ಒಂದೆಡೆ ಮಳೆ ಇಲ್ಲ, ಮತ್ತೊಂದೆಡೆ ಬಾವಿ, ಕೊಳವೆಬಾವಿಗಳಲ್ಲಿ ನೀರಿಲ್ಲ. ಕಷ್ಟಪಟ್ಟು ಬೆಳೆದ ಕಬ್ಬು ಕಣ್ಣೆದುರೇ ಒಣಗುತ್ತಿದೆ. ಕಟಾವಿಗೆ ಟೋಳಿ ಕಳುಹಿಸಿ ಎಂದು ಕಾರ್ಖಾನೆಯವರನ್ನು ಕೇಳಿದರೆ, ಟೋಳಿಗಳೇ ಇಲ್ಲ, ನೀವೇ ಕಟಾವು ಮಾಡಿಕೊಂಡು ತನ್ನಿ ಎಂಬ ಉತ್ತರ ಬರುತ್ತಿದೆ. ಹೀಗಾದರೆ ನಾವು ಬೆಳೆದ ಕಬ್ಬನ್ನು ಯಾರಿಗೆ ಮಾರಬೇಕು? ನಮ್ಮ ಸಂಕಷ್ಟ ಕೇಳುವವರು ಯಾರು ಎಂಬುದು ನಿಂಬರ್ಗಾ ವಲಯದ ರೈತರ ಅಳಲು.

ಕನ್ನಡಪ್ರಭ ವಾರ್ತೆ ಆಳಂದ ಒಂದೆಡೆ ಮಳೆ ಇಲ್ಲ, ಮತ್ತೊಂದೆಡೆ ಬಾವಿ, ಕೊಳವೆಬಾವಿಗಳಲ್ಲಿ ನೀರಿಲ್ಲ. ಕಷ್ಟಪಟ್ಟು ಬೆಳೆದ ಕಬ್ಬು ಕಣ್ಣೆದುರೇ ಒಣಗುತ್ತಿದೆ. ಕಟಾವಿಗೆ ಟೋಳಿ ಕಳುಹಿಸಿ ಎಂದು ಕಾರ್ಖಾನೆಯವರನ್ನು ಕೇಳಿದರೆ, ಟೋಳಿಗಳೇ ಇಲ್ಲ, ನೀವೇ ಕಟಾವು ಮಾಡಿಕೊಂಡು ತನ್ನಿ ಎಂಬ ಉತ್ತರ ಬರುತ್ತಿದೆ. ಹೀಗಾದರೆ ನಾವು ಬೆಳೆದ ಕಬ್ಬನ್ನು ಯಾರಿಗೆ ಮಾರಬೇಕು? ನಮ್ಮ ಸಂಕಷ್ಟ ಕೇಳುವವರು ಯಾರು ಎಂಬುದು ನಿಂಬರ್ಗಾ ವಲಯದ ರೈತರ ಅಳಲು.

ಭೂಸನೂರಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭವಾಗಿ ಐದು ದಿನ ಕಳೆದರೂ ನಿಂಬರ್ಗಾ ಭಾಗದ ಒಣಗುತ್ತಿರುವ ಕಬ್ಬಿನ ಕಟಾವಿಗೆ ಕಾರ್ಖಾನೆಯಿಂದ ಟೋಳಿಗಳು ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಬರದ ಹೊಡೆತಕ್ಕೆ ಸಿಲುಕಿರುವ ರೈತರಿಗೆ ಕಟಾವು ವಿಳಂಬ ಮತ್ತೊಂದು ಸಂಕಷ್ಟವಾಗಿ ಪರಿಣಮಿಸಿದೆ.

ನಿಂಬರ್ಗಾ, ಮಾಡಿಯಾಳ ಸಹಿತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬಾವಿ ಮತ್ತು ಕೊಳವೆಬಾವಿಗಳು ಬತ್ತಿವೆ. ಹೀಗಾಗಿ ಕಬ್ಬಿಗೆ ನೀರುಣಿಸಲು ಸಾಧ್ಯವಾಗದೆ ಹಲವು ಜಮೀನುಗಳಲ್ಲಿ ಬೆಳೆ ಒಣಗಿ ನಿಂತಿದೆ. 10ರಿಂದ 11 ತಿಂಗಳ ಬೆಳೆ ಕಟಾವಿಗೆ ಸಿದ್ಧವಾಗಿದ್ದರೂ, ಕಾರ್ಖಾನೆಯವರು ಕಟಾವು ಸಿಬ್ಬಂದಿ ಹಾಗೂ ಯಂತ್ರಗಳನ್ನು ಕಳುಹಿಸದಿರುವುದರಿಂದ ರೈತರು ದಿನವೂ ಕಾಯುವಂತಾಗಿದೆ.

