ಬಾರದ ಬೆಳೆ ವಿಮೆ, ಬೀದಿಗಿಳಿದ ರೈತರ ಹೋರಾಟ

| Published : Feb 21 2025, 11:45 PM IST

ಸಾರಾಂಶ

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ೨೦೨೩-೨೪ನೇ ಸಾಲಿನ ವಿಮಾ ಪರಿಹಾರ ಮೊತ್ತವನ್ನು ಬಡ್ಡಿ ಸಮೇತವಾಗಿ ಬಿಡುಗಡೆ ಮಾಡುವಂತೆ ಆಗ್ರಹ

ಶಿರಸಿ: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ೨೦೨೩-೨೪ನೇ ಸಾಲಿನ ವಿಮಾ ಪರಿಹಾರ ಮೊತ್ತವನ್ನು ಬಡ್ಡಿ ಸಮೇತವಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಸಹಕಾರಿ ಸಂಘಗಳ ಪ್ರತಿನಿಧಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ ಸಹಕಾರಿ ಸಂಘಗಳ ಪ್ರತಿನಿಧಿಗಳು ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸಿದರಲ್ಲದೇ, ರಾಜ್ಯ ಸರ್ಕಾರ ತುರ್ತು ಸಭೆ ನಡೆಸಿ, ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಮನವಿ ನೀಡಿದರು. ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.

ರೈತರು ೨೦೨೩-೨೪ನೇ ಸಾಲಿಗೆ ತಮ್ಮ ಪಾಲಿನ ವಿಮಾ ಕಂತನ್ನು ತುಂಬಿ ವಿಮೆ ಪಡೆದಿದ್ದಾರೆ. ಬೆಳೆ ಸಾಲ ಪಡೆದಿರುವ ರೈತರು ವಿಮೆ ಮಾಡಿಸಿದ್ದು, ಹವಾಮಾನ ವೈಪರೀತ್ಯದಿಂದ ರೈತರಿಗೆ ಶೇ. ೪೫ರಿಂದ ೫೦ರಷ್ಟು ಫಸಲು ನಷ್ಟವಾಗಿದೆ. ಆರ್ಥಿಕವಾಗಿ ತೀರಾ ತೊಂದರೆಯಲ್ಲಿದ್ದರೂ ವಿಮೆ ಮೊತ್ತ ಭರಣ ಮಾಡಿದ್ದಾರೆ. ಸರ್ಕಾರದ ನಿಯಮಾವಳಿಗಳಂತೆ ಹವಾಮಾನದ ವೈಪರೀತ್ಯ ಮತ್ತು ಮಳೆ ಪ್ರಮಾಣ ಆಧಾರದ ಬೆಳೆ ವಿಮಾ ಪರಿಹಾರವನ್ನು ಅಕ್ಟೋಬರ್ ೨೦೨೪ರ ಅಂತ್ಯದೊಳಗೆ ರೈತರ ಖಾತೆಗೆ ವಿಮಾ ಕಂಪನಿ ಜಮಾ ಮಾಡುತ್ತಿತ್ತು. ಆದರೆ ಈ ದಿನದ ವರೆಗೂ ವಿಮಾ ಕಂಪನಿಯವರು ರೈತರ ಖಾತೆಗೆ ವಿಮಾ ಪರಿಹಾರದ ಮೊತ್ತ ನೀಡಿಲ್ಲ. ಯಾರದೋ ತಪ್ಪಿಗೆ ರೈತರು ಪರಿಹಾರ ಪಡೆಯಲಾದೇ ತೊಂದರೆ ಅನುಭವಿಸುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆಯ್ದ ೫೯ ಪಂಚಾಯಿತಿಗಳ ರೈತರಿಗೆ ಮಾತ್ರ ವಿಮಾ ಪರಿಹಾರ ನೀಡಲಾಗುತ್ತದೆ ಎನ್ನಲಾಗಿದೆ. ತೋಟಗಾರಿಕೆ ಮತ್ತು ಇನ್ನಿತರ ಇಲಾಖೆಗಳಲ್ಲಿ ವಿಚಾರಿಸಿದರೂ ಸಮರ್ಪಕ ಉತ್ತರ ದೊರೆತಿಲ್ಲ. ಶಿರಸಿ ಉಪ ವಿಭಾಗದಲ್ಲಿ ಶಿರಸಿ ತಾಲೂಕಿನ ೮, ಸಿದ್ದಾಪುರ ತಾಲೂಕಿನ ೨, ಮುಂಡಗೋಡ ತಾಲೂಕಿನ ೧ ಮತ್ತು ಯಲ್ಲಾಪುರ ತಾಲೂಕಿನ ೧ ಪಂಚಾಯಿತಿಯ ರೈತರಿಗೆ ಮಾತ್ರ ವಿಮಾ ಪರಿಹಾರ ಬಿಡುಗಡೆಯಾಗುತ್ತಿದೆ. ವಿಮಾ ಪರಿಹಾರದ ಮೊತ್ತವನ್ನು ಬಡ್ಡಿಯೊಂದಿಗೆ ತಕ್ಷಣ ನೀಡುವಂತೆ ಆಗ್ರಹಿಸಲಾಗಿದೆ.

ಟಿಎಸ್‌ಎಸ್ ನಿರ್ದೇಶಕರಾದ ಡಿ.ಎಸ್. ಹೆಗಡೆ, ರವಿ ಹೆಗಡೆ ಹಳದೋಟ, ಪ್ರಮುಖರಾದ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಉಮೇಶ ಭಾಗ್ವತ್ ಕಳಚೆ, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಎನ್.ಬಿ. ಹೆಗಡೆ ಮತ್ತಿಹಳ್ಳಿ, ಮಂಜುನಾಥ ಭಟ್ಟ ಬಿಸ್ಲಕೊಪ್ಪ, ರಾಘವೇಂದ್ರ ಭಟ್ಟ ಹಾಸಣಗಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಅನಂತಮೂರ್ತಿ ಹೆಗಡೆ ನೂರಾರು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಮಾ ಕಂಪೆನಿ ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ವಿಮಾ ಹಣ ಬಿಡುಗಡೆ ಮಾಡಿ, ರೈತರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವುದನ್ನು ಖಂಡಿಸುತ್ತೇನೆ. ವಿಮಾ ಕಂಪನಿ ಇದೇ ರೀತಿ ವರ್ತಿಸುತ್ತಿದ್ದರೆ ಕಾನೂನು ಹೋರಾಟ ಮಾಡಲಾಗುತ್ತದೆ ಎನ್ನುತ್ತಾರೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.

ರೈತರು ಭಿಕ್ಷೆ ಬೇಡುತ್ತಿಲ್ಲ. ವಿಮಾ ಕಂತು ಪಾವತಿ ಮಾಡಿರುವುದರಿಂದ ಪ್ರಶ್ನಿಸುತ್ತಿದ್ದಾರೆ. ರೈತರು ಬೆವರು ಹನಿ ಹರಿಸಿ, ಕೆಲಸ ಮಾಡಿ ವಿಮಾ ಹಣ ಪಾವತಿ ಮಾಡಿದ್ದಾರೆ. ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಿ, ರೈತರಿಗೆ ದೊರಕುವ ವಿಮಾ ಪರಿಹಾರ ನೀಡಬೇಕು ಎನ್ನುತ್ತಾರೆ ವಕೀಲ ಸದಾನಂದ ಭಟ್ಟ ನಿಡಗೋಡ.