ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ನಾಡಿನ ರೈತರು ತಾವು ಬೆಳೆಯುವ ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡಿ ಹೆಚ್ಚು ಆದಾಯ ತರುವತ್ತ ಗಮನ ಹರಿಸಬೇಕು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮಂಗಳವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರೈತ ಸಮುದಾಯ ತಾವು ಬೆಳೆದ ಬೆಳೆಗಳನ್ನು ಆತುರವಾಗಿ ಮಾರಾಟ ಮಾಡದೆ ಅವುಗಳನ್ನು ಸಂರಕ್ಷಿಸಿಡಬೇಕು. ಇದರಿಂದ ಅವರಿಗೆ ಲಾಭ ದೊರೆಯಲಿದೆ ಎಂದರು.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೃಷಿ ಸಂಸ್ಕರಣೆ, ಸವಳು ಭೂಮಿಯ ಪರಿವರ್ತನೆ, ಸಾವಯವ ಕೃಷಿ ಮತ್ತು ಹೈನುಗಾರಿಕೆಗೆ ಒತ್ತು ಕೊಟ್ಟಿದೆ. ಹೈನುಗಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳು ಯಶಸ್ಸಿನ ದಾರಿಯಲ್ಲಿವೆ ಎಂದು ಹೇಳಿದರು.
ರೈತರು ಆತ್ಮಹತ್ಯೆಯಂತಹ ಕೆಲಸಕ್ಕೆ ಮುಂದಾಗಬಾರದು. ಹಲವು ಸಂಕಷ್ಟಗಳು ಇರುವ ಕೋಲಾರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಲ್ಲ. ಹಲವು ಸೌಲಭ್ಯಗಳು ಸಮುದಾಯಕ್ಕೆ ಸಿಕ್ಕಿರುವ ಪ್ರದೇಶದಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಏಕ ಬೆಳೆಯನ್ನು ಅನುಸರಿಸುತ್ತಿರುವ ರೈತ ಸಮುದಾಯದಲ್ಲಿ ಇದು ಹೆಚ್ಚಿದೆ. ಹಲವು ಬೆಳೆ, ಮಿಶ್ರ ಬೆಳೆ ಪದ್ಧತಿಯನ್ನು ರೈತರು ಅಳವಡಿಸಿಕೊಂಡರೆ ಶಕ್ತಿ ಬರಲಿದೆ ಎಂದು ಸಲಹೆ ನೀಡಿದರು.ಸರ್ಕಾರದ ಅನುಕೂಲಗಳು ಮಧ್ಯವರ್ತಿಗಳ ಪಾಲಾಗಬಾರದೆಂದು, ಗ್ಯಾರಂಟಿ ಯೋಜನೆ ಸಬ್ಸಿಡಿ, ವಿಮೆ, ಬರಪರಿಹಾರದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತಹ ಕೆಲಸ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರದಿಂದ ಬರಪರಿಹಾರದ ಅನುದಾನ ದೊರೆದಿದ್ದರೂ 600 ಕೋಟಿ ರು. ಅನುದಾನವನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ ಎಂದರು.
ತರಳಬಾಳು ಶ್ರೀಗಳು ಮುಂದುವರೆಸಿಕೊಂಡು ಹೋಗುತ್ತಿರುವ ಜನಪರ ಕೆಲಸಗಳ ಬಗ್ಗೆ ಸರ್ಕಾರಕ್ಕೆ ಗೌರವವಿದೆ. ಅವರ ಮಾತುಗಳಿಗೆ ಸರ್ಕಾರ ಹೆದರುತ್ತದೆ. ಸರ್ಕಾರದ ಅನುದಾನದಿಂದ ಕೇವಲ 2 ವರ್ಷಗಳಲ್ಲಿ 87 ಕೆರೆಗಳನ್ನು ತುಂಬಿಸುವಂತಹ ಮಹತ್ವದ ಕೆಲಸವನ್ನು ಶ್ರೀಗಳು ಮಾಡಿರುವುದು ಸಂತೋಷ ತಂದಿದೆ ಎಂದರು.ರೈತ ಸಂಘದ ಅಧ್ಯಕ್ಷ ಹಾಗೂ ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಆಗುವ ಸಂಶೋಧನೆಗಳು ವಿವಿ ಆವರಣ ಬಿಟ್ಟು ರೈತರ ಜಮೀನುಗಳಿಗೆ ಬರಬೇಕು. ಆಗ ಅವುಗಳ ಪ್ರಯೋಜನ ರೈತರಿಗೆ ದೊರೆಯುತ್ತದೆ. ಅವು ಕೇವಲ ಪ್ರಾತ್ಯಕ್ಷಿಕೆಗಳಿಗೆ ಮೀಸಲಾಗಬಾರದು ಎಂದರು.
ರೈತರಿಗೆ ನೀರು, ವಿದ್ಯುಚ್ಛಕ್ತಿ ಮತ್ತು ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೆ ಕೊಟ್ಟರೆ ರೈತರ ಬದುಕು ಸುಭದ್ರವಾಗುತ್ತದೆ. ರೈತರು ಮೈಕ್ರೋ ಫೈನಾನ್ಸ್ ಕಿರುಕುಳಗಳಿಗೆ ಹೆದರಬಾರದು ಎಂದರು. ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಮಹಂತ ರುದ್ರಸ್ವಾಮೀಜಿ, ರಾಜೇಂದ್ರಸಿಂಗ್, ಎಚ್.ಆಂಜನೇಯ, ಟಿ.ರಘುಮೂರ್ತಿ, ಮಲ್ಲಿಕಾರ್ಜುನ ಗುಂಗೆ, ವೆಂಕಟ ಸುಬ್ರಹ್ಮಣೈಮ, ಆನಂದ ಮಲ್ಲಿಗಾವಾಡ ಮುಂತಾದವರು ಭಾಗವಹಿಸಿದ್ದರು.ದಾವಣಗೆರೆ ಸುಗಮ ಸಂಗೀತ ಗಾಯಕ ಆನಂದ ಆರ್ ಪಾಟೀಲ್ ವಚನಗೀತೆಗಳನ್ನು ಹಾಡಿದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ತರಳಬಾಳು ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರದಿಂದ 1.60 ಕೋಟಿ ರು. ಅನುದಾನ ಬಾಕಿ ಇರುವುದು ಗಮನಕ್ಕೆ ಬಂದಿದೆ. ಜೊತೆಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಅನುದಾನ 50 ಲಕ್ಷ ಬಾಕಿ ಇರುವುದಾಗಿಯೂ ಗಮನಕ್ಕೆ ಬಂದಿದೆ. ಆ ಅನುದಾನವನ್ನು ಕೂಡಲೇ ಒದಗಿಸಿಕೊಡಲು ಯತ್ನಿಸುತ್ತೇನೆ ಎಂದು ಸಚಿವ ಎನ್. ಚೆಲುವರಾಯಸ್ವಾಮಿ ಭರವಸೆ ನೀಡಿದರು.