ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಸಕ್ತ ಯುನಿಕೋಡ್ ಅನುಮೋದನೆ ದೊರಕಿರುವುದು ತುಳು ತಿಗಳಾರಿ ಲಿಪಿಗೆ ಮಾತ್ರವೇ ಹೊರತು ತುಳು ಲಿಪಿಗೆ ಅಲ್ಲ. ತುಳು ಲಿಪಿಗೂ ಶೀಘ್ರ ಯುನಿಕೋಡ್ ಅನುಮೋದನೆ ದೊರೆಯುವ ಅಗತ್ಯವಿದೆ ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಲಿಪಿಗೂ, ತುಳು ತಿಗಳಾರಿ ಲಿಪಿಗೂ ಶೇ.25ರಷ್ಟು ವ್ಯತ್ಯಾಸವಿದೆ. ಕನ್ನಡ ಮತ್ತು ತೆಲುಗು ಲಿಪಿಗಳಿಗೆ ಸಾಮ್ಯತೆಗಳಿರುವಂತೆ, ಇವೆರಡು ಲಿಪಿಗಳಿಗೂ ಸಾಮ್ಯತೆಗಳಿವೆ. ಇವೆರಡೂ ಒಂದೇ ಅಲ್ಲ ಎಂದು ಸ್ಪಷ್ಟಪಡಿಸಿದರು.
ತುಳು ಭಾಷೆಯು ಅಧಿಕೃತ ರಾಜ್ಯಭಾಷೆ ಆಗಬೇಕಾದರೆ ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕಾದರೆ ತುಳು ಲಿಪಿಗೆ ಯೂನಿಕೋಡ್ ಮಾನ್ಯತೆ ಸಿಗುವುದೂ ಒಂದು ಮಾನದಂಡವಾಗಿದೆ. ಈ ಕಾರ್ಯ ಶೀಘ್ರವಾಗಿ ಆಗಬೇಕು. ತುಳು ಅಕಾಡೆಮಿಯ ಜವಾಬ್ದಾರಿಗಳಲ್ಲಿ ಇದೂ ಒಂದು ಎಂದರು.ಯು.ಬಿ. ಪವನಜ ಅವರು ತುಳು ಲಿಪಿ ಯೂನಿಕೋಡ್‌ಗೆ ಕೇವಲ ಪ್ರಸ್ತಾವನೆ ಮಾತ್ರ ಕಳುಹಿಸಿದ್ದಾರೆ. ಉಳಿದ ಯಾವುದೇ ಕಾರ್ಯ ಮಾಡಿಲ್ಲ. ನಾನು ಅಕಾಡೆಮಿ ಅಧ್ಯಕ್ಷನಾಗಿದ್ದಾಗ 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಇ-ಗರ್ವನನ್ಸ್ ಕಾರ್ಯದರ್ಶಿಯಾಗಿದ್ದ ಬೇಲೂರು ಸುದರ್ಶನ ಅವರ ಸಹಕಾರದಿಂದ, ಡಾ.ಆಕಾಶ್ ರಾಜ್ ಜೈನ್ ಅವರ ಸತತ ಪರಿಶ್ರಮದಿಂದ ಯುನಿಕೋಡ್ ಕಾರ್ಯವನ್ನು ಮುಂದುವರಿಸಿದೆವು. ಜೈ ತುಳುನಾಡು ಸಂಘಟನೆಯ ಯುವಕರು ಇದರಲ್ಲಿ ಸಹಕರಿಸಿದ್ದಾರೆ. ಅಕಾಡೆಮಿಯ ಹಿಂದಿನ ಅಧ್ಯಕ್ಷ ಪ್ರೊ. ವಿವೇಕ ರೈ ಅವರಿಂದ ಹಿಡಿದು ನಮ್ಮ ಸಮಿತಿವರೆಗೆ ಈ ಬಗ್ಗೆ ನಿರಂತರ ಪ್ರಯತ್ನ ನಡೆಸಲಾಗಿದೆ. ಪ್ರಸಕ್ತ ತುಳು ಲಿಪಿ ಯೂನಿಕೋಡ್ ಸೇರ್ಪಡೆ ಕಾರ್ಯ ಸಂಪೂರ್ಣಗೊಳ್ಳಲು ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ. ಅದಕ್ಕೆ ಈಗಿನ ಅಕಾಡೆಮಿ ಅಧ್ಯಕ್ಷ ರು ಹಾಗೂ ಸದಸ್ಯರು ಪ್ರಯತ್ನಿಸಬೇಕು ಎಂದು ಕತ್ತಲ್‌ಸಾರ್ ಹೇಳಿದರು.
