ಸಾರಾಂಶ
ಪ್ರಸ್ತುತವಾಗಿ ಮಳೆ ಬಾರದೇ ಡ್ಯಾಂನಲ್ಲಿ ನೀರಿನ ಕೊರತೆ ಇದೆ. ರೈತರು ಇದನ್ನು ಅರ್ಥಮಾಡಿಕೊಳ್ಳಬೇಕು. ಸಧ್ಯದ ಪರಿಸ್ಥಿತಿಯಲ್ಲಿ ಜನ-ಜಾನುವಾರುಗಳಿಗೆ ನೀರುಕೊಡುವುದಷ್ಟೇ ಮುಖ್ಯವಾಗಿದೆ.
ಕನ್ನಡಪ್ರಭ ವಾರ್ತೆ ಶಹಾಪುರ
ಡ್ಯಾಂನಲ್ಲಿ ನೀರಿನ ಲಭ್ಯತೆ ಕೊರತೆಯಿಂದ ಸದ್ಯ ನೀರು ಕೊಡುವ ಪರಸ್ಥಿತಿ ಇಲ್ಲ. ಜನ ಜಾನುವಾರುಗಳಿಗೆ ನೀರು ಕೊಡುವುದು ಅಷ್ಟೇ ಮುಖ್ಯವಾಗಿದೆ. ರೈತರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ಪ್ರತಿಭಟನಾನಿರತ ರೈತರಿಗೆ ಮನವಿ ಮಾಡಿದ್ದಾರೆ.ನಗರದ ಅವರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಮಾಡಿದೆ. ಡಿ. 14ರವರೆಗೆ ರೈತರ ಎಲ್ಲಾ ಬೆಳೆಗಳಿಗೆ ನೀರು ಒದಗಿಸಿ ಕೊಟ್ಟಿದ್ದೇವೆ. ಮಳೆ ಇಲ್ಲದೆ ಪರಿಸ್ಥಿತಿ ಗಂಭೀರವಾಗಿದೆ ರಾಜ್ಯದಲ್ಲಿ 253 ತಾಲೂಕುಗಳು ಬರಗಾಲ ಪೀಡಿತ ಎಂದು ಘೋಷಣೆ ಮಾಡಿವೆ. ಡ್ಯಾಮಿನಲ್ಲಿ 49 ಟಿಎಂಸಿ ನೀರಿನ ಲಭ್ಯತೆ ಇದೆ.
ಸಲಹಾ ಸಮಿತಿಯಲ್ಲಿ ತೀರ್ಮಾನವಾದಂತೆ ಜೂನ್ ಜುಲೈವರೆಗೆ ಕುಡಿಯುವ ನೀರು, ಬೇರೆ ಬೇರೆ ಬೆಳೆಗಳಿಗೆ ನೀರು, ಕೆರೆ ತುಂಬೀಸುವ ಕೆಲಸ, ಎಲ್ಲವೂ ನೋಡಿದರೆ ನೀರು ಉಳಿಯಲು ಅಂದಾಜು ಇಲ್ಲ, ಮೆಣಸಿನ ಬೆಳೆಗಾರರು ಕಳೆದ ಒಂದು ವಾರದಿಂದ ನೀರು ಕೊಡುವಂತೆ ಹೋರಾಟ ಮಾಡುತ್ತಿದ್ದಾರೆ. ರೈತರು ಹೋರಾಟ ಮಾಡುವುದು ತಪ್ಪು ಅಂತ ನಾನು ಹೇಳುತ್ತಿಲ್ಲ. ಇವರನ್ನು ನೋಡಿ ಜೇವರ್ಗಿ- ರಾಯಚೂರು -ಬಾಗಲಕೋಟೆ ರೈತರು ನೀರು ಕೇಳುತ್ತಿದ್ದಾರೆ.ಈಗಾಗಲೇ ರೂ.95, 98% ರೈತರಿಗೆ ನೀರು ಕೊಡುವ ಕೆಲಸ ಮಾಡಿದ್ದೇವೆ ಎಂದ ಅವರು, ನಮ್ಮ ರೈತರಿಗೆ 2-3 ದಿನವಾದರೂ ನೀರು ಕೊಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.