ಜಮೀನು ಸಮಸ್ಯೆ ಪರಿಹಾರವಾಗುತ್ತಿಲ್ಲ ರೈತನ ಏಕಾಂಗಿ ಪ್ರತಿಭಟನೆ

| Published : May 07 2025, 12:47 AM IST

ಜಮೀನು ಸಮಸ್ಯೆ ಪರಿಹಾರವಾಗುತ್ತಿಲ್ಲ ರೈತನ ಏಕಾಂಗಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಗ್ರಾಮ ವಾಸ್ತವ್ಯ ಹಾಗೂ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಶೋಷಿತ, ಬಡವರ್ಗದ ಜನತೆಗೆ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ರೈತರೊಬ್ಬರು ತಾಲೂಕು ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆಯನ್ನು ನಡೆಸಿದರು. ಕಡೆಯ ಆಸ್ತ್ರವಾಗಿ ತಾಲೂಕು ಕಚೇರಿ ಮುಂದೆ ಏಕಾಂಗಿಯಾಗಿ ಕುಳಿತು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸರ್ಕಾರ ಗ್ರಾಮ ವಾಸ್ತವ್ಯ ಹಾಗೂ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಶೋಷಿತ, ಬಡವರ್ಗದ ಜನತೆಗೆ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ರೈತರೊಬ್ಬರು ತಾಲೂಕು ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆಯನ್ನು ನಡೆಸಿದರು.

ತಾಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ತಿಮ್ಮಯ್ಯ ಎಂಬ ರೈತ ಧರಣಿ ಕುಳಿತು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಬಡರೈತನ ಹೋರಾಟಕ್ಕೆ ಸಾಥ್ ನೀಡಿದ ಸಾಮಾಜಿಕ ಹೋರಾಟಗಾರ ಹೊಸಹಳ್ಳಿ ವೀರಭದ್ರಪ್ಪ ರೈತರ ಪರವಾಗಿ ಮಾತನಾಡಿ, ಮಾಡಾಳು ಗ್ರಾಮದ ತಿಮ್ಮಯ್ಯ ಎಂಬ ರೈತ ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬದ ವ್ಯಕ್ತಿಯಾಗಿದ್ದು, ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ ೨೦ ಗುಂಟೆ ಜಮೀನು ಅನೇಕ ವರ್ಷಗಳಿಂದ ಅವರ ಸ್ವಾಧೀನದಲ್ಲಿದೆ. ಆದರೆ ಖಾತೆ ವರ್ಗಾವಣೆ ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಮಾಡಿಕೊಡುತ್ತಿಲ್ಲ. ಈ ಬಗ್ಗೆ ಅವರು ಈ ಹಿಂದೆ ಜಿಲ್ಲಾಧಿಕಾರಿಗಳು ನಡೆಸಿದ ಗ್ರಾಮ ವಾಸ್ತವ್ಯ ಮತ್ತು ಶಾಸಕರು ನಡೆಸಿದ ಜನಸಂಪರ್ಕ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಖಾತೆಯನ್ನ ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಜಮೀನಿನ ಖಾತೆಯನ್ನ ತಿಮ್ಮಯ್ಯ ಅವರ ಹೆಸರಿಗೆ ಇನ್ನೂ ಮಾಡಿಕೊಡದೇ ತಾಲೂಕು ಕಚೇರಿಗೆ ಅಲೆದಾಡಿ ಸಾಕಾಗಿದ್ದಾರೆ. ಕಡೆಯ ಆಸ್ತ್ರವಾಗಿ ತಾಲೂಕು ಕಚೇರಿ ಮುಂದೆ ಏಕಾಂಗಿಯಾಗಿ ಕುಳಿತು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ವಿವರಿಸಿದರು.

ಸಂಬಂಧಪಟ್ಟ ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಈ ಬಡ ರೈತನ ಸಮಸ್ಯೆಯ ಪರಿಹಾರಕ್ಕೆ ಸ್ಪಂದಿಸುವ ಮೂಲಕ ಆತನ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆಗೆ ಮಾಡಿಕೊಡುವ ಮೂಲಕ ಸಹಕರಿಸಿ ನ್ಯಾಯವನ್ನ ದೊರಕಿಸಬೇಕೆಂದು ಆಗ್ರಹಿಸಿದರು. ನಂತರ ತಹಸೀಲ್ದಾರ್ ಸಂತೋಷ್ ಕುಮಾರ್ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

===============ಪೋಟೋ-೧ ಅರಸೀಕೆರೆ ತಾಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಪರಿಶಿಷ್ಠ ಜಾತಿ ಯ ರೈತರಾದ ತಿಮ್ಮಯ್ಯ ಎಂಬುವರು ಧರಣಿ ಕುಳಿತು ಪ್ರತಿಭಟನೆ ನಡೆಸಿದದರು.