ರೈತರು ದ್ವಿದಳ ಧಾನ್ಯದ ಬೆಳೆಗಳಿಗೆ ಒತ್ತು ನೀಡಿ: ಡಾ. ಬಿ.ಡಿ. ಬಿರಾದಾರ

| Published : Aug 26 2024, 01:42 AM IST

ಸಾರಾಂಶ

ದೇಶದಲ್ಲಿ ಬೆಳೆಕಾಳು ಬೆಳೆಗಳ ಉತ್ಪನ್ನ ಕಡಿಮೆಯಾಗಿದ್ದು, ಮುಖ್ಯ ಕಾರಣ ರೋಗಭೀತಿ. ಇದರ ಪರಿಹಾರಕ್ಕಾಗಿ ಕೃಷಿ ವಿಜ್ಞಾನಿಗಳನ್ನು ಸಂಪರ್ಕಸಿ ಮಾಹಿತಿ ಪಡೆದು ಪರಿಹಾರ ಕೊಂಡುಕೊಳ್ಳಿ ಎಂದು ಡಾ. ಬಿ.ಡಿ. ಬಿರಾದಾರ ಹೇಳಿದರು.

ನವಲಗುಂದ: ದೇಶದಲ್ಲಿ ಬೆಳೆಕಾಳು ಹೆಚ್ಚು ಬೆಳೆಯಬೇಕಾಗಿದೆ. ಇದರಿಂದ ಭೂಮಿ ಫಲವತ್ತತ್ತೆ ಹೆಚ್ಚುವುದರ ಜೊತೆಗೆ ಮಾನವನ ಆರೋಗ್ಯ ಕಾಪಾಡುವುಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಕೃ.ವಿ.ವಿ. ಸಂಶೋಧನಾ ನಿರ್ದೇಶಕರಾದ ಡಾ. ಬಿ.ಡಿ. ಬಿರಾದಾರ ಹೇಳಿದರು.

ತಾಲೂಕಿನ ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಬೆಳವಟಗಿ, ಐ.ಸಿ.ಎ.ಆರ್.ಕೆ.ಎಚ್. ಪಾಟೀಲ ಕೆ.ವಿ.ಕೆ. ಹುಲಕೋಟಿ, ಕೃಷಿ ಇಲಾಖೆ ನವಲಗುಂದ, ಸಂಜೀವಿನಿ ನರಗುಂದ ತಾಲೂಕು ಅಭಿಯಾನ ನಿರ್ವಹಣಾ ಘಟಕ ಹಾಗೂ ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಬೆಳೆಕಾಳು ಬೆಳೆಗಳಲ್ಲಿ ಸಮಗ್ರ ಬೆಳೆ ನಿರ್ವಹಣೆ ಹಾಗೂ ಕೊಯ್ಲೋತ್ತರ ತಾಂತ್ರಿಕತೆ ಕುರಿತು ರೈತರು ಹಾಗೂ ವಿಜ್ಞಾನಿಗಳ ಜೊತೆ ಚರ್ಚಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಬೆಳೆಕಾಳು ಬೆಳೆಗಳ ಉತ್ಪನ್ನ ಕಡಿಮೆಯಾಗಿದ್ದು, ಮುಖ್ಯ ಕಾರಣ ರೋಗಭೀತಿ. ಇದರ ಪರಿಹಾರಕ್ಕಾಗಿ ಕೃಷಿ ವಿಜ್ಞಾನಿಗಳನ್ನು ಸಂಪರ್ಕಸಿ ಮಾಹಿತಿ ಪಡೆದು ಪರಿಹಾರ ಕೊಂಡುಕೊಳ್ಳಿ.

ತೊಗರಿಯನ್ನು ಬಿಟ್ಟು ಎಲ್ಲ ದ್ವಿದಳ ಧಾನ್ಯಗಳ ಕಳೆ ನಿಯಂತ್ರಣ ಮಾಡಲು ಸಹಾಯವಾಗುತ್ತದೆ. ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಬೆಳೆಕಾಳುಗಳ ಉತ್ಪಾದನೆ ಹಾಗೂ ಒಳ್ಳೆಯ ಲಾಭವಾಗುತ್ತದೆ ಎಂದರು.

ರೈತರು ಬಿತ್ತನೆಗೂ ಮೊದಲು ಬೀಜೋಪಚಾರ ಮಾಡಿ. ಬೆ‍ಳೆ ಹೂವು ಬಿಡುವ ವೇಳೆಯಲ್ಲಿ ಔಷಧಿ ಸಿಂಪಡಣೆ ಮಾಡಬೇಡಿ. ರೈತರ ಅನುಕೂಲಕ್ಕಾಗಿ ಕೃಷಿ ವಿಶ್ವವಿದ್ಯಾಲಯದಿಂದ ರೇಡಿಯೋ ಕಾರ್ಯಕ್ರಮ ಬಿತ್ತರವಾಗುತ್ತಿವೆ. ಕಾರ್ಯಕ್ರಮ ಆಲಿಸಿ ಹಾಗೂ ಕೃಷಿ ಅಧಿಕಾರಿಗಳ ಸಲಹೆಗಳನ್ನು ಪಡೆಯಬೇಕು ಎಂದು ತಿಳಿಸಿದರು.

ವಿಜಯಪುರದ ಪ್ರಾ.ಕೃ.ಸಂ. ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ ಮಾತನಾಡಿ, ದ್ವಿದಳ ಧಾನ್ಯ ಬೆಳೆಯವುದರಿಂದ ಕಳೆ, ಕೀಟ ತೊಂದರೆ ಕಡಿಮೆ ಆಗುತ್ತದೆ. ಕೃಷಿಯಲ್ಲಿ ತಾಂತ್ರಿಕತೆ ಜೊತೆಗೆ ಭೂಮಿ ನಿರ್ವಹಣೆ ಕೌಶಲ್ಯ ಬೆಳೆಸಿಕೊಳ್ಳಬೇಕುತ. ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ಡಾ. ಎಸ್.ಎ. ಗದ್ದನಕೇರಿ, ಡಾ. ಬಿ.ಎನ್. ಮೊಟಗಿ, ಡಾ. ಸಂಗಶೆಟ್ಟಿ ಭಾಲ್ಕುಂದೆ, ಶಿವಶಂಕರ ಹೋಟ್ಕರ, ಡಾ. ಸಿ.ಎಂ. ರಫಿ ಹಾಗೂ ರೈತ ಮುಖಂಡ ಶಂಕ್ರಪ್ಪ ಅಂಬಲಿ, ಸುಭಾಸಚಂದ್ರಗೌಡ ಪಾಟೀಲ, ಮಂಜುನಾಥ ಜಾನಮಟ್ಟಿ, ವಿಷ್ಣು ದ್ಯಾವನೂರ, ಶಿವು ದಿಡ್ಡಿ ಮತ್ತು ರೈತರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.