ಸೆಸ್ಕಾಂ ನೌಕರರ ಅನಗತ್ಯ ಒತ್ತಡ ನಿಲ್ಲಿಸುವಂತೆ ರೈತ ಸಂಘ ಆಗ್ರಹ

| Published : Sep 12 2024, 01:53 AM IST

ಸಾರಾಂಶ

ಸುಟ್ಟು ಹೋದ ಟಿ.ಸಿ ಬದಲಿಸಿಕೊಡಲು ಇಲಾಖೆ ಸೆಕ್ಷನ್ ಆಫೀಸರುಗಳು ಆರ್.ಆರ್ ನಂಬರಿಗೆ ಅಧಾರ್ ಲಿಂಕ್ ಆಗಿದ್ದರೆ ಮಾತ್ರ ಟಿಸಿ ಬದಲಿಸುವುದಾಗಿ ಹೇಳುತ್ತಾರೆ. ಆಧಾರ್ ಲಿಂಕ್ ಕಡ್ಡಾಯ ಎನ್ನುವ ನಿಯಮ ಎಲ್ಲಿದೆ..?

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಗತ್ಯ ವಿದ್ಯುತ್ ಪರಿವರ್ತಕಗಳನ್ನು ನೀಡಲು ವಿದ್ಯುತ್ ಮೀಟರ್‌ಗಳ ಆರ್.ಆರ್ ನಂಬರಿಗೆ ಆಧಾರ್ ಜೋಡಣೆ ಮಾಡುವಂತೆ ತಾಲೂಕಿನ ವಿದ್ಯುತ್ ಇಲಾಖೆ ನೌಕರರು ರೈತರಿಗೆ ಅನಗತ್ಯ ಒತ್ತಡ ಹಾಕುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪಟ್ಟಣದ ಸೆಸ್ಕಾಂ ಉಪ ವಿಭಾಗದ ಕಚೇರಿಯ ಜಿಲ್ಲಾ ಕಾರ್ಯಪಾಲಕ ಅಭಿಯಂತರ ರಮೇಶ್ ಅವರನ್ನು ಭೇಟಿ ಮಾಡಿದ ರೈತರು ಆರ್.ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆಯನ್ನು ಕೈಬಿಡುವಂತೆ ಆಗ್ರಹಿಸಿದರು.

ಸುಟ್ಟು ಹೋದ ಟಿ.ಸಿ ಬದಲಿಸಿಕೊಡಲು ಇಲಾಖೆ ಸೆಕ್ಷನ್ ಆಫೀಸರುಗಳು ಆರ್.ಆರ್ ನಂಬರಿಗೆ ಅಧಾರ್ ಲಿಂಕ್ ಆಗಿದ್ದರೆ ಮಾತ್ರ ಟಿಸಿ ಬದಲಿಸುವುದಾಗಿ ಹೇಳುತ್ತಾರೆ. ಆಧಾರ್ ಲಿಂಕ್ ಕಡ್ಡಾಯ ಎನ್ನುವ ನಿಯಮ ಎಲ್ಲಿದೆ ಎಂದು ಪ್ರಶ್ನಿಸಿದರು.

ತಾಲೂಕಿನ ಬಹುತೇಕ ಕಡೆ ವಿದ್ಯುತ್ ಲೈನ್‌ಗಳು ತುಂಡಾಗಿ ಕೆಳಗೆ ಬಿದ್ದು ಅಮಾಯಕ ರೈತರು ಮತ್ತು ಜಾನುವಾರುಗಳು ಬಲಿಯಾಗುತ್ತಿವೆ. ಹಳೆಯ ವಿದ್ಯುತ್ ವಾಹಕಗಳನ್ನು ಬದಲಿಸುತ್ತಿಲ್ಲ. ಲಿಂಗಾಪುರ ಬಳಿ ಕಂಬಗಳನ್ನು ಅಳವಡಿಸಿ ಒಂದು ತಿಂಗಳಾಗಿದೆ. ಕಂಬದಲ್ಲಿನ ವಿದ್ಯುತ್ ತಂತಿಗಳನ್ನು ಎಳೆದು ಸಮರ್ಪಕವಾಗಿ ಬಿಗಿಗೊಳಿಸದೆ ಇರುವ ಕಾರಣ ವಿದ್ಯುತ್ ತಂತಿಗಳು ಜೋತು ಬಿದ್ದಿವೆ ಎಂದರು.

ಸುಟ್ಟು ಹೋದ ಟಿ.ಸಿ.ಗಳನ್ನು ಇಲಾಖೆ ವೆಚ್ಚದಲ್ಲಿಯೇ ರಿಪೇರಿ ಮಾಡಿಸಿ ಅಳವಡಿಸಿಕೊಡಬೇಕು. ಆದರೆ, ಕೆಲವು ಸಿಬ್ಬಂದಿ ಸುಳ್ಳು ಹೇಳಿ ಖಾಸಗಿಯವರ ಬಳಿಗೆ ರೈತರನ್ನು ಕಳುಹಿಸಿ ಸುಲಿಗೆ ಮಾಡುತ್ತಿದ್ದಾರೆ. ತಕ್ಷಣ ರೈತರ ಶೋಷಣೆ ನಿಲ್ಲಬೇಕು. ಲೈನ್‌ಮೆನ್‌ಗಳ ಸಭೆ ಕರೆದು ಸುಟ್ಟು ಹೋದ ಟಿ.ಸಿಗಳನ್ನು ರಿಪೇರಿಗಾಗಿ ಖಾಸಗಿಯವರ ಬಳಿಗೆ ನೀಡದಂತೆ ಎಚ್ಚರಿಸುವಂತೆ ಆಗ್ರಹಿಸಿದರು.

ಕಾರ್ಯಪಾಲಕ ಅಭಿಯಂತರ ರಮೇಶ್ ಮಾತನಾಡಿ, ಆರ್.ಆರ್ ನಂಬರಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ. ಆದರೆ, ಸರ್ಕಾರದ ಸಹಾಯಧನ ಪಡೆಯಬೇಕಾದರೆ ಆಧಾರ್ ಲಿಂಕ್ ಆಗೇಕು. ಸುಟ್ಟು ಹೋದ ಟಿ.ಸಿ ಗಳನ್ನು 24 ಗಂಟೆಯೊಳಗೆ ರಿಪೇರಿ ಮಾಡಿಸಲಾಗುವುದು. ಈ ಬಗ್ಗೆ ಎಲ್ಲಾ ಸೆಕ್ಷನ್ ಅಫೀಸರುಗಳಿಗೂ ಕಟ್ಟು ನಿಟ್ಟಿನ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ರೈತ ಮುಖಂಡರಾದ ಸ್ವಾಮೀಗೌಡ, ಮಹೇಶ್, ನಗರೂರು ಕುಮಾರ್, ನರಸಿಂಹೇಗೌಡ, ರಮೇಶ್, ಪುನೀತ್ ಸೇರಿದಂತೆ ಇದ್ದರು.