ಕೇಂದ್ರ ಸರ್ಕಾರದ ನೂತನ ಆರ್ಥಿಕ ನೀತಿಗಳು ಬಡವರು ಮತ್ತು ಶ್ರೀಮಂತರು ಎನ್ನುವ ಎರಡು ವರ್ಗಗಳನ್ನು ನಿರ್ಮಿಸುತ್ತಿದೆ. ಶ್ರೀಮಂತರ ಪರ ಕಾಯ್ದೆಗಳನ್ನು ಜಾರಿಗೆ ತಂದು ಅಂಬಾನಿ, ಅದಾನಿಗಳನ್ನು ಪೋಷಿಸುತ್ತಿದೆ. ಮನರೇಗಾ ಯೋಜನೆ ಬದಲಿಸಿ ಜೀ ರಾಮ್‌ ಜೀ ಎನ್ನುವ ಯೋಜನೆ ಜಾರಿಗೊಳಿಸುವ ಮೂಲಕ ದುಡಿಯುವ ವರ್ಗದ ಹಕ್ಕುಗಳನ್ನು ಕಸಿಯಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರೈತಸಂಘ ಮತ್ತು ಕೂಲಿ ಕಾರ್ಮಿಕರ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದು ರಾಜ್ಯ ಕೃಷಿ ಮತ್ತು ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪುಟ್ಟಮಾದು ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ, ದೇವರು ಮತ್ತು ಜಾತಿ ಹೆಸರಿನಲ್ಲಿ ನಮ್ಮ ರಾಜಕಾರಣ ಜನರನ್ನು ವಿಭಜಿಸುತ್ತಿದೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಲೆ ನೀತಿ ರೂಪುಗೊಂಡಿಲ್ಲ. ಅದೇ ರೀತಿ ಕೂಲಿ ಕಾರ್ಮಿರಿಗೂ ಕನಿಷ್ಠ ಕೂಲಿ ನೀತಿ ಜಾರಿಯಾಗಿಲ್ಲ ಎಂದರು.

ರಾಜ್ಯ ಸರ್ಕಾರ 478 ರು. ಕನಿಷ್ಠ ಕೂಲಿ ನಿಗದಿಪಡಿಸಿದ್ದರೆ, ಕೇಂದ್ರ ಸರ್ಕಾರ 421 ರು. ಕನಿಷ್ಠ ಕೂಲಿ ನಿಗದಿ ಮಾಡಿದ್ದರೂ ಸರ್ಕಾರದ ಆದೇಶಗಳು ಇದುವರೆಗೂ ಜಾರಿಯಾಗಿಲ್ಲ. ಕೇರಳ ಸರ್ಕಾರ 60 ವರ್ಷ ಮೀರಿದ ಕೂಲಿ ಕಾರ್ಮಿಕರಿಗೆ ಮಾಸಿಕ ಎರಡು ಸಾವಿರ ರು. ಪಿಂಚಣಿ ನೀಡುತ್ತಿದೆ. 60 ವರ್ಷ ತುಂಬಿದ ಕೂಲಿ ಕಾರ್ಮಿಕರಿಗೆ ಪಿಎಫ್ ನೀಡುತ್ತಿದೆ. ಇಲ್ಲಿನ ಸರ್ಕಾರ ಕೂಲಿ ಕಾರ್ಮಿಕರ ರಕ್ಷಣೆಗೆ ಯಾವುದೇ ನೀತಿ ರೂಪಿಸಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ನೂತನ ಆರ್ಥಿಕ ನೀತಿಗಳು ಬಡವರು ಮತ್ತು ಶ್ರೀಮಂತರು ಎನ್ನುವ ಎರಡು ವರ್ಗಗಳನ್ನು ನಿರ್ಮಿಸುತ್ತಿದೆ. ಶ್ರೀಮಂತರ ಪರ ಕಾಯ್ದೆಗಳನ್ನು ಜಾರಿಗೆ ತಂದು ಅಂಬಾನಿ, ಅದಾನಿಗಳನ್ನು ಪೋಷಿಸುತ್ತಿದೆ. ಮನರೇಗಾ ಯೋಜನೆ ಬದಲಿಸಿ ಜೀ ರಾಮ್‌ ಜೀ ಎನ್ನುವ ಯೋಜನೆ ಜಾರಿಗೊಳಿಸುವ ಮೂಲಕ ದುಡಿಯುವ ವರ್ಗದ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲೀಕರ ಹಿಡಿತದಿಂದ ರಾಜ್ಯ ಸರ್ಕಾರ ಹೊರಬರಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದ ಹಂಚಿಕೆ ಮಾಡಬೇಕು. ಸರ್ಕಾರಗಳು ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಶೋಷಿತರ ಹಕ್ಕುಗಳನ್ನು ದಮನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ 6ನೇ ಜಿಲ್ಲಾ ಸಮ್ಮೇಳನವನ್ನು ಕೆ.ಆರ್.ಪೇಟೆ ಪಟ್ಟಣದಲ್ಲಿ ಫೆಬ್ರವರಿ ಕೊನೆ ವಾರದಲ್ಲಿ ನಡೆಸಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ರೈತ ಮುಖಂಡರಾದ ಹಿರೀಕಳಲೆ ಬಸವರಾಜು, ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲು, ಜಿಲ್ಲಾ ಕಾರ್ಯದರ್ಶಿ ಹನುಮೇಶ್, ತಾಲೂಕು ಘಟಕದ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗೋಪಾಲ್, ಮುಖಂಡರಾದ ಸುರೇಂದ್ರ, ಸುರೇಶ್ ಸೇರಿದಂತೆ ಹಲವು ಮಹಿಳಾ ಸದಸ್ಯರು ಇದ್ದರು.