ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಲವಾರು ದಿನಗಳಿಂದ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಕುಡಿಯುವ ನೀರಿಗೆ ನಿರ್ಧಿಷ್ಟ ಯೋಜನೆ ರೂಪಿಸಿಕೊಳ್ಳದೇ ಇರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ಪಟ್ಟಣದ ಸೋಮೇಶ್ವರ ನೂಲಿನ ಗಿರಣಿಯ ಹತ್ತಿರ ಇರುವ ಓವರ್ ಹೆಡ್ ಟ್ಯಾಂಕ್ ಗೆ ಭೇಟಿ ನೀಡಿ ನಂತರ ಮಾತನಾಡಿದರು.ಕಳೆದ 7-8 ವರ್ಷಗಳ ಹಿಂದೆ ಸೋಮೇಶ್ವರ ನೂಲಿನ ಗಿರಣಿಯ ಜಾಗೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಸಂಗ್ರಹ ಮಾಡಲು ಮತ್ತು ಪೂರೈಸಲು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದರೂ ಇದುವರೆಗೂ ತುಂಗಭದ್ರಾ ನದಿ ನೀರು ಈ ಟ್ಯಾಂಕ್ ಗೆ ಬಂದಿಲ್ಲ, ಈ ಟ್ಯಾಂಕ್ ನಿಷ್ಪ್ರಯೋಜಕವಾಗುವಂತೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಆದ್ದರಿಂದ ಶೀಘ್ರದಲ್ಲಿ ಈ ಟ್ಯಾಂಕ್ ಗೆ ನೀರು ತುಂಬಿಸುವ ಕಾರ್ಯ ಮಾಡಬೇಕು, ಪುರಸಭೆಯ ಸಾಮಾನ್ಯ ನಿಧಿಯಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 5 ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕ್ ಹಾಳಾಗಿ ಹೋಗುತ್ತಿದ್ದು, ಈ ಟ್ಯಾಂಕ್ ಗೆ ನೀರು ತುಂಬಿಸಿ ಪಟ್ಟಣದ ಜನತೆಗೆ ಕುಡಿಯುವ ನೀರು ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಗಳ ದೂರ ದೃಷ್ಟಿಯ ಕೊರತೆ ಹಾಗೂ ನೀರು ಬೀಡುವ ವಾಲ್ ಮನ್ನ್ ಗಳಲ್ಲಿ ವೇಳೆಯ ಹೊಂದಾಣಿಕೆಯ ಕೊರತೆ ಜತೆಯಲ್ಲಿ ನೀರಿನ ಪೖೆಪ್ ಗಳು ಶಿಥಿಲಗೊಂಡು ಹಾಳಾಗಿ ಹೋಗಿವೆ ಹೀಗಾಗಿ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. ಸರ್ಕಾರ ಕುಡಿವ ನೀರಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು.ಅದಕ್ಕೆ ಹಣಕಾಸಿನ ಯಾವುದೇ ಕೊರತೆ ಇರುವುದಿಲ್ಲಕುಡಿಯುವ ನೀರಿಗಾಗಿ ಪುರಸಭೆಯ ಸಾಮಾನ್ಯ ನಿಧಿಯಲ್ಲಿ ಬೇಕಾ ಬಿಟ್ಟಿ ಖರ್ಚು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಕುಡಿವ ನೀರಿನ ಪೈಪ್ ಲೈನ್ ದುರಸ್ತಿಗಾಗಿ ಮಾಡುವ ಖರ್ಚುಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು, ಅಲ್ಲದೆ ದುರಸ್ತಿ ಕಾಮಗಾರಿ ಮಾಡುವ ಮುನ್ನ ಆಯಾ ವಾರ್ಡ್ ಗಳ ಸದಸ್ಯರ ಗಮನಕ್ಕೆ ತಂದು ಹಾಗೂ ಆ ಸದಸ್ಯರ ಸಹಿ ಪಡೆದು ದುರಸ್ತಿ ಮಾಡಿಸಬೇಕು, ಇದರಿಂದ ಅನಾವಶ್ಯಕವಾಗಿ ಹಣ ಪೋಲಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ₹85 ಕೋಟಿ ವೆಚ್ಚದಲ್ಲಿ ಹೊಸ ಪೈಪ್ ಲೈನ್ ಅಳವಡಿಕೆ ಕುರಿತು ಕ್ರಿಯಾ ಯೋಜನೆ ತಯಾರಿಸಿ ಸಂಬಂಧಿಸಿದ ಇಲಾಖೆಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡುವ ಮೂಲಕ ಅದಕ್ಕೆ ಬೇಕಾದ ಹಣಕಾಸು ನೆರವು ಪಡೆಯುವಲ್ಲಿ ಕಾರ್ಯೋನ್ಮುಖವಾಗಿದ್ದೇನೆ, ಶೀಘ್ರದಲ್ಲಿ ಅದಕ್ಕೆ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.ಈ ವೇಳೆ ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಮಹಾದೇವಪ್ಪ ಅಣ್ಣಿಗೇರಿ, ನೀಲಪ್ಪ ಹತ್ತಿ, ಸೋಮೇಶ್ವರ ನೂಲಿನ ಗಿರಣಿಯ ಅಧ್ಯಕ್ಷ ಪುಲಕೇಶಿ ಉಪನಾಳ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಆರೋಗ್ಯಾಧಿಕಾರಿ ಮಂಜುನಾಥ ಮುದಗಲ್ಲ, ಹನಮಂತ ನಂದೆಣ್ಣವರ, ಬಸವರಾಜ ಕುಂಬಾರ ಸೇರಿದಂತೆ ಅನೇಕರು ಇದ್ದರು.