ಪ್ರಸ್ತುತ ಕೃಷಿಯಲ್ಲಿ ರಾಸಾಯನಿಕ ಔಷಧಿಗಳ ಅಧಿಕ ಪ್ರಮಾಣದ ಬಳಕೆಯಿಂದಾಗಿ ಕೃಷಿ ಉತ್ಪಾದನಾ ವಸ್ತುಗಳು ವಿಷಮುಕ್ತವಾಗುತ್ತಿವೆ. ಇದನ್ನು ತಪ್ಪಿಸಲು ತೀವ್ರತರ ಬದಲಾವಣೆ ಅಗತ್ಯವಾಗಿದೆ. ರೈತರು ರಾಸಾಯನಿಕ ಕೃಷಿ ಪದ್ಧತಿಯಿಂದ ಸಾವಯವ ಕೃಷಿ ಪದ್ಧತಿಗೆ ಬದಲಾಗಬೇಕು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೃಷಿ ಕ್ಷೇತ್ರದಲ್ಲಿ ರೈತರು ಸಾಂಪ್ರದಾಯಿಕ ಬೆಳೆ ಪದ್ಧತಿಗೆ ಜೋತು ಬೀಳದೆ ಹೊಸ ಹೊಸ ಪ್ರಯೋಗಗಳ ಮೂಲಕ ವಿಷಮುಕ್ತ ಆಹಾರ ಧಾನ್ಯಗಳ ಉತ್ಪಾದನೆಗೆ ಮುಂದಾಗಬೇಕು. ರೈತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವುದು ಅಗತ್ಯ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಶ್ರೀಗಳು ಸಲಹೆ ನೀಡಿದರು.ತಾಲೂಕಿನ ಸಂಗಾಪುರ ಗ್ರಾಮದ ಪ್ರಗತಿಪರ ರೈತ ಮಹಿಳೆ ನಾಗಮ್ಮ ನಾಗರಾಜು ಅವರ ತೋಟದಲ್ಲಿ ತಾಲೂಕು ಕೃಷಿಕ ಸಮಾಜ, ಮೈಸೂರು ಆಕಾಶವಾಣಿ, ಅಗ್ರಿ ಯಾನ ಸಂಸ್ಥೆ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಕೃಷಿಕರ ಸಹಕಾರ ಸಂಘಗಳ ಒಕ್ಕೂಟ, ವಿಶ್ವೇಶ್ವರ ಸ್ತೋತ್ರ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ಸಂಶೋಧನೆಗಳ ಫಲ ರೈತರಿಗೆ ದೊರಕಬೇಕು. ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಅಗತ್ಯವಾಗಿದೆ. ಕೃಷಿ ವಸ್ತುಗಳು ಉತ್ತಮ ಆರೋಗ್ಯ ಉಂಟು ಮಾಡುವ ವಸ್ತುಗಳಾಗಬೇಕು. ಸಾವಯವ ಕೃಷಿಯಲ್ಲಿ ಪ್ರತಿಯೊಬ್ಬರೂ ತೊಡಗಬೇಕು ಎಂದರು.ಪ್ರಸ್ತುತ ಕೃಷಿಯಲ್ಲಿ ರಾಸಾಯನಿಕ ಔಷಧಿಗಳ ಅಧಿಕ ಪ್ರಮಾಣದ ಬಳಕೆಯಿಂದಾಗಿ ಕೃಷಿ ಉತ್ಪಾದನಾ ವಸ್ತುಗಳು ವಿಷಮುಕ್ತವಾಗುತ್ತಿವೆ. ಇದನ್ನು ತಪ್ಪಿಸಲು ತೀವ್ರತರ ಬದಲಾವಣೆ ಅಗತ್ಯವಾಗಿದೆ. ರೈತರು ರಾಸಾಯನಿಕ ಕೃಷಿ ಪದ್ಧತಿಯಿಂದ ಸಾವಯವ ಕೃಷಿ ಪದ್ಧತಿಗೆ ಬದಲಾಗಬೇಕು ಸಲಹೆ ನೀಡಿದರು.
ಕೃಷಿ ಕೆಟ್ಟರೆ ಎಲ್ಲವೂ ಕೆಟ್ಟೋಗುತ್ತದೆ. ಕೃಷಿ ನಮ್ಮೆಲ್ಲರ ಬದುಕಿನ ಅಡಿಪಾಯ. ಕೃಷಿ ಉತ್ಪಾದನೆಗಳು ಏರುಪೇರಾದರೆ ಇತರ ವಲಯಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೃಷಿಯನ್ನು ನಮ್ಮ ಅಭಿವೃದ್ಧಿಯ ಪ್ರಾಥಮಿಕ ವಲಯವೆಂದು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸರ್ಕಾರ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿ ಅನುದಾನ ಕಲ್ಪಿಸಬೇಕು. ಕೃಷಿ ನಂಬಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂಬ ಭರವಸೆ ಕೃಷಿಕರಿಗೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರ ಮಕ್ಕಳು ಕೃಷಿ ಕ್ಷೇತ್ರದಿಂದ ವಿಮುಖರಾಗಿ ಆಹಾರ ಉತ್ಪಾದನೆ ಕುಂಠಿತಗೊಂಡು ದೇಶದ ಆಹಾರ ಭದ್ರತೆಯೇ ನಾಶವಾಗಲಿದೆ ಎಂದು ಎಚ್ಚರಿಸಿದರು.
