ದ್ರಾಕ್ಷಿ ಹೊಸ ತಳಿ ಬೆಳೆಯಲು ರೈತರು ಮುಂದಾಗಿ: ಅಶಿಶ್ ಕಾಳೆ

| Published : May 21 2024, 12:33 AM IST

ದ್ರಾಕ್ಷಿ ಹೊಸ ತಳಿ ಬೆಳೆಯಲು ರೈತರು ಮುಂದಾಗಿ: ಅಶಿಶ್ ಕಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ದ್ರಾಕ್ಷಿ ಬೆಳೆಯುವುದು ಬಹಳ ಕಷ್ಟದ ಕೆಲಸ. ಶ್ರಮ ವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ದ್ರಾಕ್ಷಿ ಬೆಳೆಯಿಂದ ಲಾಭ ಪಡೆದುಕೊಳ್ಳಬಹುದು ಎಂದು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಅಶಿಶ್ ಕಾಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಕಡಿಮೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಯಿಂದ ಹೆಚ್ಚು ಆದಾಯ ಪಡೆಯಬಹುದು. ದ್ರಾಕ್ಷಿ ಬೆಳೆಯುವುದು ಬಹಳ ಕಷ್ಟದ ಕೆಲಸ. ಶ್ರಮ ವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ದ್ರಾಕ್ಷಿ ಬೆಳೆಯಿಂದ ಲಾಭ ಪಡೆದುಕೊಳ್ಳಬಹುದು ಎಂದು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಅಶಿಶ್ ಕಾಳೆ ಹೇಳಿದರು.

ತಾಲೂಕಿನ ಶಿರವಾಳ ಗ್ರಾಮದ ಸಮೀಪ ತಾಲೂಕು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅವರ ತೋಟದಲ್ಲಿ ನಡೆದ ರಾಜಾ-ರಾಣಿ ದ್ರಾಕ್ಷಿ ತಳಿಗಳ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ರೈತರು ಹೊಸ ಹೊಸ ದ್ರಾಕ್ಷಿ ತಳಿಗಳನ್ನು ಬೆಳೆಯಬೇಕು. ಸಮಯಕ್ಕೆ ಕೀಟನಾಶಕ, ಸಾವಯವ ಗೊಬ್ಬರ ಬಳಸಬೇಕು ಎಂದರು.

ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜಿಲ್ಲಾಮಟ್ಟದ ದ್ರಾಕ್ಷಿ ಬೆಳೆಗಾರರ ಕಾರ್ಯಾಗಾರ ಏರ್ಪಡಿಸಿದರೆ ಅನುಕೂಲವಾಗುತ್ತದೆ. ಸರ್ಕಾರ ದ್ರಾಕ್ಷಿ ಬೆಳೆಯುವ ಸಣ್ಣ ರೈತರಿಗೆ ಶೇ.70 ಸಹಾಯಧನ ನೀಡಬೇಕು ಮತ್ತು ನರೇಗಾ ಯೋಜನೆ ಅಡಿಯಲ್ಲಿ ದ್ರಾಕ್ಷಿ ಬೆಳೆಯನ್ನು ಅಳವಡಿಸಿಕೊಂಡು ಸರಿಯಾದ ಸಮಯಕ್ಕೆ ಮಾನವ ದಿನ ಮತ್ತು ಸಾಮಗ್ರಿ ವೆಚ್ಚ ನೀಡಬೇಕು. ಸರ್ಕಾರದಿಂದಲೇ ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಒಂದು ವಾರ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ವಿಶೇಷವಾದ ಬೆಳೆ ವಿಮೆ ಕಂಪನಿ ಸ್ಥಾಪಿಸಬೇಕು. ಸ್ಟೋರೆಜ್‌ಗಳ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಮಾತನಾಡಿ, ಈ ಭಾಗದ ರೈತರು ಕೇವಲ ಒಣ ಬೇಸಾಯದಲ್ಲಿ ತೊಡಗಿದ್ದರಿಂದ ಮಳೆ ಬಂದರೆ ಮಾತ್ರ ಲಾಭ, ಇಲ್ಲದಿದ್ದರೆ ಸಂಪೂರ್ಣವಾಗಿ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ರೈತರು ತಮ್ಮ ಜಮೀನಿನಲ್ಲಿ ಇದ್ದ ನೀರಿನಲ್ಲೇ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ದ್ರಾಕ್ಷಿ ಬೆಳೆಯಲು ಮುಂದಾಗಬೇಕು. ಇತ್ತೀಚೆಗೆ ಹೊಸ ತಳಿಗಳು ಬಂದಿದ್ದು ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ದ್ರಾಕ್ಷಿ ಬೆಳೆಯಬಹುದು. ಅಲ್ಲದೇ ಸರ್ಕಾರದಿಂದ ಸಹಾಯಧನ ಸಹ ನೀಡುತ್ತಿದೆ.

ಆದ್ದರಿಂದ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ದ್ರಾಕ್ಷಿ ಬೆಳೆಗಾರರ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ. ಆಸಕ್ತಿ ಹೊಂದಿರುವ ರೈತರು ನಮಗೆ ಸಂಪರ್ಕಿಸಿದರೆ ದ್ರಾಕ್ಷಿ ಬೆಳೆಯುವ ಬಗ್ಗೆ ಮಾಹಿತಿ ಸಹ ನೀಡಲಾಗುವುದು ಎಂದು ಹೇಳಿದರು.

ಪ್ರಗತಿಪರ ದ್ರಾಕ್ಷಿ ಬೆಳೆಗಾರ ಜೆ.ಎಂ.ಕೊರಬು ಮಾತನಾಡಿ, ವೈಜ್ಞಾನಿಕ ಕೃಷಿ ಮಾಡಬೇಕು.

ಸಾವಯವ ಗೊಬ್ಬರ ಬಳಕೆ ಮಾಡಬೇಕು.ರೈತರು ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಬೆಳೆ ಬೆಳೆಯಬೇಕಾದರೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಬೇಕು. ನೀರಾವರಿ ಯೋಜನೆಗಳಿಗೆ ಸರ್ಕಾರವು ಸಹ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಗಣೇಶ ಬೋಸಲೆ ರೈತ ಮುಖಂಡರು ಹಾಗೂ ದ್ರಾಕ್ಷಿ ಬೆಳೆಗಾರರಾದ ಶಿವಪುತ್ರಪ್ಪ ಜಿಡ್ಡಗಿ, ಸಿದ್ದಪ್ಪ ಸಿನ್ನೂರ, ಮಹಾಂತೇಶ ಬಡಿಗೇರ, ಸೈಫನ ಚಿಕ್ಕಳಗಿ, ಗಾಲಿಬ ಮುಜಾವರ ಹಾಜಿ ಮುಜಾವರ, ಗೌಸ್ ಮುಜಾವರ, ಅಮೀರ್ ಮುಜಾವರ, ಸೋಂದೂಸಾಬ ಶೇಖ ಇತರರಿದ್ದರು.