ಸಾರಾಂಶ
ಮುಂಗಾರು ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷಕನ್ನಡಪ್ರಭ ವಾರ್ತೆ ಕೊಪ್ಪಳ
ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಹೀಗಾಗಿ ಬಿತ್ತನೆ ಮಾಡಲು ಜಿಲ್ಲೆಯಲ್ಲಿ ರೈತರ ಅವಶ್ಯಕತೆಗೆ ತಕ್ಕಂತೆ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರದ ದಾಸ್ತಾನು ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸಿ, ಜಿಲ್ಲೆಯ ರೈತರಿಗೆ ಬಿತ್ತನೆ ಸಂದರ್ಭ ತೊಂದರೆ ಆಗಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಮುಂಗಾರು-2024ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಬಗ್ಗೆ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ರೈತರಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸುವುದರ ಜೊತೆಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಹಾಗೂ ಮಾರಾಟವಾಗದಂತೆ ಎಚ್ಚರ ವಹಿಸಬೇಕು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟಗಾರರು ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ರೈತರಿಗೆ ಮಾರಾಟ ಮಾಡಬೇಕು. ಈ ಕುರಿತು ನಿಗದಿತ ದರಪಟ್ಟಿಯನ್ನು ಪ್ರತಿ ಮಾರಾಟ ಮಳಿಗೆಯಲ್ಲಿ ಪ್ರದರ್ಶಿಸಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಮಳೆಗಾಲದ ಹಿನ್ನೆಲೆ ಕಂದಾಯ, ಕೃಷಿ, ತೋಟಗಾರಿಕಾ ಮತ್ತು ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ರಾಮಮಟ್ಟದ ಪಿಡಿಒಗಳು ಸಮನ್ವಯ ವಹಿಸಿ ಕಾರ್ಯನಿರ್ವಹಿಸಬೇಕು. ಮಳೆಗಾಲದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಬಿತ್ತನೆ ಬೀಜ ದಾಸ್ತಾನು:2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ಹೆಸರು, ತೊಗರಿ, ಸೂರ್ಯಕಾಂತಿ, ಅಲಸಂದಿ ಸೇರಿ ಬಿತ್ತನೆ ಬೀಜ ವಿತರಣೆಗೆ ಜೂ. 10ರವರೆಗೆ 7,369.49 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ ದಾಸ್ತಾನು ಸ್ವೀಕೃತಿಯಾಗಿದ್ದು, ಈ ಪೈಕಿ 4,707.38 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಸದ್ಯ 2,662.11 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ ದಾಸ್ತಾನು ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.ರಸಗೊಬ್ಬರ ದಾಸ್ತಾನು:
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂ. 10 ರವರೆಗೆ ಜಿಲ್ಲೆಯಲ್ಲಿ ಯೂರಿಯಾ 670 ಟನ್, ಡಿಎಪಿ 1,620 ಟನ್, ಎಂಓಪಿ 310 ಟನ್ ಹಾಗೂ ಕಾಂಪ್ಲೆಕ್ಸ್ 2,537 ಟನ್‌ನಷ್ಟು ವಿವಿಧ ರಸಗೊಬ್ಬರ ಲಭ್ಯ ದಾಸ್ತಾನು ಇರುತ್ತದೆ. ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಸೇರಿ ಒಟ್ಟು 5,137 ಟನ್‌ನಷ್ಟು ರಸಗೊಬ್ಬರ ಕಾಪು ದಾಸ್ತಾನು ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಜೂ. 7ರಂತೆ ಎಲ್ಲ ತಾಲೂಕುಗಳಲ್ಲಿ 31 ವಾರಗಳಿಗೆ ಸಾಕಾಗುವಷ್ಟು ಒಟ್ಟು 4,68,283.84 ಟನ್ ಮೇವು ಲಭ್ಯವಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೇರಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ವಾಡಿಕೆಗಿಂತ ಹೆಚ್ಚು ಮಳೆ:ಜಿಲ್ಲೆಯಲ್ಲಿ ಜೂ.1ರಿಂದ 9ರವರೆಗೆ ವಿವಿಧ ತಾಲೂಕುಗಳಲ್ಲಿ ವಾಡಿಕೆಗಿಂತ ಶೇ. 120ರಷ್ಟು ಹೆಚ್ಚಿನ ಮಳೆ ಸುರಿದಿದೆ ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ. ಮಾಹಿತಿ ನೀಡಿದರು.
ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 28.5 ಮಿಮೀ ಇದ್ದು, 83.2 ಮಿಮೀ ಸುರಿದಿದೆ. ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 31.5 ಮಿಮೀ ಇದ್ದು, 84.9 ಮಿಮೀ ಸುರಿದಿದೆ. ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 22.3 ಮಿಮೀ ಇದ್ದು, 46.0 ಮಿಮೀ ಸುರಿದಿದೆ. ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 26.0 ಮಿಮೀ ಇದ್ದು, 53.0 ಮಿಮೀ ಸುರಿದಿದೆ. ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 23.7 ಮಿಮೀ ಇದ್ದು, 43.8 ಮಿಮಿ ಮಳೆ ಸುರಿದಿದೆ. ಕುಕನೂರು ತಾಲೂಕಿನಲ್ಲಿ ವಾಡಿಕೆ ಮಳೆ 33.7 ಮಿಮೀ ಇದ್ದು, 47.0 ಮಿಮೀ ಮಳೆ ಸುರಿದಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 25.1 ಮಿಮೀ ಇದ್ದು, 62.1 ಮಿಮಿ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಒಟ್ಟಾರೆ ವಾಡಿಕೆ ಮಳೆ 28 ಮಿಮೀ ಇದ್ದು, 61 ಮಿಮೀ ಮಳೆ ಸುರಿದಿದ್ದು, ಶೇ.120ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ತಿಳಿಸಿದರು.