ರೈತರೇ ಕೊಟ್ಟಿಗೆ ಗೊಬ್ಬರ ಮಾರಾಟ ಬೇಡ: ಬೇಸಾಯ ಶಾಸ್ತ್ರಜ್ಞ ಡಾ.ಪಿ ಪ್ರಕಾಶ್

| Published : Sep 09 2024, 01:31 AM IST

ರೈತರೇ ಕೊಟ್ಟಿಗೆ ಗೊಬ್ಬರ ಮಾರಾಟ ಬೇಡ: ಬೇಸಾಯ ಶಾಸ್ತ್ರಜ್ಞ ಡಾ.ಪಿ ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ರಾಸಾಯನಿಕದಿಂದ ಹಾಳಾಗುತ್ತಿರುವ ಮಣ್ಣು ಮತ್ತು ಅದರ ಸತ್ವವನ್ನು ಸುಧಾರಿಸಲು ಹಸಿರೆಲೆ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರದ ಮಹತ್ವ ಉಳ್ಳದ್ದು. ನಿಮ್ಮ ಕೊಟ್ಟಿಗೆ ಗೊಬ್ಬರಗಳನ್ನು ಮಾರಿಕೊಳ್ಳಬೇಡಿ ಎಂದು ಬೇಸಾಯ ಶಾಸ್ತ್ರಜ್ಞ ಡಾ.ಪಿ ಪ್ರಕಾಶ್ ರೈತರಲ್ಲಿ ಮನವಿ ಮಾಡಿದರು. ಚಾಮರಾಜನಗರದಲ್ಲಿ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಹರಿರೆಲೆ ಗೊಬ್ಬರ ತಯಾರಿಕೆ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಸಾಯನಿಕದಿಂದ ಹಾಳಾಗುತ್ತಿರುವ ಮಣ್ಣು ಮತ್ತು ಅದರ ಸತ್ವವನ್ನು ಸುಧಾರಿಸಲು ಹಸಿರೆಲೆ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರದ ಮಹತ್ವ ಉಳ್ಳದ್ದು. ನಿಮ್ಮ ಕೊಟ್ಟಿಗೆ ಗೊಬ್ಬರಗಳನ್ನು ಮಾರಿಕೊಳ್ಳಬೇಡಿ. ಬದಲಾಗಿ ನಿಮ್ಮ ಭೂಮಿಗೆ ಉಪಯೋಗಿಸಿ ಎಂದು ಬೇಸಾಯ ಶಾಸ್ತ್ರಜ್ಞ ಡಾ.ಪಿ ಪ್ರಕಾಶ್ ರೈತರಲ್ಲಿ ಮನವಿ ಮಾಡಿದರು.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ಜಂಟಿಯಾಗಿ ಅಂತಿಮ ವರ್ಷದ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವತಿಯಿಂದ ಹರವೆ ಹೋಬಳಿ ಬೆಟ್ಟದಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಹಸಿರೆಲೆ ಗೊಬ್ಬರ ಮತ್ತು ಕಾಂಪೋಸ್ಟ್ ತಯಾರಿಕೆ ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಟ್ಟಿಗೆ ಗೊಬ್ಬರ ತಯಾರಿಸುವ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಲು ಹೇಳುತ್ತ ಹಲವಾರು ಹಸಿರೆಲೆ ಬೆಳೆಗಳ ಮಹತ್ವವನ್ನು ಸಾರುತ್ತ, ಭೂಮಿಯ ಸುಧಾರಣೆಯಲ್ಲಿ ಅದರ ಪಾತ್ರವನ್ನು ಎತ್ತಿ ಹಿಡಿದರು. ಸೆಣಬು, ಚೆಂಬೆ ಹಾಗೂ ಇತರೆ ದ್ವಿದಳ ಧಾನ್ಯಗಳ ಹಸಿರೆಲೆ ಗೊಬ್ಬರದ ಉಪಯೋಗವನ್ನು ವಿವರಿಸಿದರು. ಕೊಟ್ಟಿಗೆ ಗೊಬ್ಬರದಲ್ಲಿ ಜಿಪ್ಸಂ ಬಳಕೆ ಹಾಗೂ ಎರೆಹುಳು ಗೊಬ್ಬರದ ತಯಾರಿಕೆ, ಅದರಿಂದ ಸಿಗುವ ‘ಎರೆಜಲ’ದ ಪ್ರಾಮುಖ್ಯತೆಯನ್ನು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ರೈತರು ಮಾತನಾಡಿ, ಕೊಟ್ಟಿಗೆ ಗೊಬ್ಬರದಿಂದ ಸಾರಜನಕ ಸೋರಿ ಹೋಗುವುದನ್ನು ತಡೆಯುವ ಕ್ರಮಗಳ ಬಗ್ಗೆ ಪ್ರಶ್ನಿಸುವ ಮೂಲಕ ವಿಜ್ಞಾನಿಗಳಿಂದ ಉತ್ತಮ ವಿಚಾರಗಳನ್ನು ತಿಳಿದುಕೊಂಡರು.

ವಿದ್ಯಾರ್ಥಿಗಳು ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ ತಯಾರಿಕೆ ಹಾಗೂ ಹಸಿರೆಲೆ ಗೊಬ್ಬರದ ಬಗ್ಗೆ ಆಡಿಯೋ, ವಿಡಿಯೋ ದೃಶ್ಯಗಳ ಸಹಾಯದಿಂದ ಗ್ರಾಮಸ್ಥರಿಗೆ ವಿವರಿಸಿದರು. ವಿಜ್ಞಾನಿಗಳು ಹಾಗೂ ರೈತರ ಉತ್ತಮ ಚರ್ಚೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು.

ಡಾ.ಪಿ.ಪ್ರಕಾಶ್, ಡಾ.ಎ.ಎಸ್.ಕಾಂಬಳೆ, ಶಿವಕುಮಾರ್ ಗ್ರಾ.ಪಂ.ಅಧ್ಯಕ್ಷರು , ಸುಭದ್ರಮ್ಮ(ಕಡಪ್ಪ) ಗ್ರಾ.ಪಂ. ಸದಸ್ಯರು, ಗೌ. ಮಾದೇವಪ್ಪ ಮತ್ತು ಪುಟ್ಟಪ್ಪ,ಚನ್ನಬಸಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಗ್ರಾಮದ ಎಲ್ಲಾ ಗಣ್ಯರು, ಗ್ರಾಮಸ್ಥರು ಮತ್ತು ಮಕ್ಕಳು ಇದ್ದರು.