ಅನ್ನಕ್ಕೆ ವಿಷ ಬೆರೆಸಿಕೊಂಡು ತಿನ್ನಲು ರೈತರ ಯತ್ನ!

| Published : Apr 11 2025, 12:32 AM IST

ಸಾರಾಂಶ

ಭೂಸ್ವಾಧೀನದ ವಿಚಾರವಾಗಿ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಚರ್ಚೆ ನಡೆಸಲು ಬೆಂಗಳೂರಿಗೆ ಹೊರಟಿದ್ದ ರೈತರನ್ನು, ಪೊಲೀಸರು, ಚನ್ನರಾಯಪಟ್ಟಣದಲ್ಲೆ ತಡೆದದ್ದರಿಂದ ಆಕ್ರೋಶಗೊಂಡಿದ್ದ ರೈತರು ಮತ್ತು ಪೊಲೀಸರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಯಿತು. ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಾವು ಬದುಕು ಕಟ್ಟಿಕೊಂಡಿರುವ ಕೃಷಿ ಭೂಮಿಯನ್ನು ನಮ್ಮಿಂದ ಕಿತ್ತುಕೊಂಡು ನಮ್ಮನ್ನು ಅನಾಥರನ್ನಾಗಿ ಮಾಡಬೇಡಿ ಎಂದು ಚನ್ನರಾಯಪಟ್ಟಣ ಹೋಬಳಿಯ ರೈತರು ಅನ್ನಕ್ಕೆ ವಿಷ ಬೆರೆಸಿ ತಿನ್ನಲು ಯತ್ನಿಸಿದ ಘಟನೆ ನಡೆದಿದೆ.

1103 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಹಲವು ಸುತ್ತಿನ ಮಾತುಕತೆಗಳ ನಂತರವೂ, ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಕಾರಣ ರೈತರು ಆಕ್ರೋಶಗೊಂಡು ವಿಷ ಕುಡಿಯುವ ಹಂತಕ್ಕೆ ಹೋಗಿದ್ದಾರೆ.

ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಿಗೆ ಸೇರಿದ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸುತ್ತಿರುವ ರೈತರು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಈ ನಡುವೆ ಸರ್ಕಾರ ಮೂರು ಗ್ರಾಮಗಳನ್ನು ಹೊರತುಪಡಿಸಿ ಉಳಿದ ಗ್ರಾಮಗಳ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಎಲ್ಲಾ ಸಿದ್ಧತೆಗಳು ಮಾಡಿಕೊಂಡಿದೆ ಎಂದು ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡು, ಸರ್ಕಾರದ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದು, ಗುರುವಾರ ಅನ್ನಕ್ಕೆ ವಿಷ ಬೆರೆಸಿಕೊಂಡು ತಿನ್ನಲು ಮುಂದಾದಾಗ ಪೊಲೀಸರು ತಕ್ಷಣ ತಡೆದದ್ದರಿಂದ ಭಾರಿ ಅನಾಹುತ ತಪ್ಪಿದೆ. ವೆಂಕಟೇಶಪ್ಪ ಎಂಬ ರೈತ ವಿಷ ಮಿಶ್ರಿತ ಅನ್ನ ತಿಂದು, ತೀವ್ರ ಅಸ್ವಸ್ಥನಾಗಿದ್ದು, ಸೂಕ್ತ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೂಸ್ವಾಧೀನದ ವಿಚಾರವಾಗಿ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಚರ್ಚೆ ನಡೆಸಲು ಬೆಂಗಳೂರಿಗೆ ಹೊರಟಿದ್ದ ರೈತರನ್ನು, ಪೊಲೀಸರು, ಚನ್ನರಾಯಪಟ್ಟಣದಲ್ಲೆ ತಡೆದದ್ದರಿಂದ ಆಕ್ರೋಶಗೊಂಡಿದ್ದ ರೈತರು ಮತ್ತು ಪೊಲೀಸರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಯಿತು. ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಬೆಂಗಳೂರಿನ ಕಡೆಗೆ ಹೋಗದಂತೆ ರೈತರನ್ನು ತಡೆದು ನಿಲ್ಲಿಸುತ್ತಿದ್ದಂತೆ ಅಕ್ರೋಶಗೊಂಡ ರೈತರು, ತಾವು ಪ್ರಯಾಣಕ್ಕಾಗಿ ಸಿದ್ಧಪಡಿಸಿಕೊಂಡಿದ್ದ ಅನ್ನದ ಪಾತ್ರೆಗೆ ವಿಷ ಬೆರೆಸಿ ತಿನ್ನಲು ಮುಂದಾಗಿದ್ದಾರೆ. ಈ ವೇಳೆ ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಪೊಲೀಸ್ ಸಿಬ್ಬಂದಿಯ ಮುಂಜಾಗ್ರತೆಯಿಂದಾಗಿ ಹೆಚ್ಚು ಮಂದಿ ರೈತರು ವಿಷ ಮಿಶ್ರಿತ ಅನ್ನ ತಿನ್ನದಂತೆ ತಡೆದಿದ್ದಾರೆ.

ಯಾವುದೇ ಕಾರಣಕ್ಕೂ ನಾವು ಜೀವನ ರೂಪಿಸಿಕೊಂಡಿರುವ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಡಿ, ಈಗಾಗಲೇ ಸ್ವಾಧೀನವಾಗಿರುವ ಭೂಮಿಯನ್ನು ಕೈಗಾರಿಕೆಗಳಿಗಾಗಿ ಉಪಯೋಗ ಮಾಡಿಕೊಳ್ಳಲಿ. ಹಿಂದೆ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಲ್ಲಿ ಇದುವರೆಗೂ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಪುನಃ 1777 ಎಕರೆ ಪ್ರದೇಶದಲ್ಲಿನ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದೇಕೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡದಿದ್ದರೆ ನಮ್ಮ ಹೋರಾಟ ಉಗ್ರವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ಫೋಟೋ: ಚನ್ನರಾಯಪಟ್ಟಣ ಹೋಬಳಿಯ ರೈತರು ಅನ್ನಕ್ಕೆ ವಿಷ ಬೆರೆಸಿ ತಿನ್ನಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.