ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಕರಾಳ ದಿನದ ಹೆಸರಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು. ತಲೆಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶ ಹೊರ ಹಾಕಿದರು.ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಗಟ್ಟದ ಸಿದ್ದವೀರಪ್ಪ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಿಸುವುದರ ಹಿಂದೆ ಭವಿಷ್ಯದಲ್ಲಿ ರಾಜ್ಯ ಸರ್ಕಾರ ಮೀಟರ್ ಅಳವಡಿಸುವ ಹುನ್ನಾರವಿದೆ. ಸಾಕಷ್ಟು ಕೊಳವೆ ಬಾವಿಗಳು ಅಂತರ್ಜಲ ಕುಸಿತವಾಗಿ ಬತ್ತಿಹೋಗಿವೆ. ರೈತರು ಸಾಲ ಮಾಡಿ ಕೊಳವೆ ಬಾವಿ ಕೊರೆಯಿಸಿದರೂ ಫಲ ಸಿಗದಂತಾಗಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಬೆಸ್ಕಾಂ ಅಧಿಕಾರಿಗಳು ಈಗಾಗಲೇ ಶೇಕಡಾ 90 ರಷ್ಟು ಆಧಾರ್ ಜೋಡಣೆ ಕಾರ್ಯ ಮುಗಿಸಿದ್ದಾರೆ. ಲೈನ್ ಮ್ಯಾನ್ ಗಳು ಇದಕ್ಕಾಗಿ ಹಳ್ಳಿಗಳ ಸುತ್ತಿ ರೈತರಿಂದ ಆಧಾರ್ ಕಾರ್ಡ ಪಡೆದು ಜೋಡಿಸುತ್ತಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ಕೂಡಾ ಗಮನಿಸುತ್ತಿಲ್ಲವೆಂದು ದೂರಿದರು.ಭದ್ರಾ ಮೇಲ್ದಂಡೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಅನುದಾನ ಬಿಡುಗಡೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದಾಸೀನ ತೋರಿವೆ. ಉಭಯ ಸರ್ಕಾರಗಳು ಸಹಮತದೊಂದಿಗೆ ಕಾಮಗಾರಿಗೆ ವೇಗ ನೀಡಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸುವ ಭರವಸೆ ನೀಡಬೇಕೆಂದು ಆಗ್ರಹಿಸಿದರು.ಮಾತಿನ ಚಕಮಕಿ
ಇದಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಒಳ ಆವರಣ ಪ್ರವೇಶಿಸಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಬ್ಯಾರಿಕೇಡ್ ಗಳ ತಳ್ಳಿ ರೈತರು ಡಿಸಿ ಕಚೇರಿ ಸಮೀಪ ಆಗಮಿಸಿ ಧರಣಿ ಮಾಡಿದರು.ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಕೆ.ಟಿ.ತಿಪ್ಪೇಸ್ವಾಮಿ, ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಮರ್ಲೇಹಳ್ಳಿ ರವಿಕುಮಾರ್, ಜಿಲ್ಲಾ ಪೃಧಾನ ಕಾರ್ಯದರ್ಶಿ ನಿಜಲಿಂಗಪ್ಪ, ತಿಮ್ಮಣ್ಣ, ಈರಣ್ಣ, ರಾಜಪ್ಪ, ಬಸಪ್ಪ, ಪರದಪ್ಪ, ನಿರಂಜನ, ನಾಗರಾಜಪ್ಪ, ತಿಮ್ಮಾರೆಡ್ಡಿ, ಆಂಜನಪ್ಪ, ಶಿವಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಇತರೆ ಬೇಡಿಕೆಗಳು..
1) ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಿಸಲು ಬೋರ್ ವೆಲ್ ಮಾಲೀಕರು ದುಬಾರಿ ಹಣ ಪಡೆಯುತ್ತಿದ್ದು, ಸರ್ಕಾರವೇ ದರ ನಿಗದಿ ಮಾಡಬೇಕು. 2) ಅಧಿಕಾರಿಗಳು, ರಿಗ್ ಮಾಲೀಕರು ಮತ್ತು ರೈತರು ಒಳಗೊಂಡ ಸಮಿತಿ ರಚಿಸಬೇಕು.3) ಕೃಷಿ ಸಾಲ ಒತ್ತಾಯ ಪೂರ್ವಕವಾಗಿ ಬ್ಯಾಂಕ್‍ಗಳು ವಸೂಲಿ ಮಾಡಬಾರದು.ಎನ್ಓಸಿಗೆ ಶುಲ್ಕ ಸಂಗ್ರಹಿಸಬಾರದು. ಸಾಲ ನೀಡುವಾಗ ರೈತರನ್ನು ಸಿಬಿಲ್‍ನಿಂದ ಹೊರತುಪಡಿಸಬೇಕು.4) ಮೈಕ್ರೋ ಪೈನಾನ್ಸ್ ಕಂಪನಿಗಳ ಹಣಕಾಸು ವ್ಯವಹಾರದ ಮೇಲೆ ಸರ್ಕಾರಗಳು ನಿಯಂತ್ರಣ ಸಾಧಿಸಬೇಕು.5) ರೈತರ ಜಮೀನುಗಳ ದಾರಿ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು. ಪಹಣಿ ಮತ್ತು ಭೂ ದಾಖಲೆಗಳನ್ನು 5 ರು.ಗೆ ನೀಡಬೇಕು.