ಆಸಕ್ತಿ ಹೊಂದುವ ಜೊತೆ ಬೆಳೆ ಬೆಳೆಯಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಬೇಕು.

ಕೂಡ್ಲಿಗಿ: ರೈತರು ಅರಣ್ಯ ಕೃಷಿ ಬೆಳೆಗಳಾದ ತೇಗ, ಶ್ರೀಗಂಧ, ಮಹಾಗನಿ ಬಗ್ಗೆ ಆಸಕ್ತಿ ಹೊಂದುವ ಜೊತೆ ಬೆಳೆ ಬೆಳೆಯಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಬೇಕು. ರೈತರು ಮರ ಆಧಾರಿತ, ಕಾಡುಫಲಗಳನ್ನು ಜಮೀನುಗಳಲ್ಲಿ ಬೆಳೆದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಕೂಡ್ಲಿಗಿ ತಾಲೂಕಿನ ಉಪ ‍‍‍‍ವಲಯ ಅರಣ್ಯಾಧಿಕಾರಿ ಕೆ.ಎಂ. ಮಧುಸೂದನ್ ತಿಳಿಸಿದರು.

ಕೂಡ್ಲಿಗಿ ತಾಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆ ವತಿಯಿಂದ ಸಮೀಪದ ನಾಣ್ಯಪುರ ಗ್ರಾಮದ ನರ್ಸರಿ ಪಕ್ಕದ ಶಿವಕೃಪ ಫಾರ್ಮ್‌ನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ಮತ್ತು ಅರಿವು ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೇಲ ಹಣ್ಣು, ನೇರಳೆ, ಹುಣಸೆ ಮುಂತಾದ ಬೆಳೆಗಳನ್ನು ಈಗ ಪ್ರಗತಿಪರ ರೈತರು ತಮ್ಮ ಜಮೀನುಗಳಲ್ಲಿ ಬೆಳೆದು ಯಶಸ್ಸು ಪಡೆದಿದ್ದಾರೆ. ಹೀಗಾಗಿ, ಕಡಿಮೆ ನೀರು ಹೆಚ್ಚು ಆದಾಯ ನೀಡುವ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಸ್ವಾವಲಂಭಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಬಿಇಎಂಎಲ್ ನೌಕರರಾದ ವಾಮದೇವ ಶರ್ಮಾ ಮಾತನಾಡಿ ಸಮಗ್ರ ಅರಣ್ಯ ಕೃಷಿ ಬಗ್ಗೆ ತಿಳಿಸಿದರು. ಮಹಾಗನಿ, ಪೇರಲ, ಸೀತಾಫಲ, ಜಂಬೂ ನೇರಳೆ, ಬೆಳೆಗಳನ್ನು ಬೆಳೆಯಲು ರೈತರು ಆಸಕ್ತಿ ತೋರಬೇಕು ಮತ್ತು ಮೀನು ಕೃಷಿ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕ ಎ. ನಾಗರಾಜ್, ಜಮೀನು ಮಾಲೀಕರಾದ ರೈತ ಕೊಟ್ರೇಶ್, ವೀರೇಶ್, ಪ್ರಕಾಶ್, ಬಾಲರಾಜ, ರಾಜಾಸಾಬ್, ಹಾಗೂ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಾಚರ್ ಗಳು ಹಾಜರಿದ್ದರು.