ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರೈತರ ಬೆಳೆ ನಾಶವಾಗಿದ್ದಕ್ಕೆ ಬೆಳೆ ವಿಮೆ ಪರಿಹಾರ ಹಾಕುವಂತೆ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸಿದರೂ ವಿಮೆ ಹಾಕದ ಜಿಲ್ಲಾಡಳಿತದ ವಿರುದ್ಧ ರೈತಸಂಘದ ಕಾರ್ಯಕರ್ತರು ಪೊರಕೆ ಚಳವಳಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.ಪಟ್ಟಣದ ತಾಲೂಕು ಕಚೇರಿ ಮುಂದೆ ಬೆಳೆ ವಿಮೆ ಹಣ ಹಾಗೂ ಮಳೆ, ಗಾಳಿಗೆ ಆದ ಬೆಳೆ ನಷ್ಟಕ್ಕೆ ಪರಿಹಾರ ವಿತರಿಸಬೇಕು ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ನೇತೃತ್ವದಲ್ಲಿ ಕಳೆದ ಐದು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆಗೆ ಕಿಂಚಿತ್ತು ಬೆಲೆ ಕೊಡದ ಜಿಲ್ಲಾಡಳಿತದ ವಿರುದ್ಧ ರೈತಸಂಘದ ಕಾರ್ಯಕರ್ತರು ಪಟ್ಟಣದ ಹಳೆಯ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪಟ್ಟಣದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಪೊರಕೆ ಹಿಡಿದು ಪ್ರತಿಭಟಿಸಿ ಜಿಲ್ಲಾಡಳಿತದ ವಿರುದ್ಧ ದಿಕ್ಕಾರ ಕೂಗಿದರು.ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಕಳದೈದು ದಿನಗಳಿಂದ ರೈತರು ನಾನಾ ಬೇಡಿಕೆ ಈಡೇರಿಸಬೇಕು ಎಂದು ರೈತಸಂಘ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಧರಣಿ ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸಿಲ್ಲ ಎಂದು ಗುಡುಗಿದರು.ರೈತರ ಬೇಡಿಕೆ ಈಡೇರಿಸದ ಜಿಲ್ಲಾಡಳಿತ ಇದ್ದರೆಷ್ಟು ಹೋದರೆಷ್ಟು ಎಂದು ಕುಟುವಾಗಿ ಖಂಡಿಸಿದರಲ್ಲದೆ ಮೊದಲ ಹಂತದಲ್ಲಿ ಪೊರಕೆ ಚಳವಳಿ ನಡೆಸುತ್ತಿದ್ದೇವೆ. ಇದಕ್ಕೂ ಬಗ್ಗದಿದ್ದಲ್ಲಿ ಹೋರಾಟದ ಸ್ವರೂಪ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪೊರಕೆ ಚಳವಳಿಯಲ್ಲಿ ರೈತಸಂಘದ ಹಂಗಳ ದಿಲೀಪ್, ಮಾಧು, ಶಿವಣ್ಣ, ಮಹೇಂದ್ರ, ಲೋಕೇಶ್, ರಘು, ನಾಗರಾಜಪ್ಪ, ಯುವ ಘಟಕದ ಅಧ್ಯಕ್ಷ ಭರತ್ ಸೇರಿದಂತೆ ಹಲವರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))