ಮೊಬೈಲ್ ಆ್ಯಪ್ ಮೂಲಕ ಪ್ರತಿನಿಧಿಗಳ ನೋಂದಣಿಗೆ ಅವಕಾಶ: ಶಾಸಕ ಎಚ್.ಟಿ.ಮಂಜು

| Published : Sep 12 2024, 01:52 AM IST / Updated: Sep 12 2024, 01:53 AM IST

ಮೊಬೈಲ್ ಆ್ಯಪ್ ಮೂಲಕ ಪ್ರತಿನಿಧಿಗಳ ನೋಂದಣಿಗೆ ಅವಕಾಶ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಬೆಲ್ಲ, ಸಕ್ಕರೆ ನೀಡಲು ಸಲಹೆ ನೋಂದಾಯಿತ ಪ್ರತಿನಿಧಿಗಳಿಗೆ ಸಮ್ಮೇಳನದ ವತಿಯಿಂದ ನೀಡಲಾಗುವ ಕೊಡುಗೆಗಳನ್ನು ಜಿಲ್ಲಾವಾರು ಕೌಂಟರ್‌ಗಳನ್ನು ತೆರೆದು ವಿತರಿಸಲು ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಶಾಸಕರು ಅನುಮೋದಿಸಿ ಕ್ರಮ ತೆಗೆದುಕೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ನೋಂದಣಿ ಮತ್ತು ಸ್ವಚ್ಛತಾ ಸಮಿತಿ ಅಧ್ಯಕ್ಷರಾದ, ಶಾಸಕ ಎಚ್.ಟಿ.ಮಂಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನೋಂದಣಿ ಹಾಗೂ ಸ್ವಚ್ಛತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನೋಂದಣಿ ಮಾಡಿಕೊಳ್ಳಲು ಪ್ರತ್ಯೇಕ ಮೊಬೈಲ್ ಆ್ಯಪ್ ರಚಿಸುವ ಜೊತೆಗೆ ಅನಿವಾರ್ಯ ಸಂದರ್ಭಗಳಲ್ಲಿ ಆಫ್‌ಲೈನ್‌ನಲ್ಲೂ ನೋಂದಣಿ ಮಾಡಿಕೊಂಡು ಕಸಾಪದಿಂದ ಆನ್ ಲೈನ್ ನ್‌ಗೆ ಪರಿವರ್ತಿಸಲಾಗುವುದು ಎಂದರು.

ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಪ್ರತಿನಿಧಿ ಶುಲ್ಕ ನಿಗದಿಪಡಿಸಿ ಆನ್ ಲೈನ್‌ನಲ್ಲೇ ಪಡೆಯಲಾಗುವುದು. ನೋಂದಣಿ ಸಂದರ್ಭದಲ್ಲೇ ವಸತಿ ಅಗತ್ಯವಿರುವವರ ಮಾಹಿತಿ ಪಡೆದುಕೊಳ್ಳಲಾಗುವುದು. ಮೊದಲು ನೋಂದಾಯಿಸಿ ಕೊಂಡವರಿಗೆ ಆದ್ಯತೆ ಮೇಲೆ ವಸತಿ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.

ಪ್ರತಿನಿಧಿಗಳಿಗೆ ವಸತಿ ಬಗ್ಗೆ ಮಾರ್ಗದರ್ಶನ ಮಾಡಲು ನೋಡಲ್ ಅಧಿಕಾರಿಗಳನ್ನಾಗಿ ಸಮಿತಿ ಸದಸ್ಯರನ್ನು ನೇಮಕ, ಸೌಲಭ್ಯ ಒದಗಿಸುವ ದೃಷ್ಟಿಯಿಂದ ಅಂತಿಮ ದಿನಾಂಕ ನಿಗದಿ ಮಾಡಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದು ಎಂದರು.

ಸರ್ಕಾರಿ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರ ಗೊಂದಲ ತಪ್ಪಿಸಲು ಸಮ್ಮೇಳನಕ್ಕೆ ಹಾಜರಾಗುವ ಪ್ರತಿನಿಧಿಗಳಿಗೆ ಆನ್ ಲೈನ್ ಮೂಲಕವೇ ಹಾಜರಾತಿ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಮಂಡ್ಯ ಬೆಲ್ಲ, ಸಕ್ಕರೆ ನೀಡಲು ಸಲಹೆ ನೋಂದಾಯಿತ ಪ್ರತಿನಿಧಿಗಳಿಗೆ ಸಮ್ಮೇಳನದ ವತಿಯಿಂದ ನೀಡಲಾಗುವ ಕೊಡುಗೆಗಳನ್ನು ಜಿಲ್ಲಾವಾರು ಕೌಂಟರ್‌ಗಳನ್ನು ತೆರೆದು ವಿತರಿಸಲು ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಶಾಸಕರು ಅನುಮೋದಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

3 ದಿನಗಳ ಸಮ್ಮೇಳನದಲ್ಲಿ ಪ್ಲಾಸ್ಟಿಕ್ ಹಾಗೂ ಧೂಳು ಮುಕ್ತ ಧ್ಯೇಯವನ್ನು ಹೊಂದಿದ್ದು, ಸ್ವಚ್ಛತೆ ಕಾಪಾಡುವುದು ಅತೀ ಮುಖ್ಯ. ನೀರಿನ ವ್ಯವಸ್ಥೆ ಅಗತ್ಯವಾಗಿರಬೇಕು ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಮಾತನಾಡಿ ಸಮ್ಮೇಳನದಲ್ಲಿ ಅಡುಗೆ ಮನೆ, ವೇದಿಕೆ ಕಾರ್ಯಕ್ರಮ, ಶೌಚಾಲಯ, ಪಾರ್ಕಿಂಗ್ ಸ್ಥಳಗಳಲ್ಲಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ನಿಯೋಜಿಸಬೇಕು. ಅವರಿಗೆ ಮಾಸ್ಕ್, ಟೀ ಶರ್ಟ್ ನೀಡಬೇಕು. ಸಮ್ಮೇಳನ ನಡೆಯುವ ಜಾಗದ ಸುತ್ತ ಮುತ್ತಲೂ ಅಲ್ಲಲ್ಲೇ ಕಸದ ಬುಟ್ಟಿಗಳನ್ನು ಇಡಬೇಕು ಎಂದರು.

ಸಭೆಯಲ್ಲಿ ಎಸಿ ಶಿವಮೂರ್ತಿ, ಸಮ್ಮೇಳನ ಸಮನ್ವಯ ಸಮಿತಿ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಜಿ.ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ವಿಶೇಷಾಧಿಕಾರಿ ಚಂದ್ರಶೇಖರ್, ಸದಸ್ಯರಾದ ಮಂಗಲ ಎಂ.ಇ. ಶಿವಣ್ಣ, ಬಿ.ಜಿ.ಉಮಾ, ರಮೇಶ್ ಹಿರೇಮರಳಿ, ಕೆ.ಪರಮೇಶ್,ಎಸ್.ಮಂಜು, ಸಮಾಜ ಸೇವಕ ವಿಜಯಕುಮಾರ್ ಮುಂತಾದವರು ಇದ್ದರು.