ಕನ್ನಡಪ್ರಭ ವಾರ್ತೆ ಮದ್ದೂರು

ರೈತರು ಬೇಸಿಗೆ ಕಾಲದಲ್ಲಿ ತರಕಾರಿ, ದ್ವಿದಳ ಧಾನ್ಯ ಮತ್ತಿತರ ಪರ್ಯಾಯ ಬೆಳೆಗಳ ಬೆಳೆ ಬೆಳೆಯಲು ಚಿಂತಿಸಬೇಕು ಎಂದು ಮಂಡ್ಯ ವಿ.ಸಿ.ಫಾರಂನ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಮದ್ದೂರು ಕ್ರೀಡಾ ಬಳಗದ ಸಭಾಂಗಣದಲ್ಲಿ ತಾಲೂಕು ನಾಗರೀಕ ವೇದಿಕೆಯಿಂದ ನಡೆದ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿ, ಕೃಷಿಕರು ಬೇಸಿಗೆ ಕಾಲದಲ್ಲಿ ಕಬ್ಬು, ಬತ್ತದ ಬೆಳಗೆ ಜೋತು ಬೀಳದೆ ತರಕಾರಿ ದ್ವಿದಳ ಧಾನ್ಯ ಮತ್ತು ಪರ್ಯಾಯ ಬೆಳೆ ಬೆಳೆಯಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಸಮರ್ಪಕ ರಸಗೊಬ್ಬರ, ಕೀಟನಾಶಕ ಮತ್ತು ರೋಗನಾಶಕ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿರುವುದು ಕೃಷಿ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ ಎಂದರು.

ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರೂ ಸಹ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ರೈತರು ಇನ್ನು ಮುಂದಾದರೆ ಎಚ್ಚೆತ್ತುಕೊಂಡು ಪರ್ಯಾಯ ಬೆಳೆಗಳ ಬಗ್ಗೆಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.


ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ ಡಾ.ಎಚ್.ಆರ್.ಅರುಣ್ ಕುಮಾರ್ ಮಾತನಾಡಿ, ರೈತರ ತಾವು ಬೆಳೆದ ಉತ್ಪನ ಗಳನ್ನು ನೇರವಾಗಿ ಮಾರುಕಟ್ಟೆಗೆ ಸಾಗಿಸಲು ದಲ್ಲಾಳಿಗಳ ಹಾವಳಿ ಇಂದಾಗಿ ಬೆಳೆಗಳಿಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ಹೀಗಾಗಿ ರೈತ ರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ಸಾಗಿಸಿ ಲಾಭಗಳಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ವಿ.ಅಶೋಕ್, ಮುನೇಗೌಡ ಮಾತನಾಡಿದರು. ಇದೇ ವೇಳೆರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತರಾದ ಪ್ರೊ,ಎಂ.ಸಿ.ಬೋರೇಗೌಡ, ಟಿ.ನಾರಾಯಣ, ಸಿ.ಎಸ್ .ಶಶಿಕಲಾ ಅವರಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ನಿಕಟ ಪೂರ್ವ ಕುಲಸಚಿವ ಪ್ರೊ.ಕೆ.ಎನ್.ನಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ರೈತ‌ ಹಿತ ರಕ್ಷಣಾ ಸಮಿತಿ ಉಪಾಧ್ಯಕ್ಷ ಕೆ.ಬೋರಯ್ಯ, ರೈತ ಮುಖಂಡರಾದ ಯಧುಶೈಲಾಸಂಪತ್, ಮದ್ದೂರು ಕ್ರೀಡಾ ಬಳಗದ ಅಧ್ಯಕ್ಷ ವಿ.ಕೆ.ಜಗದೀಶ್, ಕಾರ್ಯದರ್ಶಿ ಪ್ರೊ.ಬಿ.ಎಸ್.ಬೋರೇಗೌಡ, ವರ್ಷಿತಾ ಪೆಟ್ರೋಲ್ ಬಂಕ್ ಮಾಲೀಕ ಬಿ.ವಿಜಯೇಂದ್ರ, ಮದ್ದೂರು ಲಯನ್ಸ್ ಸಂಸ್ಥೆ ಸಿದ್ದಪ್ಪ, ಮತ್ತಿತರರು ಭಾಗವಹಿಸಿದ್ದರು.