ಸಾರಾಂಶ
ಲಕ್ಷ್ಮೇಶ್ವರ: ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಮಳೆಗಳು ಉತ್ತಮವಾಗಿ ಆಗುತ್ತಿರುವುದರಿಂದ ರೈತರು ಸಕಾಲದಲ್ಲಿ ಬಿತ್ತನೆ ಕಾರ್ಯ ಮಾಡಬೇಕು ಹಾಗೂ ಹೆಚ್ಚಿನ ಆದಾಯ ಗಳಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಕೃಷಿ ಪೂರಕ ಸಲಕರಣೆಗಳು, ಗೊಬ್ಬರ, ಕ್ರಿಮಿನಾಶ ಪೂರೈಸುತ್ತಿದ್ದು, ರೈತರು ಸೂಕ್ತ ದಾಖಲೆ ನೀಡಿ ಖರೀದಿಸಬಹುದು. ಮುಕ್ತ ಮಾರುಕಟ್ಟೆಯಲ್ಲಿ ಅನಧಿಕೃತ ಮಾರಾಟಗಾರರಿಂದ ಪ್ರಮಾಣಿಕೃತವಲ್ಲದ, ಕಳಪೆ ಬೀಜವನ್ನು ರೈತರು ಖರೀದಿಸಬಾರದು ಮತ್ತು ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು.ರಿಯಾಯಿತಿ ದರದ ಬೀಜಗಳು ಅರ್ಹ ರೈತರಿಗೆ ಸಿಗಬೇಕು. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭಿಸುವ ಅಗತ್ಯ ಕ್ರಮಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು ಮತ್ತು ರೈತರು ಪ್ರಮಾಣಿಕೃತ ಬೀಜ ಬಿತ್ತನೆ ಮಾಡಬೇಕು ಎಂದು ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ಕೃಷಿ ಇಲಾಖೆಯಲ್ಲಿ ಕೆಲವು ಹಸಿರು ವಸ್ತ್ರ ಧರಿಸಿ ತಾವು ರೈತರೆಂದು ಸುಳ್ಳು ಹೇಳಿಕೊಳ್ಳತ್ತಿದ್ದಾರೆ ಮತ್ತು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಖೊಟ್ಟಿ ದಾಖಲೆ ಸೃಷ್ಟಿಸಿ, ಇಲಾಖೆಯ ಸೌಲತ್ತು ಪಡೆದುಕೊಳ್ಳುತ್ತಿದ್ದಾರೆ. ಗ್ರಾಫಿಕ್ಸ್ ಪೋಟೋ ಮಾಡಿ ಇಲಾಖೆ ಮತ್ತು ವಿಮಾ ಸೌಲಭ್ಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ರಚಿಸಿ ವಿಮಾ ವ್ಯವಸ್ಥೆಯಲ್ಲಾಗುತ್ತಿರುವ ಗೋಲ್‌ಮಾಲ್ ತಡೆಗಟ್ಟಲಾಗುವುದು. ಅಧಿಕಾರಿಗಳನ್ನು ಹೆದರಿಸುವುದು, ದಬ್ಬಾಳಿಕೆ, ದಲ್ಲಾಳಿ ಕೆಲಸ ಮಾಡುವರನ್ನು ಗುರುತಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಹೇಳಿದರು.
ಈ ವೇಳೆ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ಅವರು, ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ ೫೦ ಕ್ವಿಂಟಲ್ ಹೆಸರು, ೪೦ ಕ್ವಿಂಟಲ್ ತೊಗರಿ ಬೀಜ ದಾಸ್ತಾನಿದೆ. ಮುಂದಿನ ಕೆಲವು ದಿನಗಳಲ್ಲಿ ಗೋವಿನಜೋಳ ಸೇರಿ ಇತರ ಬೀಜಗಳು ಬರುತ್ತವೆ. ಜೂನ್ ಮೊದಲ ವಾರದಲ್ಲಿ ಹೆಸರು ಬಿತ್ತನೆ ಮಾಡಬಹುದಾಗಿದ್ದು, ಬಿತ್ತನೆ ಪೂರ್ವ ಬೀಜೋಪಚಾರ ಮಾಡಬೇಕು. ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರ ಪೂರೈಸಲಾಗುವುದು ಎಂದರು.ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವೀರೇಂದ್ರಗೌಡ ಪಾಟೀಲ, ಸದಸ್ಯ ರಾಜೀವ ಕುಂಬಿ, ನಿಂಗಪ್ಪ ಬನ್ನಿ, ಶಿವಣ್ಣ ಮಾನ್ವಿ, ಬಸಣ್ಣ ಹಂಜಿ, ರಮೇಶ ಉಪನಾಳ, ಅಶೋಕ ನೀರಾಲೋಟಿ, ಬಸವರೆಡ್ಡಿ ಹನಮರೆಡ್ಡಿ, ರಾಜು ಬೆಂಚಳ್ಳಿ, ಈರಣ್ಣ ಅಕ್ಕೂರ, ಬಸವರಾಜ ಚಕ್ರಸಾಲಿ, ಶಂಕರ ಬ್ಯಾಡಗಿ, ಗಂಗಾಧರ ಗೋಡಿ. ಪ್ರವೀಣ ಗಾಣಿಗೇರ, ರೈತರು, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಪಿ.ಕೆ. ಹೊನ್ನಪ್ಪನವರ, ರೈತ ಅನುವುಗಾರರಾದ ಅಮಿತ ಹಾಲೇವಾಡಿಮಠ, ಮಹೇಶ ನಂದೆಣ್ಣವರ, ಸಿದ್ದು ಕನವಳ್ಳಿ ಇದ್ದರು.