ಸಾರಾಂಶ
ಬೆಂಗಳೂರು : ಯೂರಿಯಾ ಗೊಬ್ಬರಕ್ಕಾಗಿ ರೈತರ ಹಾಹಾಕಾರ ಮುಂದುವರಿದಿದ್ದು, ಗೊಬ್ಬರಕ್ಕಾಗಿ ರೈತರು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತು ಚಾತಕಪಕ್ಷಿಯಂತೆ ಕಾಯುವ ಸ್ಥಿತಿ ಎದುರಾಗಿದೆ. ಇದೇ ವೇಳೆ, ಹರಪನಹಳ್ಳಿ, ಹೀರೆಕೆರೂರು, ದಾವಣಗೆರೆ ಸೇರಿ ರಾಜ್ಯದ ಕೆಲವೆಡೆ ಗೊಬ್ಬರಕ್ಕಾಗಿ ರೈತರು ಸೋಮವಾರವೂ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಗೊಬ್ಬರಕ್ಕಾಗಿ ಆಗ್ರಹಿಸಿ ಆ.1ರಂದು ಕೊಪ್ಪಳ ಜಿಲ್ಲಾ ಬಂದ್‌ಗೆ ಬಿಜೆಪಿ ಕರೆ ನೀಡಿದೆ.
ಸೋಮವಾರ ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ತೆಗ್ಗಿನ ಮಠದ ಬಳಿ ವೀರಭದ್ರೇಶ್ವರ ಆಗ್ರೋ ಕೇಂದ್ರದ ಎದುರು ರೈತರು ಯೂರಿಯಾಕ್ಕಾಗಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 6 ಗಂಟೆಯಿಂದಲೇ ಗೊಬ್ಬರಕ್ಕಾಗಿ ರೈತರು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನವಾದರೂ ಗೊಬ್ಬರ ಕೊಡದಿದ್ದಕ್ಕೆ ಆಕ್ರೋಶಗೊಂಡು ಪ್ರತಿಭಟಿಸಿದರು. ಹೂವಿನಹಡಗಲಿಯಲ್ಲಿ ನಾಗರಪಂಚಮಿ ಹಬ್ಬದ ದಿನವೂ ರೈತರು, ರೈತ ಮಹಿಳೆಯರು, ಮಕ್ಕಳು ಯೂರಿಯಾಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು.
ಕುಷ್ಟಗಿ, ಯಲಬುರ್ಗಾದಲ್ಲಿ ಸೇರಿ ಕೊಪ್ಪಳ ಜಿಲ್ಲೆಯಲ್ಲೂ ಕೆಲವಡೆ ಸರದಿಯಲ್ಲಿ ನಿಂತು ರೈತರು ಗೊಬ್ಬರ ಖರೀದಿಸಿದರೆ, ಕೆಲ ಮಳಿಗೆಗಳ ಎದುರು ‘ನೋ ಸ್ಟಾಕ್ ’ಬೋರ್ಡ್ ಹಾಕಿದ್ದನ್ನು ನೋಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲೂ ರೈತ ಸಂಘ ಮತ್ತು ಹಸಿರು ಸೇನೆ ಆಶ್ರಯದಲ್ಲಿ ರೈತರು ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಬೆಳಗ್ಗೆಯಿಂದಲೇ ವಿವಿಧ ಫರ್ಟಿಲೈಜರ್ ಅಂಗಡಿಗಳ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ಕಾದು ಕುಳಿತ ರೈತರಿಗೆ ಅಂಗಡಿ ಮಾಲೀಕರು ಗೊಬ್ಬರ ಬಂದಿಲ್ಲ ಎಂದು ತಿಳಿಸಿದರು. ಇದರಿಂದ ಸಿಟ್ಟಿಗೆದ್ದ ರೈತರು ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ಧವೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಅಂಗಡಿಗಳ ಮಾಲೀಕರು ಸ್ವಯಂ ಅಂಗಡಿಗಳನ್ನು ಬಂದ್ ಮಾಡಿದರು.
ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ರೈತರು ರಸಗೊಬ್ಬರ ಕೊಡಿ ಇಲ್ಲ ವಿಷ ಕೊಡಿ ಎಂದು ಕೂಗುತ್ತಾ ತಹಸೀಲ್ದಾರ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶ ಮಾಡಿ ಅವರನ್ನು ತಡೆದರು. ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿಯೂ ರೈತರು ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದರು.
ಇನ್ನು, ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಯೂರಿಯಾ ಸಮರ್ಪಕ ವಿತರಣೆಗೆ ಆಗ್ರಹಿಸಿ ಆ.1ರಂದು ಕೊಪ್ಪಳ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ.
ಈ ಮಧ್ಯೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಗೊಬ್ಬರ ಗಲಾಟೆ ಜೋರಾಗಿದೆ. ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ರೈತ ಸಂಘಟನೆಗಳು, ರೈತರು ನೇರವಾಗಿ ಆರೋಪಿಸುತ್ತಿದ್ದಾರೆ. ಮಣ್ಣು ತಿಂದಿದ್ದ ರೈತನ ಮನೆಗೆ ಬಂತು 6 ಚೀಲ ರಸಗೊಬ್ಬರ:
ಗೊಬ್ಬರ ಸಿಗದೆ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದ ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ರೈತ ಚಂದ್ರಪ್ಪ ಬಡಿಗಿ ಅವರ ಮನೆಗೆ ಸೋಮವಾರ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ನಡಹಳ್ಳಿ ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿತು. ಬಿಜೆಪಿ ವತಿಯಿಂದ ಅವರಿಗೆ ಎರಡು ಚೀಲ ಗೊಬ್ಬರ ವಿತರಿಸಲಾಯಿತು. ಇದೇ ವೇಳೆ, ಜಿಲ್ಲಾಡಳಿತದಿಂದಲೂ ನಾಲ್ಕು ಚೀಲ ಗೊಬ್ಬರವನ್ನು ಅವರಿಗೆ ನೀಡಲಾಗಿದೆ.
ಇದಕ್ಕೆ ಸಂತಸ ವ್ಯಕ್ತಪಡಿಸಿದ ಚಂದ್ರಪ್ಪ, ನಾನು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ಬಳಿಕ ನನಗೆ ಯೂರಿಯಾ ರಸಗೊಬ್ಬರ ನೀಡಿದ್ದಾರೆ. ಆದರೆ, ನನಗೊಬ್ಬನಿಗೆ ಸಿಕ್ಕರೆ ಸಾಲದು, ಎಲ್ಲ ರೈತರಿಗೂ ಸಿಗಬೇಕು ಎಂದು ಹೇಳಿದರು. ದಾವಣಗೆರೆಯಲ್ಲಿ ಬಿಜೆಪಿ ಪ್ರತಿಭಟನೆ:ಯೂರಿಯಾ ಗೊಬ್ಬರಕ್ಕಾಗಿ ಆಗ್ರಹಿಸಿ ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿ ಕಚೇರಿಗೆ ಹೋಗುವ ಮಾರ್ಗದಲ್ಲಿ ಹಳೇ ಪಿ.ಬಿ. ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಂಚಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ, ಪೊಲೀಸರು ರೇಣುಕಾಚಾರ್ಯ ಸೇರಿ 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.