

ರೈತರಿಗೆ ಕೃಷಿಯಲ್ಲಿ ಆಸಕ್ತಿ, ಉತ್ಸಾಹ ಮೂಡಿಸುವಂತಾಗಬೇಕು: ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಇಲಾಖೆ ಮತ್ತು ತಾಲೂಕು ಕೃಷಿಕ ಸಮಾಜದಿಂದ ಎಪಿಎಂಸಿ ಆವರಣದಲ್ಲಿ ನಡೆದ ಜಲಾನಯನ ಮೇಳ, ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಿರಿಧಾನ್ಯ ಕಾರ್ಯಾಗಾರ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್ಬ ಬರಗಾಲದಿಂದ ನಿರಂತರ ಸಂಕಷ್ಟದಿಂದ ತತ್ತರಿಸಿ ಹೋಗಿರುವ ರೈತರಿಗೆ ಕೃಷಿ ಕಾರ್ಯದಲ್ಲಿ ಆಸಕ್ತಿ, ಉತ್ಸಾಹ ಮೂಡಿಸಲು ರಾಜ್ಯ ಸರ್ಕಾರದೊಂದಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

- ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಿರಿಧಾನ್ಯ ಕಾರ್ಯಾಗಾರ ಉದ್ಘಾಟನೆಕನ್ನಡಪ್ರಭ ವಾರ್ತೆ, ಕಡೂರು

ನಿರಂತರ ಸಂಕಷ್ಟದಿಂದ ತತ್ತರಿಸಿ ಹೋಗಿರುವ ರೈತರಿಗೆ ಕೃಷಿ ಕಾರ್ಯದಲ್ಲಿ ಆಸಕ್ತಿ, ಉತ್ಸಾಹ ಮೂಡಿಸಲು ರಾಜ್ಯ ಸರ್ಕಾರದೊಂದಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಶನಿವಾರ ಕೃಷಿ ಇಲಾಖೆ ಮತ್ತು ತಾಲೂಕು ಕೃಷಿಕ ಸಮಾಜದಿಂದ ಎಪಿಎಂಸಿ ಆವರಣದಲ್ಲಿ ನಡೆದ ಜಲಾನಯನ ಮೇಳ, ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಿರಿಧಾನ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬರಗಾಲದಿಂದ ನಮ್ಮ ರೈತರು ತತ್ತರಿಸಿದ್ದು, ಅವರಲ್ಲಿ ಹೊಸ ಉತ್ಸಾಹ ಮೂಡಿಸು ವಂತಾಗಬೇಕಿದೆ ಎಂದರು.

ರೈತರ ಬೆಳೆಗಳಿಗೆ ಬೆಲೆಯಿಲ್ಲ. ಸರ್ಕಾರ ಕೆಲ ಬೆಳೆಗಳಿಗೆ ಮಾತ್ರ ಸಹಾಯ ಧನ ನೀಡುತ್ತಿದೆ. ಬೆಳೆಗಳಿಗೆ ಸ್ಥಿರ ಬೆಲೆ ದೊರೆತರೆ ಮಾತ್ರ ರೈತರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿ ರೈತ ಮಹಿಳೆ ಯರಿಗೆ ಗುಡಿ ಕೈಗಾರಿಕೆ ಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕಿದೆ. ಸರ್ಕಾರಿ ಸವಲತ್ತು ಅರ್ಹರಿಗೆ ಸಿಗಬೇಕು. ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಸಿರಿವಂತರ ಆಹಾರವಾಗಿದೆ. ಆದರೆ ಅದರ ಲಾಭ ರೈತರಿಗೆ ಸಿಗಬೇಕು ಎಂದರು.

ಸಿರಿಧಾನ್ಯಗಳ ಸಂಸ್ಕರಣಾ ಉದ್ಯಮಿ ಮತ್ತು ಕೃಷಿಕ ಕೊಪ್ಪಲು ಮಂಜುನಾಥ್ ಮಾತನಾಡಿ, ಸಿರಿಧಾನ್ಯಗಳ ಸಂಸ್ಕರಣೆ ಮಾಡಿ ಅದನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಬಹಳಷ್ಟು ಅಧ್ಯಯನ ಮಾಡಿದಾಗ ಎಲ್ಲೆಡೆ ಸಿರಿಧಾನ್ಯಗಳನ್ನು ಪಾಲಿಷ್ ಮಾಡಿ ಮಾರಾಟ ಮಾಡುತ್ತಿದ್ದರಿಂದ ಬಹಳಷ್ಟು ಪೋಷಕಾಂಶ ನಷ್ಟ ವಾಗುವುದನ್ನು ಕಂಡುಕೊಂಡು ಪಾಲಿಷ್ ಮಾಡದೆ ಸಂಸ್ಕರಿಸಿ ಪೂರೈಸುವ ಉದ್ದಿಮೆಯಲ್ಲಿ ತೊಡಗಿಸಿ ಕೊಂಡು ಯಶಸ್ವಿಯಾಗಿದ್ದೇನೆ.

