ರೈತರಿಂದಲೇ ರಸ್ತೆ ದುರಸ್ತಿ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

| Published : Sep 17 2025, 01:07 AM IST

ರೈತರಿಂದಲೇ ರಸ್ತೆ ದುರಸ್ತಿ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಮಳೆಯಿಂದಾಗಿ ಗುಂಡಿಗಳು ಆಳವಾಗಿ ಬಿದ್ದು ಮಳೆನೀರು ತುಂಬಿ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದ ಹಿನ್ನೆಲೆ ರೈತರು ಸ್ವತಃ ತಾವೇ ಹಣ ವ್ಯಯಿಸಿ ರಸ್ತೆ ತಾತ್ಕಾಲಿಕವಾಗಿ ದುರಸ್ತಿಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ತಾಲೂಕಿನ ಹೊಸ ನೆಲ್ಲೂಡಿಯಿಂದ ತಾಯಮ್ಮನ ಕಟ್ಟೆತನಕ ಸುಮಾರು ಒಂದೂವರೆ ಕಿಮೀ ಉದ್ದದ ರಸ್ತೆ ಹಲವು ತಿಂಗಳಿಂದ ದುಸ್ಥಿತಿಯಲ್ಲಿದ್ದು, ನಿರಂತರ ಮಳೆಯಿಂದಾಗಿ ಗುಂಡಿಗಳು ಆಳವಾಗಿ ಬಿದ್ದು ಮಳೆನೀರು ತುಂಬಿ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದ ಹಿನ್ನೆಲೆ ರೈತರು ಸ್ವತಃ ತಾವೇ ಹಣ ವ್ಯಯಿಸಿ ರಸ್ತೆ ತಾತ್ಕಾಲಿಕವಾಗಿ ದುರಸ್ತಿಪಡಿಸಿಕೊಂಡಿದ್ದಾರೆ.

ಈ ರಸ್ತೆ ಮುಖ್ಯವಾಗಿ ಕೃಷಿಕರು ತಮ್ಮ ಹೊಲಗದ್ದೆಗಳಿಗೆ ಹೋಗಲು ಬಳಸುವ ಮಾರ್ಗವಾಗಿದ್ದು, ಪ್ರತಿದಿನ ನೂರಾರು ರೈತರು ಹಾಗೂ ವಾಹನ ಸವಾರರು ಈ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ಗುಂಡಿಗಳಲ್ಲಿ ಮಳೆನೀರು ತುಂಬಿ ಬೈಕ್ ಸವಾರರು ಆಗಾಗ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ಅನಾಹುತ ಸಂಭವಿಸುವ ಭೀತಿ ಹೆಚ್ಚಾಗಿತ್ತು. ಸಣ್ಣ ವಾಹನಗಳಷ್ಟೇ ಅಲ್ಲ, ಕೃಷಿ ಉತ್ಪನ್ನಗಳನ್ನು ಸಾಗಿಸುವ ಟ್ಯ್ರಾಕ್ಟರ್‌ಗಳು ಮತ್ತು ಜೀಪುಗಳಿಗೂ ಈ ಮಾರ್ಗದಲ್ಲಿ ಸಂಚರಿಸುವುದು ಕಷ್ಟಕರವಾಗಿತ್ತು.

ಚಿಕ್ಕಜಾಯಿಗನೂರಿನಿಂದ ತಾಯಮ್ಮನಕಟ್ಟೆತನಕ ಭಾಗಶಃ ರಸ್ತೆ ಅಭಿವೃದ್ಧಿಗೊಂಡಿದ್ದರೂ, ಹೊಸ ನೆಲ್ಲೂಡಿಯಿಂದ ತಾಯಮ್ಮನಕಟ್ಟೆತನಕದ ಭಾಗ ಮಾತ್ರ ಇನ್ನೂ ಅಭಿವೃದ್ಧಿಗೊಂಡಿಲ್ಲ. ಅನೇಕ ಬಾರಿ ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ.

ಅನಿವಾರ್ಯವಾಗಿ ರೈತರೇ ಕೈ ಜೋಡಿಸಿ, ಸ್ವಂತ ವೆಚ್ಚದಲ್ಲಿ ಜೆಸಿಬಿ ಯಂತ್ರ ಕರೆಸಿ ರಸ್ತೆ ಗುಂಡಿಗಳಿಗೆ ಮಣ್ಣು ತುಂಬಿಸಿ ತಾತ್ಕಾಲಿಕ ದುರಸ್ತಿ ಮಾಡಿಸಿಕೊಂಡಿದ್ದೇವೆ. ತಾತ್ಕಾಲಿಕ ದುರಸ್ತಿ ಮಾಡಿದ್ದರಿಂದ ಸ್ವಲ್ಪ ಮಟ್ಟಿಗೆ ಸಂಚಾರ ಸುಗಮವಾಗಲಿದೆ. ಆದರೆ ಶಾಶ್ವತ ಪರಿಹಾರಕ್ಕಾಗಿ ರಸ್ತೆ ಅಭಿವೃದ್ಧಿ ಅವಶ್ಯಕವಾಗಿದೆ ಎಂದು ರೈತರಾದ ವೆಂಕಟರಾಮರೆಡ್ಡಿ, ಈಶ್ವರರೆಡ್ಡಿ, ರಮೇಶ್, ನಾರಾಯಣರೆಡ್ಡಿ, ವೆಂಕಟೇಶರೆಡ್ಡಿ, ಗೋಪಾಲ, ಇಸ್ಮಾಯಿಲ್, ಕೃಷ್ಣರೆಡ್ಡಿ, ಅಚ್ಚಿರೆಡ್ಡಿ, ಶ್ರೀನಿವಾಸರೆಡ್ಡಿ ಒತ್ತಾಯಿಸಿದರು.