ಬೆಂಗಳೂರು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರ ಮಹದೇವಪ್ಪ ಮಾತನಾಡಿ, ಕೃಷಿಕ ಸಮಾಜ ರಾಜ್ಯಾದ್ಯಂತ ಕೃಷಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಕೃಷಿ ಕ್ಷೇತ್ರ ಲಾಭದಾಯಕ ಉದ್ದಿಮೆಯಾಗಿ ಬದಲಾಗಬೇಕು. ಕೃಷಿ ಕ್ಷೇತ್ರದ ಪ್ರಗತಿಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ. ಅದರ ಸದುಪಯೋಗವಾಗಬೇಕು. ಕೃಷಿಕರಿಗೆ ಹೆಚ್ಚಿನ ಬೆಲೆ ಹೆಚ್ಚಿನ ಬೆಂಬಲ ದೊರೆಯುವಂತಾಗಬೇಕು ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮೈಸೂರಿನ ಡಿ.ಮಾದೇಗೌಡ ಮಾತನಾಡಿ, ಸರ್ಕಾರಗಳು ಕೃಷಿ ವಲಯವನ್ನು ಆದ್ಯತಾವಲಯವಾಗಿ ಪರಿಗಣಿಸಬೇಕು. ಕೃಷಿಕರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಕೃಷಿ ವಸ್ತುಗಳಿಗೆ ವೈಜ್ಞಾನಿಕ ಬೆಲೆ, ಕೃಷಿಕರಿಗೆ ಹೆಚ್ಚಿನ ನೆರವು ನೀಡಿ ಅನುದಾನ ಒದಗಿಸಬೇಕು. ಅಗತ್ಯ ವಿದ್ಯುತ್, ನೀರು, ರಸಗೊಬ್ಬರ, ಕೀಟನಾಶಕ, ಕಳೆ ನಾಶಕ, ಕೃಷಿ ಯಂತ್ರೋಪಕರಣಗಳು ಸೇರಿ ಅಗತ್ಯ ವಸ್ತುಗಳು ಸುಲಭವಾಗಿ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.
ಮೈಸೂರು ಆಕಾಶವಾಣಿ ಮುಖ್ಯಸ್ಥ ಎನ್.ಕೇಶವಮೂರ್ತಿ ಮಾತನಾಡಿ, ಮೈಸೂರು ಆಕಾಶವಾಣಿ ಕೃಷಿಕರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಇದರ ಸದುಪಯೋಗ ಎಲ್ಲಾ ರೈತರಿಗೂ ದೊರೆಯಬೇಕು ಎಂದು ತಿಳಿಸಿದರು.ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಎನ್.ಎಸ್.ಗಂಗಾಧರ್. ಕೃಷಿಕ ಪ್ರಶಸ್ತಿ ಪಡೆದ ರೈತ ಮಹಿಳೆ ನಾಗಮ್ಮ ನಾಗರಾಜು, ಶ್ವೇತಾ, ಆರ್.ಟಿ.ಓ ಮಲ್ಲಿಕಾರ್ಜುನ, ಮುಖಂಡ ರಾಮಸ್ವಾಮಿ, ಸಾವಯವ ಕೃಷಿ ಮುಖ್ಯಸ್ಥರಾದ ಮಳವಳ್ಳಿ ಎಂ.ಎನ್.ಮಹೇಶ್ಕುಮಾರ್ , ಮಿಕ್ಕರೆ ಮಹೇಶ್, ಮೊಸಳೇಕೊಪ್ಪಲು ಬೋರೆಗೌಡ, ಶಿಕಾರಿಪುರದ ಶಿವಕುಮಾರ್, ನಿವೃತ್ತ ಪ್ರಾಂಶುಪಾಲರಾದ ಕೆ.ಕಾಳೇಗೌಡ, ಮಹಿಳಾ ಒಕ್ಕೂಟದ ಪ್ರೇಮಕುಮಾರಿ, ಕೊಟಗಹಳ್ಳಿ ಮಂಜುಳ, ಸಂಗಾಪುರದ ನಾಗರಾಜು, ಅಂಚಿ ಸಣ್ಣಸ್ವಾಮಿಗೌಡ ಭಾಗವಹಿಸಿದ್ದರು.