ರೈತರ ಜಮೀನಿನಿಂದ ಸಂಗ್ರಹಿಸಿರುವ ಮಣ್ಣಿನ ಮಾದರಿಗಳನ್ನು ಪರೀಕ್ಷಿಸಿ ಉಚಿತವಾಗಿ ಭೂ- ಸಂಪನ್ಮೂಲ ಕಾರ್ಡ್‌ಗಳನ್ನು ವಿತರಿಸಲಾಗುವುದು. ಅದರ ಆಧಾರದ ಮೇಲೆ ಪೋಷಕಾಂಶ ನಿರ್ವಹಣೆ, ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಬೆಳೆಗಳಿಗೆ ಅಗತ್ಯವಾದ ತಾಂತ್ರಿಕ ಮಾರ್ಗದರ್ಶನ ನೀಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ರೈತರು ಅಂದಾಜು ಆಧಾರಿತವಾಗಿ ರಸಗೊಬ್ಬರ ಬಳಕೆ ಮಾಡುವ ಬದಲು, ಜಮೀನಿನ ಮಣ್ಣು ಪರೀಕ್ಷೆ ವರದಿ ಆಧರಿಸಿ ಸಮತೋಲಿತ ಗೊಬ್ಬರ ಬಳಕೆ ಮಾಡಿದರೆ ಮಾತ್ರ ಉತ್ತಮ ಇಳುವರಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಕೃಷಿ ಇಲಾಖೆ ಉಪ ನಿರ್ದೇಶಕಿ ಕೋಕಿಲಾ ತಿಳಿಸಿದರು.ತಾಲೂಕಿನ ತಳಲೂರು ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಉಪ ಜಲಾನಯನ ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ಭೂ- ಸಂಪನ್ಮೂಲ ಸಾಕ್ಷರತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಮಣ್ಣಿನ ಆರೋಗ್ಯ, ಪೋಷಕಾಂಶಗಳ ಸಮತೋಲನ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಜಾಗೃತಿ ವಾಹನವನ್ನು ನಾಲ್ಕು ದಿನಗಳ ಕಾಲ ತಾಲೂಕಿನ ವಿವಿಧ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ. ಈ ವಾಹನದ ಮೂಲಕ ಕರಪತ್ರ ವಿತರಣೆ ಹಾಗೂ ನೇರ ಮಾಹಿತಿ ನೀಡುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
ರಿವಾರ್ಡ್ ಯೋಜನೆಯಡಿ ಕೆಲ್ಲಂಗೆರೆ, ದೊಡ್ಡನಹಳ್ಳಿ, ಹುಲಿಕೆರೆ, ನಾರಾಯಣಘಟ್ಟ, ಮುದ್ದನಹಳ್ಳಿ, ಅಗ್ಗುಂದ, ಹೊಳಲಕೆರೆ, ಯಾಚಗೊಂಡನಹಳ್ಳಿ, ಕಣಕಟ್ಟೆ, ಆಣೇಗೆರೆ, ಕುರುವಂಕ, ಲಿಂಗೊಂಡನಹಳ್ಳಿ, ವಿಷ್ಣುಸಮುದ್ರ, ಬೆಂಡೇಕೆರೆ, ಬೇವಿನಹಳ್ಳಿ, ನೇರ್ಲಿಗೆ ಹಾಗೂ ಗುಡ್ಡನಹಳ್ಳಿ ಸೇರಿ 18 ಉಪ ಜಲಾನಯನ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸುಮಾರು 55 ಗ್ರಾಮಗಳಲ್ಲಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದರ ವರದಿ ಆಧರಿಸಿ, ಬೆಳೆ ಆಯ್ಕೆ ಹಾಗೂ ಗೊಬ್ಬರ ಬಳಕೆ ಮಾಡಿದರೆ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಮಣ್ಣಿನ ಆರೋಗ್ಯವೂ ಸುಧಾರಿಸುತ್ತದೆ ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ರೈತರ ಜಮೀನಿನಿಂದ ಸಂಗ್ರಹಿಸಿರುವ ಮಣ್ಣಿನ ಮಾದರಿಗಳನ್ನು ಪರೀಕ್ಷಿಸಿ ಉಚಿತವಾಗಿ ಭೂ- ಸಂಪನ್ಮೂಲ ಕಾರ್ಡ್‌ಗಳನ್ನು ವಿತರಿಸಲಾಗುವುದು. ಅದರ ಆಧಾರದ ಮೇಲೆ ಪೋಷಕಾಂಶ ನಿರ್ವಹಣೆ, ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಬೆಳೆಗಳಿಗೆ ಅಗತ್ಯವಾದ ತಾಂತ್ರಿಕ ಮಾರ್ಗದರ್ಶನ ನೀಡಲಾಗುತ್ತದೆ ಎಂದರು.ಬೋರನಕೊಪ್ಪಲು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಭರತ್ ಮಾತನಾಡಿ, ಶುಂಠಿ ಸೇರಿದಂತೆ ತೋಟಗಾರಿಕೆ ಬೆಳೆಗಳಲ್ಲಿ ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆ ಅತಿ ಮುಖ್ಯವಾಗಿದ್ದು, ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಪರಮೇಶ್ವರಪ್ಪ, ಶಂಕರಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕೃಷಿ ಅಧಿಕಾರಿಗಳಾದ ಅಶ್ವಿನಿ, ಸುಬ್ರಹ್ಮಣ್ಯ, ದೀಪ್ತಿ ಪಾಟೀಲ್ ಸೇರಿ ಸಿಬ್ಬಂದಿ ಹಾಗೂ ರೈತರು ಭಾಗವಹಿಸಿದ್ದರು.