ದೀಡ್ ನಮಸ್ಕಾರದ ಮೂಲಕ ರೈತರ ಹೋರಾಟ

| Published : Sep 05 2025, 01:00 AM IST

ಸಾರಾಂಶ

ಬಗರಹುಕುಂ ಸಾಗುವಳಿದಾರರು, ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ಹಾಗೂ ನಾಗಾವಿ ಆರ್‌ಡಿಪಿಆರ್ ವಿಶ್ವ ವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರು ಪರಿಹಾರ ಅಥವಾ ಪರ್ಯಾಯ ಜಮೀನಿಗೆ ಆಗ್ರಹಿಸಿ ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ಗುರುವಾರ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಕಚೇರಿಯ ವರೆಗೆ ರೈತರು ಸಾಮೂಹಿಕ ದೀಡ್ ನಮಸ್ಕಾರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಗದಗ: ಬಗರಹುಕುಂ ಸಾಗುವಳಿದಾರರು, ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ಹಾಗೂ ನಾಗಾವಿ ಆರ್‌ಡಿಪಿಆರ್ ವಿಶ್ವ ವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರು ಪರಿಹಾರ ಅಥವಾ ಪರ್ಯಾಯ ಜಮೀನಿಗೆ ಆಗ್ರಹಿಸಿ ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ಗುರುವಾರ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಕಚೇರಿಯ ವರೆಗೆ ರೈತರು ಸಾಮೂಹಿಕ ದೀಡ್ ನಮಸ್ಕಾರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, 15 ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದರೂ ಇಂದಿಗೂ ಸರ್ಕಾರ ಹಕ್ಕುಪತ್ರ ನೀಡುವುದಾಗಿ ಹೇಳಿ ಕೇವಲ ಎಸಿ, ಎಡಿಸಿ ನೇತೃತ್ವದಲ್ಲಿ ಕಮಿಟಿಗಳನ್ನು ರಚಿಸುವುದರ ಮೂಲಕ ರೈತರನ್ನು ಮೋಸಗೊಳಿಸುತ್ತಿದೆ. ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬದುಕುತ್ತಿರುವ ರೈತರ ಹೊಟ್ಟೆಯ ಮೇಲೆ ಬರೆ ಎಳೆಯಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಹಾರಿಕೆ ಉತ್ತರ ಹೇಳುವ ಬದಲು ನಮ್ಮ ರೈತರ ಬೇಡಿಕೆಗಳನ್ನು ಈಡೇರಿಸಲಿ ಎಂದು ಆಗ್ರಹಿಸಿದರು.ನಾಗಾವಿ ಗ್ರಾಮದ ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಬದಲು ಹುಯಿಲಗೋಳ ಕುಟುಂಬಕ್ಕೆ 11 ಕೋಟಿ ರು. ಹಣ ನೀಡಿರುವುದು ಯಾವ ನ್ಯಾಯ? ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿನಂತೆ ರೈತರಿಗೆ ಹಕ್ಕುಪತ್ರ ಹಾಗೂ ಪರಿಹಾರ ಒದಗಿಸಬೇಕು. ಇನ್ನು ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಹೋರಾಟವು ಚನ್ನಮ್ಮ ವೃತ್ತದಿಂದ ರೈತರು, ಮಹಿಳೆಯರು ದೀಡ್ ನಮಸ್ಕಾರ ಹಾಕುತ್ತಾ ಮುಳಗುಂದ ನಾಕಾ ಹಾಗೂ ಟಿಪ್ಪು ವೃತ್ತದ ಮೂಲಕ ವಾದ್ಯ ಮೇಳದ ಮೂಲಕ ಭಜನೆ ಮಾಡುತ್ತಾ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಡಳಿತ ಭವನಕ್ಕೆ ತಲುಪಿತು.ಈ ವೇಳೆ ಮಂಜುನಾಥ ಮಾಗಡಿ, ಹೋನ್ನಪ್ಪ ವಡ್ಡರ, ಎಸ್.ಎಸ್. ಪಾಟೀಲ, ಐ.ಎಸ್. ಪ್ರಜಾರ, ಪರಮೇಶ ಲಮಾಣಿ, ದ್ಯಾಮಣ್ಣ ಲಮಾಣಿ, ಪರಶುರಾಮ ಜಲ್ಲಿಗೇರಿ, ರಮೇಶ ಮಜ್ಜೂರ, ಫೀರೊಜ್ ನದಾಫ್, ಶ್ರೀನಿವಾಸ ಶಿರಹಟ್ಟಿ, ಬಸವಣ್ಣೆಪ್ಪ ಚಿಂಚಲಿ, ಚಂಬಣ್ಣ ಚೆನ್ನಪಟ್ಟಣ, ಹನುಮಂತ ಚೆನ್ನಪಟ್ಟಣ, ಖಾದೀರ್ ಸಾಬ, ಫಿರೋಜ್ ನದಾಫ್, ಮಹಮ್ಮದ ಶಲವಡಿ ಸೇರಿದಂತೆ ರೈತರು, ಮಹಿಳೆಯರು ಇದ್ದರು.ಪೊರಕೆ ಚಳವಳಿ ಇಂದು..!ಸತತ 18 ದಿನಗಳಿಂದ ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ತೋರದ ನಡೆಗೆ ಖಂಡನೆ ವ್ಯಕ್ತಪಡಿಸಿ, ಸೆ. 5ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪೊರಕೆ ಚಳವಳಿ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದ್ದಾರೆ.