ಬೇಸಿಗೆ ವೇಳೆ ಪ್ರತಿವರ್ಷ ತಾಲೂಕಿನ ರೈತರು ಜಮೀನನ್ನು ಸಮತಟ್ಟು ಮಾಡುವುದು, ಬದು ನಿರ್ಮಾಣ, ಜಮೀನಿನಲ್ಲಿ ಹಾದು ಹೋಗಿರುವ ಕಾಲುವೆಗಳಲ್ಲಿನ ಹೂಳು, ಜಾಲಿ ಕಂಟಿ, ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುತ್ತಾರೆ.

ಎಸ್.ಜಿ. ತೆಗ್ಗಿನಮನಿನರಗುಂದ: ಜೆಸಿಬಿ ಯಂತ್ರಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಿದ್ದು, ಹೀಗಾಗಿ ಜಮೀನುಗಳನ್ನು ಸಮತಟ್ಟು ಮಾಡುವುದು ಸೇರಿದಂತೆ ಇತರ ಕಾರ್ಯ ಕೈಗೊಳ್ಳಲು ರೈತರು ಜೆಸಿಬಿ ಯಂತ್ರಗಳಿಗಾಗಿ ಪರದಾಡುವಂತಾಗಿದೆ.

ಬೇಸಿಗೆ ವೇಳೆ ಪ್ರತಿವರ್ಷ ತಾಲೂಕಿನ ರೈತರು ಜಮೀನನ್ನು ಸಮತಟ್ಟು ಮಾಡುವುದು, ಬದು ನಿರ್ಮಾಣ, ಜಮೀನಿನಲ್ಲಿ ಹಾದು ಹೋಗಿರುವ ಕಾಲುವೆಗಳಲ್ಲಿನ ಹೂಳು, ಜಾಲಿ ಕಂಟಿ, ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುತ್ತಾರೆ. ಈ ಎಲ್ಲ ಕಾರ್ಯಕ್ಕಾಗಿ ರೈತರು ಜೆಸಿಬಿ ಯಂತ್ರಗಳನ್ನೇ ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ಕಳೆದ 2 ತಿಂಗಳಿನಿಂದ ರೈತರು ಜೆಸಿಬಿ ಯಂತ್ರಗಳಿಗಾಗಿ ಅಲೆದಾಡಿದರೂ ಸಿಗುತ್ತಿಲ್ಲ.

ವರ್ಷಪೂರ್ತಿ ಲೀಸ್‌: ತಾಲೂಕಿನಲ್ಲಿ 40ರಿಂದ 50 ಜೆಸಿಬಿ ಮತ್ತು 10ರಿಂದ 15 ಹಿಟ್ಯಾಚಿ ಯಂತ್ರಗಳಿವೆ. ಆದರೆ ಜೆಸಿಬಿ ಮಾಲೀಕರು ರೈತರ ಜಮೀನು ಕೆಲಸ ಕೇವಲ 1ರಿಂದ 2 ತಿಂಗಳು ಮಾತ್ರ ಸಿಗುತ್ತವೆ. ನಂತರದ ದಿನಗಳಲ್ಲಿ ಯಂತ್ರಗಳಿಗೆ ಕೆಲಸ ಸಿಗದೆ ತೊಂದರೆ ಆಗುತ್ತದೆ. ಹಾಗಾಗಿ ನಾವು ವರ್ಷಪೂರ್ತಿ ಗುತ್ತಿಗೆದಾರರಿಗೆ ಲೀಸ್‌ ಬಿಟ್ಟರೆ ನಮ್ಮ ಉದ್ಯೋಗಕ್ಕೆ ಯಾವುದೇ ರೀತಿ ತೊಂದರೆ ಆಗುವುದಿಲ್ಲವೆಂದು ಯಂತ್ರಗಳ ಮಾಲೀಕರು ಹೇಳುತ್ತಾರೆ.ಡೀಸೆಲ್ ಕೊರತೆ: ರೈತರು ಏಪ್ರಿಲ್ ತಿಂಗಳಿನಲ್ಲಿ ಜಮೀನಿನ ಕೆಲಸಗಳನ್ನು ಜೆಸಿಬಿ ಮೂಲಕ ಮುಂದಾಗಿದ್ದರು. ಆಗ ಮಧ್ಯಪ್ರಾಚ್ಯ ದೇಶಗಳಲ್ಲಿಯ ಯುದ್ಧದಿಂದ ಇಂಧನ ಸರಿಯಾಗಿ ಸಿಗಲಿಲ್ಲ. ಹೀಗಾಗಿ ಆ ವೇಳೆ ಬಹುತೇಕ ಜೆಸಿಬಿ ಮಾಲೀಕರು ಯಂತ್ರಗಳನ್ನು ದುಡಿಸಲು ಸಾಧ್ಯವಾಗಲಿಲ್ಲ. ಈಗ ಏಕಕಾಲಕ್ಕೆ ಬಹಳಷ್ಟು ರೈತರು ಜೆಸಿಬಿ ಯಂತ್ರಗಳನ್ನು ಜಮೀನಿನ ಕೆಲಸಕ್ಕೆ ಕೇಳುತ್ತಿದ್ದಾರೆ. ಹೀಗಾಗಿ ಸಹಜವಾಗಿ ಜೆಸಿಬಿ ಯಂತ್ರಗಳಿಗೆ ಭಾರಿ ಬೇಡಿಕೆ ಬಂದಿದೆ. ಆದರೆ ರೈತರ ಬೇಡಿಕೆಗೆ ತಕ್ಕಂತೆ ಯಂತ್ರಗಳು ಲಭ್ಯವಾಗುತ್ತಿಲ್ಲ ಎಂದು ಬನಹಟ್ಟಿ ಗ್ರಾಮದ ರೈತ ಬಾಪುಗೌಡ ಪಾಟೀಲ ತಿಳಿಸಿದರು.

ಭಾರಿ ಡಿಮ್ಯಾಂಡ್‌: ತಾಲೂಕಿನಲ್ಲಿ ರೈತರು ಒಂದೇ ಸಮಯಕ್ಕೆ ಜೆಸಿಬಿ ಯಂತ್ರಗಳನ್ನು ಜಮೀನು ಕೆಲಸಕ್ಕೆ ಕೇಳುವುದರಿಂದ ಯಾವ ರೈತರ ಜಮೀನಿನ ಕೆಲಸಗಳಿಗೆ ಹೋಗಬೇಕೆಂದು ತಿಳಿಯದಾಗಿದೆ. ಹೀಗಾಗಿ ತಾಲೂಕಿನಲ್ಲಿ ಜೆಸಿಬಿ ಯಂತ್ರಗಳಿಗೆ ಭಾರಿ ಡಿಮ್ಯಾಂಡ್‌ ಸೃಷ್ಟಿಯಾಗಿದೆ ಎಂದು ಜೆಸಿಬಿ ಯಂತ್ರದ ಮಾಲೀಕ ಮಂಜು ಜೋಗಣ್ಣವರ ತಿಳಿಸಿದರು.