ಮೊದಲು ನಷ್ಟವಾದರೂ ಅವೆಲ್ಲವನ್ನೂ ಮೀರಿ ಅನೇಕರಿಗೆ ಉದ್ಯೋಗ ನೀಡಿದ್ದೇನೆ. ರೈತರು ಯಾವುದಕ್ಕೂ ಹತಾಶರಾಗಬೇಕಿಲ್ಲ. ಮುಂದೆ ಖಂಡಿತ ಒಳ್ಳೆಯ ದಿನಗಳು ನಿಶ್ಚಿತ. ಕೃಷಿಯಿಂದ ಯಾರೂ ವಿಮುಖ ರಾಗುವುದು ಬೇಡ. ಮಾರುಕಟ್ಟೆ ಹಿಂದೆ ಹೋಗುವುದೂ ಬೇಡ. ಗುಣಮಟ್ಟದ ಬೆಳೆ ಬೆಳೆದು ಮಾರುಕಟ್ಟೆಯೇ ನಮ್ಮ ಬಳಿ ಬರುವಂತೆ ಮಾಡೋಣ ಎಂದು ತಮ್ಮ ಅನುಭವ ಹಂಚಿಕೊಂಡರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರೈತರು ಅನೇಕ ಕಷ್ಟಗಳ ನಡುವೆಯೂ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ನಾನು ರೈತನ ಮಗನಾಗಿ ಅನುಭವ ಇದ್ದು ನಮ್ಮ ಶಾಸಕರಾದ ಕೆ ಎಸ್‌ ಆನಂದ್ ರೈತರ ಪರವಾಗಿದ್ದಾರೆ, ಸರ್ಕಾರವೂ ಅನ್ನದಾತರಿಗೆ ಬೆಂಗಾವಲಾಗಿರಬೇಕು ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎರೆಹುಳು ಈಶ್ವರಪ್ಪ ಮಾತನಾಡಿ, ಕೇವಲ ಎರಡು ಕೆಜಿ ಎರೆಹುಳು ಪಡೆದು ಈಗ ಒಂದು ದಿನಕ್ಕೆ 1 ಕ್ವಿಂಟಾಲ್ ಎರೆಹುಳುವನ್ನು 50 ಸಾವಿರ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ, ಸಾವಯವ ಕೃಷಿಯೇ ರೈತರಿಗೆ ವರದಾನ. ಕಸವನ್ನು ರಸ ಮಾಡಿ ಹೆಚ್ಚಿನ ಲಾಭ ಪಡೆಯಬಹುದು ಎಂದರು. ಕಾರ್ಯಕ್ರಮದಲ್ಲಿ ಸುಮಾರು 5 ಸಂಘಗಳಿಗೆ ಸುತ್ತುನಿಧಿ ವಿತರಿಸಲಾಯಿತು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸುಜಾತ, ಪುರಸಭೆ ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್, ಪಂಚನಹಳ್ಳಿ ಪ್ರಸನ್ನ, ರವಿ, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ತೋಟಗಾರಿಕೆ ಉಪ ನಿರ್ದೇಶಕಿ ಹಂಸವೇಣಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಜಯದೇವ್, ಕೃಷಿ ಸಹಾಯಕ ನಿರ್ದೇಶಕ ಅಶೋಕ್, ರೈತ ಸಂಘದ ಜಿಲ್ಲಾಧ್ಯಕ್ಷ ಮನ್ಸೂರ್ ಖಾನ್, ರವಿ ತಾಂತ್ರಿಕ ಅಧಿಕಾರಿ ಹರೀಶ್, ಚಂದ್ರು ಇದ್ದರು.

--ಬಾಕ್ಸ್---

ನಾನು ರೈತನ ಮಗ ಹಾಗಾಗಿ ಅವರ ಸಂಕಷ್ಟಗಳ ಅರಿವಿದೆ. ಕೊಬ್ಬರಿ, ರಾಗಿ, ತೆಂಗು ಬೆಳೆಗಳ ಬೆಲೆ ಕುಸಿದು ಬಯಲು ಪ್ರದೇಶದ ರೈತರಿಗೆ ಆಘಾತವಾಗಿದೆ. ಕೃಷಿ - ತೋಟಗಾರಿಕೆ ಇಲಾಖೆ ಸವಲತ್ತುಗಳನ್ನು ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಅರ್ಹರಿಗೆ ನೀಡಬೇಕು. ಇದರಲ್ಲಿ ಯಾವುದೇ ರಾಜಕೀಯ ಬೇಡ. ಅರ್ಹರಿಗೆ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಕೆ.ಎಸ್.ಆನಂದ್.ಶಾಸಕ.

23ಕೆಕೆಡಿಯು1.

ಕಡೂರು ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ರೈತ ದಿನಾಚರಣೆ ಅಂಗವಾಗಿ ಮಹಿಳಾ ಸಂಘಗಳಿಗೆ ಸುತ್ತು ನಿಧಿಯನ್ನು ಶಾಸಕ ಕೆ.ಎಸ್.ಆನಂದ್ ವಿತರಿಸಿದರು.

23ಕೆಕೆಡಿಯು1ಎ.ಶಾಸಕ ಕೆ ಎಸ್‌ ಆನಂದ್ ರವರು ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ರೈತರ ದಿನಾಚರಣೆಯನ್ನು ಉದ್ಘಾಟಿಸಿದರು.