ಕಬ್ಬು ಕಟಾವಿಗೆ ಟೋಳಿ ಕಳುಹಿಸುವಂತೆ ರೈತರು ಕಾರ್ಖಾನೆ ಸಿಬ್ಬಂದಿಯನ್ನು ಹಲವು ಬಾರಿ ಸಂಪರ್ಕಿಸಿದರೂ, ಟೋಳಿಗಳ ಕೊರತೆಯ ನೆಪ ಹೇಳಿ ರೈತರೇ ಕಟಾವು ಮಾಡಿಕೊಂಡು ಕಬ್ಬು ತರಬೇಕು ಎಂದು ಸೂಚಿಸುತ್ತಿದ್ದಾರೆ. ಸ್ಥಳೀಯ ರೈತರ ಬೆಳೆ ಕಟಾವಿಗೆ ಆದ್ಯತೆ ನೀಡುವ ಬದಲು ಬೇರೆ ತಾಲೂಕುಗಳ ಜಮೀನುಗಳಿಗೆ ಟೋಳಿಗಳನ್ನು ಕಳುಹಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ರೈತರ ಸಮಸ್ಯೆಗೆ ಕಾರ್ಖಾನೆ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ನಾಲ್ಕು ಎಕರೆ ಕಬ್ಬು ಒಣಗಿದೆ: ನನ್ನ ನಾಲ್ಕು ಎಕರೆ ಜಮೀನಿನಲ್ಲಿರುವ ಕಬ್ಬು ನೀರಿನ ಅಭಾವದಿಂದ ಸಂಪೂರ್ಣ ಒಣಗುತ್ತಿದೆ. ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕಾರ್ಖಾನೆಯವರು ಕಟಾವು ಟೋಳಿ ಕಳುಹಿಸಿ ರೈತರ ನೆರವಿಗೆ ಬರಬೇಕು. ಕಬ್ಬಿಗೆ ಸೂಕ್ತ ಬೆಲೆ ನೀಡಬೇಕು ಎಂದು ನಿಂಬರ್ಗಾದ ರೈತ ಮಹಿಳೆ ಮಲ್ಲಮ್ಮ ಮಲಕಣ್ಣ ದುಗೊಂಡ ಒತ್ತಾಯಿಸಿದರು.

ಒಣಗಿದ ಕಬ್ಬು ಮೊದಲು ಕಟಾವಾಗಲಿ: ತಾಲೂಕಿನ ಒಣಗುತ್ತಿರುವ ನೂರಾರು ಎಕರೆ ಕಬ್ಬಿನ ಕಟಾವಿಗೆ ತಕ್ಷಣ ಟೋಳಿಗಳನ್ನು ನಿಯೋಜಿಸಬೇಕು. ರೈತರ ಬೇಡಿಕೆಗೆ ಅನುಗುಣವಾಗಿ ಕಟಾವು ಯಂತ್ರಗಳ ವ್ಯವಸ್ಥೆ ಮಾಡಬೇಕು. ಸ್ಥಳೀಯ ರೈತರ ಸಂಕಷ್ಟಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಕೂಡಲೇ ಸ್ಪಂದಿಸಬೇಕು ಎಂದು ಜಿಲ್ಲಾ ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಒತ್ತಾಯಿಸಿದರು.

ಹೋರಾಟದ ಎಚ್ಚರಿಕೆ: ಕಬ್ಬಿನ ಇಳುವರಿ ಮತ್ತಷ್ಟು ಕುಸಿಯುವ ಮುನ್ನ ಒಣಗುತ್ತಿರುವ ಬೆಳೆಗಳ ಕಟಾವಿಗೆ ತಕ್ಷಣ ಆದ್ಯತೆ ನೀಡಬೇಕು. ಮುಂದಿನ ಎರಡು-ಮೂರು ದಿನಗಳಲ್ಲಿ ಕಟಾವು ಟೋಳಿ ಕಳುಹಿಸದಿದ್ದರೆ ರೈತರೊಂದಿಗೆ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಿಂಬರ್ಗಾ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ ಎಚ್ಚರಿಸಿದರು.