ತುಳು ಲಿಪಿಯನ್ನು ಯುನಿಕೋಡ್‌ಗೆ ಸೇರಿಸುವ ಪ್ರಯತ್ನ 2017ರಲ್ಲಿ ಆರಂಭಗೊಂಡಿದೆ. ಡಾ. ಪವನಜ ಆ ಕುರಿತಾಗಿ ಕೆಲಸ ಮಾಡುತ್ತಿದ್ದು, ಅವರನ್ನೇ ಮುಂದುವರಿಸುವುದೆಂದು ತೀರ್ಮಾನಿಸಿ ಅವರಿಗೆ ಜವಾಬ್ದಾರಿ ವಹಿಸಿ, ಸದಸ್ಯ ಸಂಚಾಲಕರಾಗಿ ಡಾ. ಆಕಾಶ್ ರಾಜ್ ಜೈನ್ ಜವಾಬ್ದಾರಿ ವಹಿಸಿಕೊಂಡರು. ಇದಕ್ಕೂ 10 ವರ್ಷ ಹಿಂದೆ ಬ್ರಾಹ್ಮಿಲಿಪಿ ಮೂಲದಿಂದ ಉತ್ತರ ಕನ್ನಡ ಭಾಗದಲ್ಲಿ ಪ್ರಚಲಿತವಿದ್ದ ತಿಗಳಾರಿ ಲಿಪಿಯನ್ನು ಯೂನಿಕೋಡಿಗೆ ಸೇರಿಸಲು ವೈಷ್ಣವಿ ಮೂರ್ತಿ, ವಿನೋದ್ ರಾಜ್ ಅವರು ಇಟ್ಟ ಬೇಡಿಕೆಯ ಪ್ರಯತ್ನಕ್ಕೆ ಯುನಿಕೋಡ್ ಕನ್ಸೋರ್ಟಿಯಂ ಕ್ಯಾಲಿಫೋರ್ನಿಯಾದಿಂದ ತುಳು ತಿಗಳಾರಿ ಲಿಪಿ ಎಂದು ಅನುಮೋದನೆ ಈಗ ನೀಡಲಾಗಿದೆ. ಅಕಾಡೆಮಿ ವತಿಯಿಂದ ನನ್ನ ಅಧ್ಯಕ್ಷತೆಯಲ್ಲಿ, ಸದಸ್ಯ ಸಂಚಾಲಕರಾಗಿರುವ ಡಾ. ಆಕಾಶ್ ರಾಜ್ ಜೈನ್ ಯೂನಿಕೋಡ್‌ನ ಜವಾಬ್ದಾರಿ ವಹಿಸಿಕೊಂಡರು. ಇದೀಗ ಈ ವಿಷಯದಲ್ಲಿ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಅದನ್ನು ಮುಂದುವರಿಸಬೇಕಿದೆ ಎಂದರು.ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ನಾಗೇಶ್ ಕುಲಾಲ್, ಜೈ ತುಳುನಾಡು ಅಧ್ಯಕ್ಷ ಉದಯ ಪೂಂಜ, ಸದಸ್ಯ ಕಿರಣ್ ಕೊಕುಡೆ ಇದ್ದರು.
ತುಳು ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ ಶ್ಲಾಘನೀಯ: ತಾರಾನಾಥ್‌ಕನ್ನಡಪ್ರಭ ವಾರ್ತೆ ಮಂಗಳೂರುತುಳು ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ ನೀಡಿರುವ ವಿಚಾರ ಈಗಾಗಲೇ ಪ್ರಕಟಗೊಂಡಿದೆ. ಸಂಶೋಧಕಿ ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರು ದಾಖಲೆ ಸಮೇತ ಸಲ್ಲಿಸಿದ ಪ್ರಸ್ತಾವನೆಗೆ ಈ ಅನುಮೋದನೆ ನೀಡಲಾಗಿದೆ ಎಂಬುದನ್ನು ಯುನಿಕೋಡ್ ತನ್ನ ಅಂತರ್ಜಾಲ ಮಾಹಿತಿಯಲ್ಲಿ ಉಲ್ಲೇಖಿಸಿದೆ. ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರ ಪ್ರಯತ್ನ ಶ್ಲಾಘನೀಯ. ಸುದೀರ್ಘ ಅವಧಿಯಲ್ಲಿ ಸಾಕಷ್ಟು ದಾಖಲೆಗಳನ್ನು ಲಗತ್ತಿಸಿ ಅವರು ಸಲ್ಲಿಸಿದ ಪ್ರಸ್ತಾವನೆಯ ಹಿಂದೆ ದೊಡ್ಡ ಪರಿಶ್ರಮ ಇದೆ ಎಂದು ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಶಂಸಿದ್ದಾರೆ.ಇದೇ ಸಂದರ್ಭದಲ್ಲಿ ಯುನಿಕೋಡ್‌ನಲ್ಲಿ ತುಳುವನ್ನು ಮಾತ್ರ ಉಲ್ಲೇಖಿಸಿ ಪ್ರತ್ಯೇಕವಾಗಿ ತುಳು ಎಂದಷ್ಟೇ ಉಲ್ಲೇಖಿಸಿ ಅನುಮೋದನೆ ನೀಡಬೇಕೆಂಬ ಪ್ರಸ್ತಾವನೆ, ಬೇಡಿಕೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರ ಇದೆ. ತುಳು-ತಿಗಾಳಾರಿ ನಡುವಿನ ಸಾಮ್ಯತೆ, ವ್ಯತ್ಯಾಸದ ಬಗ್ಗೆ ಭಾಷಾ ಪಂಡಿತರು, ಲಿಪಿ ತಜ್ಞರು ಈಗಾಗಲೇ ಸಾಕಷ್ಟು ಬರೆದಿದ್ದಾರೆ, ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈ ವಿಚಾರಗಳನ್ನು ಈ ಸಂದರ್ಭದಲ್ಲಿ ಗಮನದಲ್ಲಿರಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.