ತಾಲೂಕಿನ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನಗೆ ಬೇಕಾದ ಹೆಸರು, ಗೋವಿನಜೋಳ ಸೇರಿದಂತೆ ವಿವಿಧ ಬೀಜಗಳನ್ನು ಸರ್ಕಾರದ ಸಹಾಯಧನದಲ್ಲಿ ನರಗುಂದ ಮತ್ತು ಕೊಣ್ಣೂರು ರೈತ ಸಂರ್ಪಕ ಕೇಂದ್ರದಲ್ಲಿ ನೀಡಲಾಗುವುದು.

ನರಗುಂದ: ಕೃಷಿಯನ್ನೆ ನಂಬಿಕೊಂಡು ಜೀವನ ಮಾಡುವ ರೈತ ಸಮುದಾಯ ಮುಂಗಾರು ಹಂಗಾಮಿನಲ್ಲಿ ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡಬೇಕೆಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಿ ಮಾತನಾಡಿ, ಕಳೆದ ಹಲವು ದಿನಗಳಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಪ್ರಾರಂಭವಾಗಿದ್ದರಿಮದ ಭಾರತಕ್ಕೆ ಇಂಧನ ಮತ್ತು ಅನಿಲ ಗ್ಯಾಸ್, ರಾಸಾಯನಿಕ ಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಸರಿಯಾಗಿ ಪೂರೈಕೆಯಾಗಿಲ್ಲ. ಇದರಿಂದ ದೇಶದಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗಿವೆ. ಇಂಥ ಸಮಸ್ಯೆಗಳನ್ನು ಎದುರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.

ತಾಲೂಕಿನ ರೈತರು ಮುಂಗಾರು ಹಂಗಾಮಿನ ಬಿತ್ತನಗೆ ಬೇಕಾದ ಹೆಸರು, ಗೋವಿನಜೋಳ ಸೇರಿದಂತೆ ವಿವಿಧ ಬೀಜಗಳನ್ನು ಸರ್ಕಾರದ ಸಹಾಯಧನದಲ್ಲಿ ನರಗುಂದ ಮತ್ತು ಕೊಣ್ಣೂರು ರೈತ ಸಂರ್ಪಕ ಕೇಂದ್ರದಲ್ಲಿ ನೀಡಲಾಗುವುದು ಎಂದರು.

ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಮಾತನಾಡಿ, ಪ್ರಸಕ್ತ ವರ್ಷ ಮೇ ತಿಂಗಳಲ್ಲಿ ಆಗಬೇಕಾದ ವಾಡಿಕೆ ಮಳೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾದ ನಂತರ ರೈತರು ಜಮೀನುಗಳು ತೇವಾಂಶ ಹೊಂದಿದ ಮೇಲೆ ಬಿತ್ತನೆ ಮಾಡಬೇಕು. ರೈತರಿಗೆ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು.

ನರಗುಂದ ರೈತ ಸಂಪರ್ಕ ಕೇಂದ್ರಕ್ಕೆ 40 ಕ್ವಿಂಟಲ್, ಕೊಣ್ಣೂರು ರೈತ ಸಂಪರ್ಕ ಕೇಂದ್ರಕ್ಕೆ 20 ಕ್ವಿಂಟಲ್ ಹೆಸರು ಬಿತ್ತನೆ ಬೀಜ ಬಂದಿದೆ. ಮುಂದಿನ ದಿನಗಳಲ್ಲಿ ರೈತರ ಬೇಡಿಕೆ ಅನುಸಾರ ಬಿತ್ತನೆ ಬೀಜಗಳನ್ನು ತರಿಸಿಕೊಳ್ಳಲಾಗುವುದು. ಒಂದು ವಾರದೊಳಗೆ ಗೋವಿನಜೋಳ ಬೀಜ ರೈತ ಸಂಪರ್ಕ ಕೇಂದ್ರಕ್ಕೆ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಶಿವಾನಂದ ಮುತ್ತವಾಡ, ಚಂದ್ರಶೇಖರ ದಂಡಿನ, ವಾಲಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಪವಾಡಪ್ಪ ವಡ್ಡಿಗೇರಿ, ಬಸವರಾಜ, ದೇವಾನಂದ ಕಲಾಲ, ಸುರೇಶ ಸವದತ್ತಿ, ಫಕೀರಗೌಡ ಫಕೀರಗೌಡ್ರ, ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.